ನ್ಯೂಸ್

ಸಂಪಾದಕೀಯ | ಸೌಲಭ್ಯ ತಲುಪಲಿ; ಬರೀ ವೆಚ್ಚ ಹೆಚ್ಚಳದಿಂದ ಪ್ರಯೋಜನವಿಲ್ಲ..

Webdesk - Ravikanth

ಆರೋಗ್ಯ ಕ್ಷೇತ್ರಕ್ಕಾಗಿ ಮಾಡುವ ವೆಚ್ಚ ಪ್ರತಿವರ್ಷ ಏರಿಕೆಯಾಗುತ್ತಿದೆ ಎಂದು ಸೋಮವಾರ ಕೇಂದ್ರ ಸರ್ಕಾರ ತಿಳಿಸಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಜನರ ನಂಬಿಕೆಯೂ ಹೆಚ್ಚುತ್ತಿದೆ ಎಂದಿದೆ. ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಮಾಡಲಾಗುತ್ತಿದ್ದ ವೆಚ್ಚ ದೇಶದ ಒಟ್ಟು ಜಿಡಿಪಿಯ ಶೇಕಡ 1.15ರಿಂದ ಶೇ. 1.35ಕ್ಕೆ ಏರಿಕೆ ಕಂಡಿದೆ. ಸರ್ಕಾರ ಶೇ. 40ರಷ್ಟು ಹೆಚ್ಚುವರಿ ಮೊತ್ತವನ್ನು ಈ ಕ್ಷೇತ್ರಕ್ಕೆ ನೀಡಿದೆ. 2013-14ರಲ್ಲಿ ಇದು ಶೇ. 28.6 ಇತ್ತು. ದೇಶದ ಒಟ್ಟಾರೆ ವಾರ್ಷಿಕ ವೆಚ್ಚದಲ್ಲಿ ಶೇ. 5.12ನ್ನು ಆರೋಗ್ಯಕ್ಕೆ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಜನರ ಮೇಲಿನ ತಲಾ ವೆಚ್ಚದಲ್ಲೂ ಏರಿಕೆ ಕಂಡುಬಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಕ್ತ ಅನುದಾನ ಕಲ್ಪಿಸಲಾಗುತ್ತಿದೆ. 2013-14ರಲ್ಲಿ ಇದ್ದ ಶೇ. 51.1 ಅನುದಾನ 2017-18ರ ಸಾಲಿನಲ್ಲಿ ಶೇ. 54.7ಕ್ಕೆ ಏರಿಕೆ ಕಂಡಿದೆ ಎಂದು ಅಂಕಿಅಂಶಗಳ ಸಮೇತ ಆರೋಗ್ಯ ಸಚಿವಾಲಯ ವಿವರಣೆ ನೀಡಿದೆ. ಆರೋಗ್ಯ ರಂಗದ ಸವಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನುದಾನ, ಮೂಲಸೌಕರ್ಯಗಳನ್ನು ಜಾಸ್ತಿ ಮಾಡಿರುವುದು ಸ್ವಾಗತಾರ್ಹ. ಆದರೆ, ಬರೀ ವೆಚ್ಚ ಹೆಚ್ಚಳದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುವುದಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರನ್ನು ಗಮನದಲ್ಲಿ ಇರಿಸಿಕೊಂಡು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹಲವು ಯೋಜನೆ, ಸೌಲಭ್ಯ, ಕಾರ್ಯಕ್ರಮಗಳೇನೋ ಘೋಷಿಸುತ್ತವೆ. ಆದರೆ, ಅವು ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿವೆಯೇ, ಜನರನ್ನು ತಲುಪುತ್ತಿವೆಯೇ ಎಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರವೇ ದೊರಕುತ್ತದೆ. ‘ಆಯುಷ್ಮಾನ್ ಭಾರತ್’ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ. ಆದರೆ, ಇದನ್ನು ಅಳವಡಿಸಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ಮುಂದೆ ಬರುತ್ತಿಲ್ಲ. ಸರ್ಕಾರದಿಂದ ಚಿಕಿತ್ಸಾ ವೆಚ್ಚ ಸಕಾಲದಲ್ಲಿ ಪಾವತಿಯಾಗುವುದಿಲ್ಲ, ಸರ್ಕಾರ ನೀಡುವ ಚಿಕಿತ್ಸಾ ಮೊತ್ತವೂ ತುಂಬ ಕಡಿಮೆ ಎಂಬ ಕಾರಣಗಳು ಖಾಸಗಿ ಆಸ್ಪತ್ರೆಗಳದ್ದು. ಇನ್ನು, ಜನರು ಕೂಡ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಹಿಂದಡಿ ಇಡುತ್ತಿದ್ದಾರೆ. ಕಾರಣ, ಎಷ್ಟೋ ಆಸ್ಪತ್ರೆಗಳು ಕಮಿಶನ್ ಕೇಳುತ್ತವೆ ಎಂಬುದು ರೋಗಿಗಳ ನೇರ ಆರೋಪ. ನಿಜವಾದ ಫಲಾನುಭವಿಗೆ ಸೂಕ್ತ ಸಮಯದಲ್ಲಿ ಸೌಲಭ್ಯದ ಪ್ರಯೋಜನ ದೊರಕದಿದ್ದರೆ ಇಂಥ ಯೋಜನೆಗಳಿಂದ ಏನು ಲಾಭ? ಯಾವುದೇ ಮಹತ್ವದ ಯೋಜನೆಯನ್ನು ರೂಪಿಸುವಾಗಲೇ, ಅದರ ಪರಿಣಾಮಕಾರಿ ಜಾರಿಯ ದಾರಿಗಳನ್ನೂ ಕಂಡುಕೊಳ್ಳಬೇಕು. ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕು.

ಕರ್ನಾಟಕದಲ್ಲಿ ಮೊದಲು ರೈತಕುಟುಂಬಗಳಿಗೆ, ಇತರ ಬಡಕುಟುಂಬಗಳಿಗೆ ‘ಯಶಸ್ವಿನಿ’ ಯೋಜನೆ ಇತ್ತು. ‘ಆಯುಷ್ಮಾನ್’ ಯೋಜನೆ ಇದೆ ಎಂದು ‘ಯಶಸ್ವಿನಿ’ಯನ್ನು ರದ್ದುಪಡಿಸಲಾಯಿತು. ಪ್ರಸಕ್ತ ಬಡ ಕುಟುಂಬಗಳಿಗೆ ಆಯುಷ್ಮಾನ್ ಭಾರತ್ ಅಡಿಯೂ ಚಿಕಿತ್ಸೆ ಸಿಗುತ್ತಿಲ್ಲ. ಯಶಸ್ವಿನಿಯಂತೂ ಇಲ್ಲವೇ ಇಲ್ಲ. ಹೊಸ ಬಗೆಯ ವೈರಾಣುಗಳು, ಅವು ಸೃಷ್ಟಿಸುತ್ತಿರುವ ಸಾಂಕ್ರಾಮಿಕ ಕಾಯಿಲೆಗಳ ಪರಿಣಾಮ ಜನಸಾಮಾನ್ಯರ ವೈದ್ಯಕೀಯ ವೆಚ್ಚ ಹೆಚ್ಚುತ್ತಲೇ ಸಾಗಿದೆ. ಅಲ್ಲದೆ, ಕುಟುಂಬದ ಆರ್ಥಿಕ ಸ್ಥಿತಿಯನ್ನೇ ಏರುಪೇರುಗೊಳಿಸುತ್ತಿದೆ. ಆರೋಗ್ಯ ರಕ್ಷಣೆ ಇತ್ತೀಚಿನ ದಿನಗಳಲ್ಲಿ ಮೊದಲ ಆದ್ಯತೆಯಾಗಿಯೂ ಪರಿಣಮಿಸಿದೆ. ಹೀಗಾಗಿ, ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಾಗ, ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಸಾರ್ಥಕತೆ. ಈ ನಿಟ್ಟಿನಲ್ಲಿ ಇರುವ ಲೋಪಗಳನ್ನು ಸರಿಪಡಿಸಿಕೊಳ್ಳುವ ಕೆಲಸ ಆಗಬೇಕು.