ಮೈಕ್ರೋಫೈನಾನ್ಸ್ಗಳ ಹಾವಳಿ, ಸಾಲಗಾರರಿಗೆ ನಿರಂತರ ಕಿರುಕುಳ, ಅದನ್ನು ತಡೆಯಲಾಗದೆ ಕೆಲವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆಗಳು ಇತ್ತೀಚೆಗೆ ರಾಜ್ಯದಲ್ಲಿ ಕಳವಳ ಮೂಡಿಸಿವೆ.
ಜನಾಕ್ರೋಶಕ್ಕೆ ಮಣಿದು ಮೈಕ್ರೋಫೈನಾನ್ಸ್ಗಳ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ತಂದು, ಬಲವಂತದ ಸಾಲವಸೂಲಾತಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಆದೇಶಿಸಿತು. ಸುಗ್ರೀವಾಜ್ಞೆಗೆ ಬದಲೀ ‘ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025’ ಅನ್ನು ಸೋಮವಾರ ವಿಧಾನಸಭೆ ಧ್ವನಿಮತದ ಮೂಲಕ ಅಂಗೀಕರಿಸಿದೆ. ಆದರೆ, ಈ ಕಿರುಸಾಲದ ಹಿಂದೆ ಎಷ್ಟೊಂದು ಭಯಂಕರ ಜಾಲಗಳು ಕೆಲಸ ಮಾಡುತ್ತಿವೆ ಎಂಬ ಸಂಗತಿಯನ್ನು ಸರ್ಕಾರವೇ ಬಹಿರಂಗ ಪಡಿಸಿದೆ.
ರಾಜ್ಯದಲ್ಲಿ ಕಿರುಸಾಲದ ಹೆಸರಿನಲ್ಲಿ 40 ಸಾವಿರ ಕೋಟಿ ರೂ. ಕಪು್ಪಹಣದ ವಹಿವಾಟು ನಡೆದಿರುವ ಆಘಾತಕಾರಿ ಮಾಹಿತಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸೋಮವಾರ ವಿಧಾನಸಭೆಯಲ್ಲಿ ಹೊರಗೆಡವಿದ್ದಾರೆ. ‘ಅನಧಿಕೃತ ಕಿರುಸಾಲ ಸಂಸ್ಥೆಗಳು 40 ಸಾವಿರ ಕೋಟಿ ರೂ. ಹೂಡಿಕೆ ಮಾಡಿ, ದುಬಾರಿ ಬಡ್ಡಿದರ ವಸೂಲಿ ಮಾಡುತ್ತಿವೆ. ಕಠಿಣ ಕಾಯ್ದೆ ಜಾರಿಯ ಉದ್ದೇಶದಿಂದ ಈ ಮಸೂದೆ ಮಂಡನೆ ಮಾಡಲಾಗಿದೆ’ ಎಂದಿದ್ದಾರೆ. ಕಪು್ಪಹಣ, ಹೆಚ್ಚು ಲಾಭ ಅದರೆ ಜತೆಗೆ ರಾಜಕೀಯ ಬೆಂಬಲ ಸೇರಿಕೊಂಡರೆ ಅದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಎಂದು ಸಚಿವರು ಹೇಳಿರುವುದು ಸೂಕ್ತವಾಗಿದೆ.
ಕಪು್ಪಹಣದ ವಹಿವಾಟಿಗೆ ಹೇಗೆಲ್ಲ ಕಳ್ಳದಾರಿಗಳನ್ನು ಹುಡುಕಲಾಗುತ್ತಿದೆ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಈ ಕಿರುಸಾಲ ಸಂಸ್ಥೆಗಳು ತಾವು ರೂಪಿಸಿದ್ದೇ ನಿಯಮ ಎಂದುಕೊಂಡು ಜನರನ್ನು ಶೋಷಿಸಿರುವ ರೀತಿ ನಿಜಕ್ಕೂ ಚಿಂತಾಜನಕ. ಮಾಸಿಕ ಶೇಕಡ 10ಕ್ಕಿಂತಲೂ ಹೆಚ್ಚಿನ ಬಡ್ಡಿ ದರ ವಿಧಿಸಿ ಸಾಲ ವಸೂಲಿ ಹೆಸರಿನಲ್ಲಿ ವಾಹನಗಳು, ಆಸ್ತಿ ಜಪ್ತಿಯಂಥ ಹಲವು ಪ್ರಕರಣಗಳು ನಡೆದಿವೆ.
ಆತ್ಮಗೌರವಕ್ಕೆ ಧಕ್ಕೆ ಬಂದಿದ್ದಕ್ಕೆ ನೊಂದು 15 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ನೂರಾರು ಜನರು ಊರು ತೊರೆದ ನಿದರ್ಶನಗಳಿವೆ. ಈ ಸಮಸ್ಯೆ ಯಾವುದೋ ಒಂದು ತಾಲೂಕು ಅಥವಾ ಜಿಲ್ಲೆಗೆ ಸೀಮಿತವಾಗಿ ಉಳಿದಿಲ್ಲ. ರಾಜ್ಯದ ಎಲ್ಲ ಕಡೆಯೂ ಇದೇ ಪರಿಸ್ಥಿತಿ. ಒಂದುವೇಳೆ, ಇಂಥ ಅನಧಿಕೃತ ಹಣಕಾಸು ಅಥವಾ ಕಿರುಸಾಲ ಸಂಸ್ಥೆಗಳು ಇದೇ ವೇಗದಲ್ಲಿ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಶೋಚನಿಯವಾಗುತ್ತದೆ. ಆತಂಕದಿಂದ ಜನರು ಹಳ್ಳಿಗಳನ್ನು ತೊರೆಯುವಂತಾಗುತ್ತದೆ.
ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತ. ಆದರೆ, ಈಗಿರುವ ಕಾನೂನು ದುರ್ಬಲವಾಗಿದೆ. ಈಗಿರುವ ಕಾಯ್ದೆಗಳು ಒಂದರಿಂದ ಆರು ತಿಂಗಳ ಶಿಕ್ಷೆ, 500 ರಿಂದ ಸಾವಿರ ರೂ. ದಂಡ, ಸ್ಟೇಷನ್ ಬೇಲ್ಗೆ ಅವಕಾಶ ಮಾಡಿಕೊಡುತ್ತದೆಯೇ ಹೊರತು, ಪೊಲೀಸರು ಹೆಚ್ಚೇನು ಮಾಡುವಂತಿಲ್ಲ.
ಈ ನಿಟ್ಟಿನಲ್ಲಿ ಕಾನೂನಿಗೆ ಬಲ ತುಂಬಬೇಕಿದೆ. ಕೆಲವೆಡೆ ಪೊಲೀಸರಿಗೆ ಮಾಹಿತಿ ಇದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳೂ ಇವೆ. ಹಾಗಾಗಿ, ಪೊಲೀಸ್ ಇಲಾಖೆಗೂ ಸ್ಪಷ್ಟ ನಿರ್ದೇಶನ ನೀಡಬೇಕಿದೆ. ಕಪು್ಪಹಣದ ವಹಿವಾಟಿನಡಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಕಾನೂನಿನ ಅನ್ವಯವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ಜಾಲಗಳಿಗೆ ಬಲಿ ಬೀಳದಂತೆ ಗ್ರಾಮೀಣ ಹಾಗೂ ನಗರ ಪ್ರದೇಶ ಎರಡೂ ಕಡೆ ಜಾಗೃತಿ ಮೂಡಿಸುವ, ಅರಿವು ನೀಡುವ ಕಾರ್ಯಗಳು ನಡೆಯಬೇಕು.
ಅಲ್ಲದೆ, ಪರಿಹಾರವಾಗಿ ಸ್ವಸಹಾಯ ಸಂಘಗಳನ್ನು ಬಲಗೊಳಿಸುವ ಕಾರ್ಯ ನಡೆದರೆ ಈ ದುಬಾರಿ ಬಡ್ಡಿದರದ ಹಾವಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯ.