ಸ್ತ್ರೀಯರನ್ನು ಗೌರವಾದರಗಳಿಂದ ಕಾಣಬೇಕು ಎಂಬುದು ನಮ್ಮ ಪ್ರಾಚೀನ ಆದರ್ಶ. ಇದರಿಂದ ಸಮಾಜ ಹಾಗೂ ದೇಶಕ್ಕೆ ನಾನಾ ಬಗೆಯ ಪ್ರಯೋಜನಗಳಿವೆ. ಆದರೆ ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವುದು ಕಳವಳಕಾರಿ ವಿದ್ಯಮಾನ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಪ್ರಕಾರ, 2023ರಲ್ಲಿ ಮಹಿಳಾ ದೌರ್ಜನ್ಯದ ಸುಮಾರು 4.5 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚಿನ ಪ್ರಮಾಣವಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ವಿಚಾರದಲ್ಲಿ ಉತ್ತರ ಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಪತಿ ಅಥವಾ ಸಂಬಂಧಿಕರಿಂದಲೇ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ ಎಂದು ವರದಿ ಬೊಟ್ಟುಮಾಡಿರುವುದು ಗಮನಿಸಬೇಕಾದ ಸಂಗತಿ. ಎಷ್ಟೋ ಪ್ರಕರಣಗಳು ವರದಿಯಾಗುವುದಿಲ್ಲ ಅಥವಾ ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ಮಹಿಳೆಯರ ಮೇಲೆ ಅತ್ಯಾಚಾರ, ವರದಕ್ಷಿಣೆ ಕಿರುಕುಳದಂಥ ವಿವಿಧ ಬಗೆಯ ದೌರ್ಜನ್ಯಗಳು ನಡೆಯುತ್ತವೆ. ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿ ಮೂರನೆಯ ಸ್ಥಾನದಲ್ಲಿರುವುದು ವರದಿಯಲ್ಲಿ ಬಯಲಾಗಿದೆ.
ಮಹಿಳಾ ಸುರಕ್ಷತೆ ದೃಷ್ಟಿಯಿಂದ ಈಗ ಕಾನೂನುಗಳನ್ನು ಬಲಗೊಳಿಸಲಾಗಿದೆ. ಸರ್ಕಾರಗಳು ಜನಾಗ್ರಹಕ್ಕೆ ಸ್ಪಂದಿಸುವ ನಿದರ್ಶನಗಳನ್ನೂ ಕಾಣಬಹುದು. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಜನಾಕ್ರೋಶ ಹೆಚ್ಚಿದಾಗ, ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಸಂಬಂಧಿಸಿದ ಕಾನೂನು ತಿದ್ದುಪಡಿಗೆ ಮುಂದಾಗಿದ್ದು ಇದಕ್ಕೊಂದು ನಿದರ್ಶನ. ಮಹಿಳಾಪರ ಕಾನೂನುಗಳ ದುರುಪಯೋಗದ ಕುರಿತು- ವಿಶೇಷವಾಗಿ ವರದಕ್ಷಿಣೆ ವಿರೋಧಿ ಕಾನೂನು- ಆಗೀಗ ಆಕ್ಷೇಪ ಕೇಳಿಬರುತ್ತದೆಯಾದರೂ, ಯಾರೋ ಕೆಲವರ ಕಾರಣಕ್ಕೆ ಸಾರಾಸಗಟಾಗಿ ಎಲ್ಲವೂ ಹೀಗೇ ಎಂದು ಹೇಳಲಾಗದು. ಇದರೊಂದಿಗೆ, ಈಗ ಮೊದಲಿಗಿಂತ ಜಾಗೃತಿ ಹಾಗೂ ಶಿಕ್ಷಣ ಹೆಚ್ಚಿದೆ. ಆದರೂ ನಾನಾ ಬಗೆಯ ಅಪರಾಧಗಳು ಕಡಿಮೆ ಆಗಿಲ್ಲ ಎಂಬುದು ವಿಷಾದದ ಸಂಗತಿ. ಇನ್ನು, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಸಹ ಸ್ಪಲ್ಪ ಏರಿಕೆ ಕಂಡುಬಂದಿರುವುದನ್ನು ಎನ್ಸಿಆರ್ಬಿ ವರದಿ ದಾಖಲಿಸಿದೆ. ಎನ್ಸಿಆರ್ಬಿ ವರದಿ ಪ್ರಕಾರ 2023ರಲ್ಲಿ ಒಟ್ಟು 1,71,418 ಆತ್ಮಹತ್ಯೆಗಳು ವರದಿಯಾಗಿವೆ.
ಇದು 2022ಕ್ಕೆ ಹೋಲಿಸಿದರೆ ಶೇ. 0.3ರಷ್ಟು ಅಧಿಕ. ಬಹುತೇಕ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳು ಮತ್ತು ಅನಾರೋಗ್ಯ ಪ್ರಮುಖ ಕಾರಣವಾಗಿದೆ ಎಂದು ವರದಿ ವಿಶ್ಲೇಷಿಸಿದೆ. ಉಳಿದಂತೆ, ಸೈಬರ್ ಅಪರಾಧ ಪ್ರಕರಣಗಳಲ್ಲಿ 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ. ಸೈಬರ್ ಅಪರಾಧ ಪ್ರಕರಣಗಳ ನಿರ್ವಹಣೆಗೆ ಪ್ರತ್ಯೇಕ ಪೊಲೀಸ್ ವಿಭಾಗ ಸ್ಥಾಪಿಸಲಾಗಿದೆಯಾದರೂ, ಈಚಿನ ವರ್ಷಗಳಲ್ಲಿ ಸೈಬರ್ ಕುಕೃತ್ಯಗಳು ವಿಪರೀತ ಎನ್ನುವಷ್ಟು ಹೆಚ್ಚಿವೆ. ತಂತ್ರಜ್ಞಾನದ ಬಳಕೆ ವ್ಯಾಪಕವಾಗಿ, ಅನುಕೂಲಗಳು ಇರುವುದರ ಜೊತೆಗೆ ಸಮಸ್ಯೆಗೆ ಸಿಲುಕುವ ಪ್ರಮಾಣವೂ ಹೆಚ್ಚಿದೆ. ಪರಿಣಾಮಕಾರಿ ತನಿಖೆ ಮತ್ತು ಜಾಗೃತಿಯ ಮೂಲಕ ಕೆಲಮಟ್ಟಿಗೆ ಇಂಥ ಅಪರಾಧವನ್ನು ನಿಯಂತ್ರಿಸಲು ಸಾಧ್ಯವಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಅಪರಾಧ ನಿಯಂತ್ರಣಕ್ಕೆ ಕಾನೂನುಗಳು ಬೇಕೇ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅದರೊಟ್ಟಿಗೆ, ಸಾಮಾಜಿಕವಾಗಿ ಸಹ ಕೆಲ ಹೊಣೆಗಾರಿಕೆಗಳಿವೆ. ಅವನ್ನು ಅರಿತು ಪಾಲಿಸಿದರೆ ಅಪರಾಧಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.