ನ್ಯೂಸ್

ಸಂಪಾದಕೀಯ | ಇಂಧನ ಸ್ವಾವಲಂಬನೆಯತ್ತ… ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಕ್ರಮ

Bengaluru - General - Rama Kishan K V

ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಕಲ್ಲಿದ್ದಲು ರಫ್ತು ಮಾಡುವತ್ತ ಹೆಜ್ಕೆ ಹಾಕುತ್ತಿದ್ದು, 2025-26ರ ವೇಳೆಗೆ ದೇಶವು ಕಲ್ಲಿದ್ದಲು ರಫ್ತು ಆರಂಭಿಸಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ ಜೋಶಿ ಹೇಳಿರುವುದು ಪ್ರಮುಖ ಇಂಧನ ಮೂಲವಾದ ಕಲ್ಲಿದ್ದಲು ಸ್ವಾವಲಂಬನೆಯತ್ತ ಭಾರತ ಹೆಜ್ಜೆ ಹಾಕುತ್ತಿರುವುದರ ಪ್ರತೀಕವಾಗಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪಳಿಯುಳಿಕೆ ಇಂಧನಗಳಲ್ಲಿ ಒಂದಾದ ಕಲ್ಲಿದ್ದಲು ಬಳಕೆಯನ್ನು ತಗ್ಗಿಸಿ ಮರುಬಳಕೆಯ ಇಂಧನದತ್ತ ಮುಖ ಮಾಡುತ್ತಿರುವ ಸಕಾರಾತ್ಮಕ ಸೂಚನೆ ಕೂಡ ಇದಾಗಿದೆ.

ದೇಶದಲ್ಲಿ ಕಲ್ಲಿದ್ದಲು ನಿಕ್ಷೇಪ ಸಾಕಷ್ಟಿದ್ದರೂ ಭಾರತ ತನ್ನ ಬೇಡಿಕೆ ಪೂರೈಸಿಕೊಳ್ಳಲು ಅಮದನ್ನು ಅವಲಂಬಿಸಿರುವುದು ಗಮನಾರ್ಹವಾಗಿದೆ. ದೇಶೀಯವಾಗಿ ವ್ಯಾಪಕ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಈಚಿನ ವರ್ಷಗಳಲ್ಲಿ ಕೇಂದ್ರದಲ್ಲಿನ ಮೋದಿ ಸರ್ಕಾರವು ಕಲ್ಲಿದ್ದಲನ್ನು ದೇಶೀಯವಾಗಿ ಹೆಚ್ಚು ಉತ್ಪಾದಿಸಲು ಆದ್ಯತೆ ನೀಡಿರುವುದರಿಂದ ಕಲ್ಲಿದ್ದಲು ಆಮದು ಪ್ರಮಾಣ ಈಗ ಕಡಿತಗೊಳ್ಳುತ್ತ ಸಾಗಿದೆ. 2025 -26ರ ವೇಳೆಗೆ ಕಲ್ಲಿದ್ದಲನ್ನು ರಫ್ತು ಮಾಡುವ ಗುರಿಯನ್ನು ಕೂಡ ಹಾಕಿಕೊಂಡಿರುವುದು ಶ್ಲಾಘನೀಯ ಕ್ರಮವಾಗಿದೆ. ಕಲ್ಲಿದ್ದಲು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2019-20ರಲ್ಲಿ 24.85 ಕೋಟಿ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದೆ. 2022-23 ರ ಹಣಕಾಸು ವರ್ಷದಲ್ಲಿ (ಡಿಸೆಂಬರ್ 2022ರವರೆಗೆ) ಇದು 18.60 ಕೋಟಿ ಟನ್​ಗಳಿಗೆ ತಗ್ಗಿದ್ದು, ಶೇಕಡಾ 25 ರಷ್ಟು ಕಡಿಮೆಯಾಗಿದೆ.

ಭಾರತದಲ್ಲಿ ಕಲ್ಲಿದ್ದಲನ್ನು ಬಹುತೇಕವಾಗಿ ವಿದ್ಯುತ್ ತಯಾರಿಕೆಗೆ ಬಳಸಲಾಗುತ್ತದೆ. ಪಳಿಯುಳಿಕೆ ಇಂಧನವಾದ ಕಲ್ಲಿದ್ದಲು ಬಳಕೆಯಿಂದ ಪರಿಸರ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಮರಬಳಕೆಯ ಇಂಧನ ಉತ್ಪಾದನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗಾಗಿ, ಜಲ ವಿದ್ಯುತ್, ಪವನ ವಿದ್ಯುತ್, ಸೌರ ವಿದ್ಯುತ್ ಉತ್ಪಾದನೆ ತಕ್ಕಮಟ್ಟಿಗೆ ಜಾಸ್ತಿಯಾಗಿದೆ. ಕಲ್ಲಿದ್ದಲಿನಿಂದ ತಯಾರಾಗುವ ಶಾಖ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದರೂ ಈಗಲೂ ಭಾರತದಲ್ಲಿ ಶೇ. 50ಕ್ಕಿಂತಲೂ ಅಧಿಕ ಪ್ರಮಾಣದ ಉತ್ಪಾದನೆಯು ಕಲ್ಲಿದ್ದಲಿನಿಂದಲೇ ಆಗುತ್ತಿದೆ ಎಂಬುದು ವಾಸ್ತವ. ವಾರ್ಷಿಕವಾಗಿ 2 ಲಕ್ಷ ಮೆಗಾ ವ್ಯಾಟ್​ಗಿಂತ ಅಧಿಕ ವಿದ್ಯುತ್ತನ್ನು ಕಲ್ಲಿದ್ದಲಿನಿಂದ ತಯಾರಿಸಲಾಗುತ್ತದೆ.

ಯುಪಿಎ-2 ಆಡಳಿತದ ಅವಧಿಯಲ್ಲೂ ಕಲ್ಲಿದ್ದಲು ಆಮದು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತಾದರೂ ವಾಸ್ತವದಲ್ಲಿ ಅದು ಈಡೇರಿರಲಿಲ್ಲ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯವಾಗಿ 90 ಕೋಟಿ ಟನ್​ನಷ್ಟು ಕಲ್ಲಿದ್ದಲು ಉತ್ಪಾದಿಸಲಾಗಿದ್ದು, ಇದೊಂದು ದಾಖಲೆಯಾಗಿದೆ. ಈ ಹಣಕಾಸು ವರ್ಷದ ಅವಧಿಯಲ್ಲಿ ಒಟ್ಟು ಕಲ್ಲಿದ್ದಲಿನ ದೇಶೀಯ ಬೇಡಿಕೆಯು 108.7 ಕೋಟಿ ಟನ್ ಇದೆ ಎಂದು ಅಂದಾಜಿಸಲಾಗಿದೆ. ಅಂದರೆ, ಶೇ. 80ಕ್ಕಿಂತಲೂ ಅಧಿಕ ಕಲ್ಲಿದ್ದಲನ್ನು ಈಗ ದೇಶೀಯವಾಗಿ ಉತ್ಪಾದಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಭಾರತದಲ್ಲಿ ಲಭ್ಯವಿರುವ ಒಟ್ಟು ಕಲ್ಲಿದ್ದಲು ನಿಕ್ಷೇಪವು 36 ಸಾವಿರ ಕೋಟಿ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಗಾಧ ಪ್ರಮಾಣದಲ್ಲಿರುವ ಈ ನಿಕ್ಷೇಪವನ್ನು ಬಳಸಿಕೊಂಡು ಸೂಕ್ತ ರೀತಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡಿದರೆ ದೇಶೀಯ ಬಳಕೆಯನ್ನು ಮಿಕ್ಕಿ ರಫ್ತು ಮಾಡಲು ಖಂಡಿತಾ ಸಾಧ್ಯವಿದೆ.