ಕರೊನಾ ಸೋಂಕಿನ ಹಾವಳಿಯಿಂದ ಶೈಕ್ಷಣಿಕ ಕ್ಷೇತ್ರ ದೊಡ್ಡ ಪಲ್ಲಟವನ್ನೇ ಅನುಭವಿಸಿತು. ಜ್ಞಾನದೇಗುಲಗಳೆಂದು ಕರೆಯಲ್ಪಡುವ ಶಾಲೆಗಳ ದ್ವಾರಗಳನ್ನೇ ಮಹಾಮಾರಿಯೊಂದು ವರ್ಷಗಟ್ಟಲೇ ಮುಚ್ಚಿಬಿಡಬಹುದು ಎಂದು ಯಾರೂ ಊಹಿಸಿಯೂ ಇರಲಿಲ್ಲ. ಶಾಲೆಯ ಪರಿಸರ, ಭೌತಿಕ ತರಗತಿಗಳು, ಶಿಕ್ಷಕರ-ಸ್ನೇಹಿತರ ಒಡನಾಟದಿಂದ ವಂಚಿತರಾದ ಮಕ್ಕಳು ಸಪ್ಪೆಯಾಗಿಬಿಟ್ಟರು. ಆನ್ಲೈನ್ ತರಗತಿ ಅನಿವಾರ್ಯವಾದರೂ; ಅದರ ಅಡ್ಡಪರಿಣಾಮಗಳು ಒಂದೊಂದಾಗಿಯೇ ಗೋಚರಿಸುತ್ತಿವೆ. ಹಾಗಾಗಿ, ದೀರ್ಘಾವಧಿಗೆ ಈ ಮಾಧ್ಯಮದ ಮೂಲಕ ಬೋಧನೆ-ಕಲಿಕೆ ಸೂಕ್ತವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಹಾಗಂತ, ದಿಢೀರಾಗಿ ಶಾಲೆಗಳನ್ನು ತೆರೆಯುವ ಸ್ಥಿತಿಯಲ್ಲೂ ಸರ್ಕಾರ ಇರಲಿಲ್ಲ. ಕರೊನಾ ಸೋಂಕಿನ ಮೂರನೇ ಅಲೆ ವ್ಯಾಪಿಸಲಿದೆ ಎಂಬ ತಜ್ಞರ ಎಚ್ಚರಿಕೆಯ ನಡುವೆಯೇ, ಶೈಕ್ಷಣಿಕ ಕ್ಷೇತ್ರದ ಹಿತವನ್ನು ಗಮನಿಸಿ ನಿರ್ಣಯವನ್ನು ತೆಗೆದುಕೊಳ್ಳುವ ಅನಿವಾರ್ಯತೆ. ಕಡೆಗೂ, ಆರರಿಂದ ಎಂಟನೇ ತರಗತಿಯ ಮಕ್ಕಳಿಗೆ ಶಾಲೆಗಳು ಸೆಪ್ಟೆಂಬರ್ 6ರಿಂದ (ದಿನ ಬಿಟ್ಟು ದಿನ) ಆರಂಭಗೊಳ್ಳುತ್ತಿವೆ. ಕರೊನಾ ಸೋಂಕು ಪ್ರಮಾಣ ಶೇಕಡ 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಿರ್ಧರಿಸಿದೆ. 9, 10ನೇ ತರಗತಿ ಮಕ್ಕಳಿಗೆ ಈಗಾಗಲೇ ಭೌತಿಕ ತರಗತಿಗಳು ಆರಂಭವಾಗಿವೆ.
ಶಾಲೆಗಳನ್ನು ತೆರೆಯಲೇ ಬೇಕಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಕಾರಣ, ಶಾಲೆ ಇಲ್ಲದ ಪರಿಣಾಮ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳು ಬಲವಂತದ ದುಡಿಮೆ, ಬಾಲ್ಯವಿವಾಹದ ಪಾಶಕ್ಕೆ ಸಿಲುಕುತ್ತಿದ್ದಾರೆ. ಕೆಲ ಮಕ್ಕಳು ಅಡ್ಡದಾರಿಯನ್ನು ತುಳಿಯುತ್ತಿದ್ದಾರೆ. ಇನ್ನು, ನಗರಪ್ರದೇಶದ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದು, ಏಕಾಗ್ರತೆಗೂ ಭಂಗ ಬಂದಿದೆ. ಹಿಂದಿನ ತರಗತಿ, ಪಾಠಗಳಲ್ಲಿ ಕಲಿತಿರುವುದನ್ನೂ ಮರೆಯುತ್ತಿದ್ದಾರೆ. ಅಂದರೆ, ಇಡೀ ಕಲಿಕೆಯ ಪ್ರಕ್ರಿಯೆ ಅಸ್ತವ್ಯಸ್ತಗೊಂಡಿದ್ದು, ಇದೆಲ್ಲ ಸರಿ ಮಾಡುವುದು ಹೇಗೆ ಎಂಬ ಚಿಂತೆ ಪಾಲಕರದ್ದು. ಭೌತಿಕ ತರಗತಿಗಳು ಆರಂಭವಾದರೆ ಮಕ್ಕಳು ಮೊದಲಿನಂತೆ ಓದಿನಲ್ಲಿ ಆಸಕ್ತಿ ತೋರಲು ಸಾಧ್ಯವಾಗಬಹುದು. ಜತೆಗೆ, ಸಂಭಾವ್ಯ ಮೂರನೇ ಅಲೆಯ ಭೀತಿಯೂ ಪಾಲಕರಿಗೆ ಕಾಡುತ್ತಿದೆ. ಎರಡನೇ ಅಲೆಯ ಘೋರ ಪರಿಣಾಮಗಳನ್ನು ಕಂಡಿರುವ ಅವರು, ಶೈಕ್ಷಣಿಕ ವರ್ಷ ವ್ಯರ್ಥವಾದರೂ ಪರವಾಗಿಲ್ಲ, ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವುದು ಬೇಡ ಎಂದು ಯೋಚಿಸುತ್ತಿದ್ದಾರೆ.
ಅನಗತ್ಯ ಭೀತಿಯನ್ನು ಬದಿಗಿಟ್ಟು, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆದರೆ ಹೆಚ್ಚು ಅನುಕೂಲ. ಶಿಕ್ಷಕರಿಗೆ ಲಸಿಕೆ ನೀಡಲಾಗುವ ಪ್ರಕ್ರಿಯೆ ಆರಂಭವಾಗಿದೆಯಾದರೂ, ಎಲ್ಲ ಶಿಕ್ಷಕರೂ ಎರಡೂ ಡೋಸ್, ಕನಿಷ್ಠ ಮೊದಲ ಡೋಸ್ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಶಾಲಾರಂಭಕ್ಕೂ ಮುನ್ನವೇ ಖಾತ್ರಿ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಅವುಗಳು ಚಾಚೂ ತಪ್ಪದೆ ಪಾಲನೆ ಆಗುವಂತೆ ಮಾಡಬೇಕು. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಸೂಕ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅಷ್ಟೇ ಅಗತ್ಯ. ಒಟ್ಟಾರೆ ಮಕ್ಕಳು ಮತ್ತು ಶಿಕ್ಷಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಮುಂದಡಿ ಇಡಬೇಕು.