ನ್ಯೂಸ್

ಸಂಪಾದಕೀಯ| ಸೂಕ್ಷ್ಮವಾಗಿ ನಿಭಾಯಿಸಿ: ನಿಯಮಗಳನ್ನೂ ಪಾಲಿಸಲಿ ಅನಿವಾಸಿ ಭಾರತೀಯರು

chandru

ವಿಶ್ವವ್ಯಾಪಿ ಕರೊನಾದ ಸಂಕಷ್ಟ ಹೆಚ್ಚುತ್ತಲೇ ಇದೆ. ಇವುಗಳಲ್ಲಿ ಮಾನವೀಯ ಸಂಕಷ್ಟದ ಮುಖಗಳೂ ಹಲವು. ಜೀವನೋಪಾಯಕ್ಕೆ ಸೂಕ್ತ ಆಧಾರವಿಲ್ಲದೆ ಪರದಾಡುತ್ತಿದ್ದ ಕಾರ್ವಿುಕರನ್ನು ಬೆಂಗಳೂರಿನಿಂದ ಅವರವರ ಸ್ವಂತ ಊರುಗಳಿಗೆ ವಿಶೇಷ ಬಸ್ಸುಗಳ ಮೂಲಕ ಕಳುಹಿಸಿ ಕೊಟ್ಟಿರುವುದು ಗೊತ್ತಿರುವಂಥದ್ದೇ. ಮತ್ತೊಂದೆಡೆ, ವಿದೇಶದಲ್ಲಿ ಸಿಲುಕಿಕೊಂಡಿರುವ ಅದೆಷ್ಟೋ ಭಾರತೀಯರ ಸ್ಥಿತಿಯೂ ಶೋಚನೀಯ. ವಿದ್ಯಾರ್ಥಿಗಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಇವರೆಲ್ಲ ಯಾವಾಗ ತಾಯ್ನಾಡಿಗೆ ಮರಳುತ್ತೇವೆಯೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಒಮ್ಮೆ ವಿದೇಶದಲ್ಲಿದ್ದ ಸಾವಿರಾರು ಭಾರತೀಯರನ್ನು ಇಲ್ಲಿಗೆ ಕರೆತರಲಾಗಿತ್ತು. ಆ ಬಳಿಕ ಕಳೆದ ಒಂದೂವರೆ ತಿಂಗಳು ಲಾಕ್​ಡೌನ್ ತುಂಬ ಬಿಗಿಯಾಗಿದ್ದರಿಂದ, ಈ ಬಗೆಯ ಯಾವುದೇ ಪ್ರಯತ್ನಗಳು ನಡೆದಿರಲಿಲ್ಲ. ಪ್ರಸಕ್ತ, ಏರ್​ಲಿಫ್ಟ್ ಮೂಲಕ 2 ಲಕ್ಷ ಭಾರತೀಯರನ್ನು ಹಂತಹಂತವಾಗಿ ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ

ನೀಡಿದೆ. ಮೊದಲ ಹಂತದ ಕಾರ್ಯಾ ಚರಣೆಯಲ್ಲಿ 14,800 ಭಾರತೀಯರು ಮರಳಲಿದ್ದಾರೆ. ಈ ನಿಟ್ಟಿನಲ್ಲಿ 64 ವಿಮಾನಗಳನ್ನು ಬಳಸಲಾಗುತ್ತಿದೆ. ಗಲ್ಪ್ ರಾಷ್ಟ್ರಗಳಿಗೆ ಮೂರು ಹಡಗುಗಳನ್ನೂ ರವಾನಿಸಲಾಗಿದೆ. ವಿದೇಶಗಳಿಂದ 10 ಲಕ್ಷಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಮರಳಲು ಬಯಸಿದ್ದಾರೆ.

ಅಮೆರಿಕ, ಇಂಗ್ಲೆಂಡ್, ಯುಎಇ, ಸೌದಿ ಅರೇಬಿಯಾ, ಬಹರೇನ್, ಕುವೈತ್ ಮಲೇಷ್ಯಾ, ಸಿಂಗಾಪುರ, ಫಿಲಿಪ್ಪೀನ್ಸ್, ಕತಾರ್, ಬಾಂಗ್ಲಾದೇಶ, ಮಾಲ್ಡೀವ್ಸ್ ಸೇರಿ ಹಲವು ರಾಷ್ಟ್ರಗಳಲ್ಲಿ ಇರುವ ಭಾರತೀಯರನ್ನು ಕರೆತರಲಾಗುತ್ತಿದೆ. ವಿದೇಶದಿಂದ ಬಂದ ಎಲ್ಲರನ್ನೂ ವಿಮಾನನಿಲ್ದಾಣ ಸುತ್ತಲಿನ ಪ್ರದೇಶಗಳಲ್ಲೇ ಕ್ವಾರಂಟೈನ್ ಮಾಡಿ, ಕರೊನಾ ಸೋಂಕು ಪರೀಕ್ಷೆ ನಡೆಸಲಾಗುತ್ತದೆ. ಅನಿವಾಸಿ ಭಾರತೀಯರನ್ನು ಮರಳಿ ಕರೆತರುವ ಕೇಂದ್ರದ ಕ್ರಮಕ್ಕೆ ಕೆಲ ಆಕ್ಷೇಪಗಳೂ ವ್ಯಕ್ತವಾಗಿವೆ. ಆದರೆ, ಇಲ್ಲಿ ಇಡೀ ಸ್ಥಿತಿಯನ್ನು, ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ನೋಡುವ ಅಗತ್ಯವಿದೆ. ಅಮೆರಿಕ, ಬ್ರಿಟನ್​ನಲ್ಲಿ ಸೋಂಕಿನ ಹಾವಳಿ ವಿಪರೀತವಾಗಿದ್ದು, ಅಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಪಾಲಕರು ಚಿಂತಾಕ್ರಾಂತರಾಗಿದ್ದಾರೆ. ತುರ್ತು ಚಿಕಿತ್ಸೆಗೆಂದು ಹೋದ ರೋಗಿಗಳೂ ಅಲ್ಲಿ ಸಿಲುಕಿಕೊಂಡಿದ್ದಾರೆ. ಆದ್ದರಿಂದ, ಅವರನ್ನು ಸ್ವದೇಶಕ್ಕೆ ಕರೆತರುವ ಕೇಂದ್ರದ ನಿರ್ಧಾರ ಸೂಕ್ತ ಮತ್ತು ಸಕಾಲಿಕವಾಗಿಯೇ ಇದೆ.

ಭಾರತಕ್ಕೆ ಕರೊನಾ ಸೋಂಕು ವಿದೇಶದಿಂದ ಬಂದ ಪ್ರಯಾಣಿಕರಲ್ಲೇ ಮೊದಲು ಕಾಣಿಸಿಕೊಂಡಿದ್ದೂ, ಆತಂಕಕ್ಕೆ ಕಾರಣವಾಗಿದೆ. ಸೂಕ್ತ ಜಾಗ್ರತೆ ವಹಿಸಿದರೆ ಈ ಸಮಸ್ಯೆ ಮತ್ತೆ ಮರುಕಳಿಸುವುದಿಲ್ಲ. ಸೋಂಕು ಬಾಧಿಸಿಲ್ಲ ಎಂಬುದನ್ನು ವೈದ್ಯಕೀಯ ಪರೀಕ್ಷೆಯಿಂದ ಖಾತ್ರಿ ಪಡಿಸಿಕೊಂಡ ಬಳಿಕವೇ ಎನ್​ಆರ್​ಐಗಳನ್ನು ಕರೆತರಲಾಗುತ್ತದೆ. ಆದರೆ, ವಿದೇಶಗಳಿಂದ ಮರಳುವ ಭಾರತೀಯರು ಕೆಲ ಸ್ವಯಂ ನಿಬಂಧನೆಗಳನ್ನು ಹಾಕಿಕೊಳ್ಳಬೇಕು. ಕ್ವಾರಂಟೈನ್ ಅವಧಿಯನ್ನು ಕಡ್ಡಾಯವಾಗಿ ಮತ್ತು ಸರ್ಕಾರದ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಪಾಲನೆ ಆಗಬೇಕು. ಸಣ್ಣ ಲೋಪವೂ ಅಪಾಯಕ್ಕೆ ಕಾರಣವಾಗಬಹುದು. ಹಾಗಾಗದಂತೆ, ಸೂಕ್ತ ಎಚ್ಚರಿಕೆ ವಹಿಸಬೇಕು. ಸರ್ಕಾರದ ಮಾನವೀಯ ದೃಷ್ಟಿಯ ಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆ ಹೊರತು ಹೊಸ ಸಮಸ್ಯೆಗೆ ಆಹ್ವಾನ ನೀಡಬಾರದು.