ನ್ಯೂಸ್

ಕೋರ್ಟ್ ಕಾಳಜಿ ಶ್ಲಾಘನೀಯ

ಕೋಲ್ಕತ ವೈದ್ಯೆ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಕೊನೆಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆಯನ್ನು ಆರಂಭಿಸಿದೆ. ಅಲ್ಲದೆ, ಈ ಅತ್ಯಾಚಾರ ಪ್ರಕರಣದ ವಿಷಯದಲ್ಲಿ ರಾಜಕೀಯ ಮಾಡಬೇಡಿ, ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸುಪ್ರೀಂಕೋರ್ಟ್ ಎಲ್ಲ ಪಕ್ಷಗಳಿಗೆ ತಾಕೀತು ಮಾಡಿರುವುದು ಸೂಕ್ತವಾಗಿಯೇ ಇದೆ. ನಮ್ಮಲ್ಲಿ ಎಂಥ ಗಂಭೀರ ಪ್ರಕರಣವನ್ನೂ, ಅಮಾನವೀಯ ಘಟನೆಯನ್ನೂ ರಾಜಕೀಯ ದೃಷ್ಟಿಯಿಂದ ನೋಡುವ, ಇಂಥ ವಿಷಯದಲ್ಲೂ ಆರೋಪ- ಪ್ರತ್ಯಾರೋಪಕ್ಕೆ ಇಳಿಯುವ ಕೆಟ್ಟ ಚಾಳಿ ಬೆಳೆದಿದೆ. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರತಿಪಕ್ಷ ನಾಯಕರ ನಡುವಿನ ವಾಕ್ ಸಮರ ಹೇಸಿಗೆ ಮೂಡಿಸುವಂತಿದೆ.

ಕೋಲ್ಕತ ಅತ್ಯಾಚಾರ ಪ್ರಕರಣವನ್ನು ಸ್ವಯಂಸ್ಪೂರ್ತಿಯಿಂದ ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಸಮಾಜದೆಡೆಗೆ ಸುಪ್ರೀಂ ಕೋರ್ಟ್ ಹೊಂದಿರುವ ಕಳಕಳಿಗೆ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪಿಡುಗಿಗೆ ಈ ಬಾರಿ ಒಂದು ರ್ತಾಕ ಅಂತ್ಯ ಕಾಣಿಸಬೇಕೆಂಬ ಛಲ ಕೋರ್ಟ್ ವಿಚಾರಣೆಯಲ್ಲಿ ಕಾಣಿಸುತ್ತಿದೆ. ನ್ಯಾಯಮೂರ್ತಿಗಳು ಸಂಬಂಧಪಟ್ಟ ಸಂಸ್ಥೆಗಳಿಗೆ, ಸರ್ಕಾರಗಳಿಗೆ ಚಾಟಿ ಬೀಸುತ್ತಿರುವ ಪರಿ ಎಲ್ಲರನ್ನೂ ಬಡಿದೆಚ್ಚರಿಸುವಂತಿದೆ. ಇದು ಕೇವಲ ಕೋಲ್ಕತ ಘಟನೆಗೆ ಸಂಬಂಧಪಟ್ಟ ವಿಷಯ ಎಂದು ಯಾರೂ ಭಾವಿಸುವುದು ಬೇಡ. ದೇಶಾದ್ಯಂತ ಹರಡಿಕೊಂಡಿರುವ ಪಿಡುಗು ಇದು. ಹಾಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಂಬಂಧಿಸಿದ ಸಂಸ್ಥೆಗಳು ಸುಪ್ರೀಂಕೋರ್ಟಿನ ಕಾಳಜಿಗೆ ಪೂರಕವಾಗಿ ಸ್ಪಂದಿಸುವುದು ಅವಶ್ಯಕವಾಗಿದೆ. ಆದರೆ, ಉಳಿದ ತನಿಖಾ ಸಂಸ್ಥೆಗಳ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ನಿಜಕ್ಕೂ ಬೇಸರ ತರಿಸುವಂಥದ್ದು. ಎಫ್​ಐಆರ್ ದಾಖಲಿಸಲು ವಿಳಂಬವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ‘ಇನ್ನೊಂದು ಅತ್ಯಾಚಾರ ಪ್ರಕರಣ ನಡೆಯುವರೆಗೆ ಸುಮ್ಮನಿರಬೇಕೆ?’ ಎಂದು ಖಾರವಾಗಿ ಪ್ರಶ್ನಿಸಿದೆ. ಅಲ್ಲದೆ, ಈ ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ರಸ್ತೆಗಿಳಿದು ಪ್ರತಿಭಟನೆ ನಡೆಸಿರುವುದು ಚೋದ್ಯವೇ ಸರಿ. ಅತ್ಯಾಚಾರ ಘಟನೆ ನಡೆದಿರುವ ಕೋಲ್ಕತದ ಆರ್​ಜಿ ಕರ್ ಆಸ್ಪತ್ರೆಯಲ್ಲಿ ಸಾಕ್ಷ್ಯಗಳನ್ನು ನಾಶಪಡಿಸುವ ಯತ್ನ ನಡೆಸಲಾಗಿದೆ ಎಂದು ಸಿಬಿಐ ಆರೋಪಿಸಿರುವುದು ಗಂಭೀರ ವಿಷಯ. ಘಟನೆ ನಡೆದ ಆಗಸ್ಟ್ 9ರಂದು ಮತ್ತು ನಂತರದ ನಾಲ್ಕು ದಿನಗಳಲ್ಲಿ ಸಾಕ್ಷ್ಯನಾಶದ ಪ್ರಯತ್ನಗಳು ನಡೆದಿರುವುದಾಗಿ ಸಿಬಿಐ ಹೇಳಿದೆ. ಹಾಗಾಗಿ, ಪ್ರಕರಣದ ತನಿಖೆ ರ್ತಾಕ ಅಂತ್ಯ ಕಾಣಬೇಕಿದ್ದು, ಅತ್ಯಾಚಾರ ಹಾಗೂ ಮಹಿಳೆಯರ ವಿರುದ್ಧ ಇತರ ಅಪರಾಧಗಳ ವಿರುದ್ಧವು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಎಲ್ಲ ಗಂಭೀರ ಘಟನೆಗಳ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಅನಿವಾರ್ಯವಾಗುತ್ತಿದ್ದು, ಸಂಬಂಧಪಟ್ಟ ಸರ್ಕಾರ ಮತ್ತು ವ್ಯವಸ್ಥೆ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗುತ್ತಿವೆ ಎಂಬುದಕ್ಕೆ ನಿದರ್ಶನವೂ ಹೌದು. ಅಲ್ಲದೆ, ‘ಪ್ರತಿಭಟನಾ ನಿರತ ವೈದ್ಯರು ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಮತ್ತೆ ಹಾಜರಾಗಬೇಕು. ಕೆಲಸಕ್ಕೆ ಮರಳಿದರೆ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿರುವುದರಿಂದ, ವೈದ್ಯರು ಕಳೆದ 11 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೊನೆಗೊಳಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಮೂಲಕ ವೈದ್ಯಕೀಯ ಸೇವೆ ಸಹಜ ಸ್ಥಿತಿಗೆ ಮರಳಲಿದ್ದು, ಜನರ ಪರದಾಟ ತಪ್ಪಲಿರುವುದು ಸಮಾಧಾನಕರ ಸಂಗತಿ.