ನ್ಯೂಸ್

ಆತಂಕ ಬೇಡ, ಎಚ್ಚರವಿರಲಿ; ಮತ್ತೆ ಹೆಚ್ಚುತ್ತಿರುವ ಕರೊನಾ ಪ್ರಕರಣಗಳು

Webdesk - Ravikanth

ಕರೊನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ ಎಂದು ಸಮಾಧಾನ ಪಡುವಷ್ಟರಲ್ಲೇ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಭಾರತದಲ್ಲಿ ಗುಣಮುಖಗೊಂಡ ರೋಗಿಗಳ ಸಂಖ್ಯೆ ಗಣನೀಯವಾಗಿದೆಯಾದರೂ, ಈ ಎರಡು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಸೋಂಕು ಪ್ರಸರಣ ಇತರ ರಾಜ್ಯಗಳಲ್ಲೂ ಮತ್ತೆ ವೇಗ ಪಡೆದುಕೊಂಡರೆ ಉಂಟಾಗುವ ಸ್ಥಿತಿ ಶೋಚನೀಯ. ಕರ್ನಾಟಕವೂ ಸೇರಿ ಬಹುತೇಕ ರಾಜ್ಯಗಳಲ್ಲಿ ಕರೊನಾ ಎರಡನೇ ಅಲೆ ಕಾಣಿಸಿಕೊಂಡಿಲ್ಲ ಎಂಬುದನ್ನು ತಜ್ಞರು ಖಚಿತ ಪಡಿಸಿದ್ದು, ಸೋಂಕಿನ ಪ್ರಸರಣ ನಿಯಂತ್ರಣಕ್ಕೆ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕರೊನಾ ರೋಗಿಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಮತ್ತೆ ನಿಯಮಗಳನ್ನು ಬಿಗಿ ಮಾಡಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ ಲಾಕ್​ಡೌನ್ ಬಗ್ಗೆ ಚಿಂತನೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಒಂದೇ ಅಪಾರ್ಟ್​ವೆುಂಟ್​ನಲ್ಲಿ ನೂರಕ್ಕಿಂತ ಹೆಚ್ಚು ಜನರು ಸೋಂಕುಪೀಡಿತರಾಗಿದ್ದು, ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಸಂಬಂಧ ಸರಣಿ ಸಭೆಗಳನ್ನು ನಡೆಸಲಾಗಿದೆ.

ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದ ನ್ಯೂಜಿಲ್ಯಾಂಡ್​ನಂಥ ರಾಷ್ಟ್ರಗಳಲ್ಲೂ, ಎರಡನೇ ಅಲೆ ಕಾಣಿಸಿಕೊಂಡಿದ್ದಿದೆ. ಆದರೆ, ತಕ್ಷಣ ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಪರಿಣಾಮ ಮೊದಲಿನಂಥ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಭಾರತದ ಬಹುತೇಕ ರಾಜ್ಯಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಸ್ತಬ್ಧವಾಗಿದ್ದ ಶೈಕ್ಷಣಿಕ ಚಟುವಟಿಕೆಗಳಿಗೂ ಮರುಚಾಲನೆ ಸಿಕ್ಕಿದೆ. ಹತ್ತು ತಿಂಗಳಿಂದ ತೆರೆಯದ ಶಾಲೆಗಳು ಇತ್ತೀಚೆಗಷ್ಟೇ ತರಗತಿಗಳನ್ನು ಆರಂಭಿಸಿವೆ. ಉದ್ಯಮ ವಲಯವೂ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ದೀರ್ಘ ಲಾಕ್​ಡೌನ್, ಭಾರಿ ಆರ್ಥಿಕ ನಷ್ಟ ಅನುಭವಿಸಿದ ಮೇಲೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಲಸಿಕೆಯೂ ಬಂದಿದ್ದು, ಈಗಾಗಲೇ 1 ಕೋಟಿಗಿಂತ ಹೆಚ್ಚು ಜನರಿಗೆ ವಿತರಿಸಲಾಗಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 1.09 ಕೋಟಿ ತಲುಪಿದ್ದರೂ, 1.06 ಕೋಟಿ ಜನರು ಚೇತರಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ. 1.56 ಲಕ್ಷ ಜನರು ಪ್ರಾಣ ಕಳದುಕೊಂಡಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1.36 ಲಕ್ಷದ ಆಸುಪಾಸಿನಲ್ಲಿದೆ. ಇತರ ದೇಶಗಳು ಕೂಡ ಭಾರತದಲ್ಲಿನ ಚೇತರಿಕೆ ಪ್ರಮಾಣ ಕಂಡು ಅಚ್ಚರಿ ವ್ಯಕ್ತಪಡಿಸಿವೆ. ಹೀಗಿರುವಾಗ, ಎರಡನೇ ಅಲೆ ಮತ್ತೆ ಪರಿಸ್ಥಿತಿಯನ್ನು ಕ್ಲಿಷ್ಟಗೊಳಿಸಬಾರದು ಎಂಬ ಎಚ್ಚರಿಕೆ ಅಗತ್ಯ. ಕರೊನಾ ವಿರುದ್ಧದ ಸಮರದಲ್ಲಿ ಅದೆಷ್ಟೋ ಆರೋಗ್ಯ ಸೇನಾನಿಗಳು ಪ್ರಾಣವನ್ನೇ ಅರ್ಪಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹಲವು ತಿಂಗಳುಗಳ ಕಾಲ ವಿಶ್ರಾಂತಿ ಇಲ್ಲದೆ ದುಡಿದಿದ್ದಾರೆ. ಆ ಪರಿಸ್ಥಿತಿಯನ್ನು, ಅದು ಸೃಷ್ಟಿಸಿದ್ದ ಕರಾಳತೆಯನ್ನು ಮರೆಯಬಾರದು. ಸುರಕ್ಷಿತ ಅಂತರ ಕಾಪಾಡುವುದು, ಮುಖಗವಸು ಬಳಕೆ, ಸ್ವಚ್ಛತೆ ಕಾಯ್ದುಕೊಳ್ಳುವುದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಕರೊನಾ ವಿರುದ್ಧ ಅಂತಿಮ ವಿಜಯ ಸಾಧಿಸುವವರೆಗೂ ಮೈಮರೆಯುವಂತಿಲ್ಲ. ಹಾಗಂತ, ಆತಂಕಕ್ಕೆ ಒಳಗಾಗದೆ, ಸರ್ಕಾರದ ನಿಯಮಗಳು ಮತ್ತು ಸೂಕ್ತ ಸುರಕ್ಷಾ ಕ್ರಮಗಳನ್ನು ಪಾಲಿಸುವ ಬದ್ಧತೆ ತೋರಿದರೆ ಸಾಕು.