ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಕನ್ನಡ-ಕನ್ನಡತನದ ಅಸ್ತಿತ್ವ, ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇತ್ಯಾದಿ ವಿಷಯಗಳ ಕುರಿತಾದ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಕನ್ನಡವೇ ‘ಸಾರ್ವಭೌಮ ಭಾಷೆ’ ಎಂಬ ಘೊಷಣೆಯನ್ನು ಪರಭಾಷೆಗಳ ಪ್ರಾಬಲ್ಯ ಅಣಕಿಸುವಂತಾಗಿ, ಕನ್ನಡ ಭಾಷಿಕ ಪ್ರದೇಶ ಎಂಬ ಪರಿಕಲ್ಪನೆಯೇ ಮರೆಯಾಗುವಂಥ ಆತಂಕ ತಲೆದೋರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇವೆ.
ಐಬಿಪಿಎಸ್ ನಡೆಸುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಇತ್ತೀಚೆಗೆ ಅವಕಾಶ ಕಲ್ಪಿಸಲಾಗಿದೆಯಾದರೂ, ಕನ್ನಡದಲ್ಲಿನ ಪ್ರಶ್ನೆಪತ್ರಿಕೆ ಅರ್ಥವೇ ಆಗದಷ್ಟು ಕೆಟ್ಟ ಅನುವಾದದಿಂದ ರೂಪಿಸಲಾಗುತ್ತಿದೆ. ಈಗ ಮತ್ತೊಂದು ಅಪಸವ್ಯ ಎದುರಾಗಿದೆ. ಕೇಂದ್ರ ಸರ್ಕಾರದ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾರ್ವಿುಕರ ರಾಜ್ಯ ವಿಮಾ ನಗಮ (ಇಎಸ್ಐಸಿ) ದೇಶಾದ್ಯಂತ 3,665 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಕರ್ನಾಟಕದ ಹುದ್ದೆಗಳಿಗೂ ಕನ್ನಡ, ಕನ್ನಡಿಗರಿಗೆ ಪ್ರಾಶಸ್ಱ ಇಲ್ಲದಂತಾಗಿದೆ. ವಿಪರ್ಯಾಸವೆಂದರೆ, ಅಟೆಂಡರ್ ಕೆಲಸಕ್ಕೂ ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿಯಲ್ಲಿ ಎರಡು ಹಂತದ ಪರೀಕ್ಷೆ ಬರೆಯಬೇಕಾದ ಸಂದಿಗ್ಧತೆ. ಈ ರೀತಿ ಕೆಳಹಂತದ ಹುದ್ದೆಗಳಿಗೂ ಹಿಂದಿ, ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆಯಬೇಕೆಂಬ ನಿಯಮದಿಂದ ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ‘ವಿಜಯವಾಣಿ’ ಡಿ.30ರಂದು ವಿಸõತ ವರದಿ ಪ್ರಕಟಿಸಿತ್ತು.
ಈ ವರದಿಯನ್ನು ಗಮನಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜನಪ್ರತಿನಿಧಿಗಳು ಕೂಡಲೇ ಈ ವಿಷಯವನ್ನು ಕೇಂದ್ರದ ಗಮನಕ್ಕೆ ತಂದಿದ್ದಾರೆ. ವಿಜಯವಾಣಿ ವರದಿ ಗಮನಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಕಾರ್ವಿುಕ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ‘ನನ್ನ ಗಮನಕ್ಕೆ ಬಾರದೆ ಈ ರೀತಿಯಾಗಿದೆ. ಕೂಡಲೇ ಸರಿಪಡಿಸುತ್ತೇನೆ. ಅನ್ಯಾಯವಾಗಲು ಬಿಡುವುದಿಲ್ಲ’ ಎಂಬ ಆಶ್ವಾಸನೆ ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಯಾದವ್ ಹೇಳಿದ್ದಾರೆ. ತಕ್ಷಣವೇ ಹಲವು ಮುಖಂಡರು ಎಚ್ಚೆತ್ತುಕೊಂಡು ಕೇಂದ್ರದ ಮೇಲೆ ಒತ್ತಡ ತಂದಿದ್ದರಿಂದ, ನಿಲುವು ಬದಲಾವಣೆ ಸಾಧ್ಯವಾಗಿದೆ. ಆದರೆ, ಪರೀಕ್ಷೆಯ ನಿಯಮಗಳನ್ನು ರೂಪಿಸುವಾಗಲೇ ಪ್ರಾಯೋಗಿಕ ನೆಲೆಗಳನ್ನು ಗಮನಿಸಬೇಕು. ಹೇಗೇಗೋ ನಿಯಮಗಳನ್ನು ರೂಪಿಸಿ ಅದರಿಂದ ಅಭ್ಯರ್ಥಿಗಳಿಗೆ, ಪ್ರಾದೇಶಿಕ ಭಾಷೆಗೆ ಅನ್ಯಾಯವಾದರೆ ಅದು ವ್ಯವಸ್ಥೆಯ ವೈಫಲ್ಯವೇ ಸರಿ. ಕನ್ನಡ ಭಾಷೆಯ ಕುರಿತಂತೆ ಮೇಲಿಂದ ಮೇಲೆ ಇಂಥ ಪ್ರಹಾರಗಳು ಆಗುತ್ತಲೇ ಇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದಿಷ್ಟು ಸಾಮಾನ್ಯ ನಿಯಮಗಳು, ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ ಎಂಬುದೇನೋ ನಿಜ. ಆದರೆ, ಒಂದು ಭಾಷೆಯ ಮೇಲೆ, ಅದರ ಅಸ್ಮಿತೆ ಮೇಲೆ, ಭಾಷಿಕರ ಮೇಲೆ ಉದ್ಯೋಗ ಮತ್ತಿತರ ವಿಚಾರಗಳಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.