ದೇಶದ ಬಹುತೇಕ ರಾಜ್ಯಗಳಲ್ಲಿ ಇತ್ತೀಚೆಗೆಷ್ಟೇ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾದ ಪರಿಣಾಮ, ಒಂದಷ್ಟು ನಿರಾಳತೆಯೂ ಮೂಡಿತ್ತು. ಆದರೂ, ತಜ್ಞರು ಕರೊನಾ ಸೋಂಕಿನ ಮೂರನೇ ಅಲೆಯ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದು, ಯಾವುದೇ ತರಹದ ನಿರ್ಲಕ್ಷ್ಯ ದುಬಾರಿಯಾಗಿ ಪರಿಣಮಿಸಬಹುದು ಎಂದಿದ್ದಾರೆ. ಈ ನಡುವೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಮತ್ತೆ ಕರೊನಾ ಆತಂಕ ಹೆಚ್ಚಿಸಿವೆ. ಬುಧವಾರ ದೇಶದಲ್ಲಿ ಪತ್ತೆಯಾದ ಒಟ್ಟು 43,165 ಸೋಂಕು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು (22,056) ಕೇರಳವೊಂದರಲ್ಲೇ ಪತ್ತೆಯಾಗಿವೆ. ಅಷ್ಟೇ ಅಲ್ಲ, ದೇಶದಲ್ಲೇ ಹೆಚ್ಚು ಸಕ್ರಿಯ ಪ್ರಕರಣಗಳು (1.49 ಲಕ್ಷಕ್ಕೂ ಅಧಿಕ) ಈ ರಾಜ್ಯದಲ್ಲೇ ಇವೆ. ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ನಿಧಾನವಾಗಿ ತಗ್ಗುತ್ತಿದೆಯಾದರೂ, ಇಲ್ಲಿ ಮರಣಪ್ರಮಾಣ ನಿಯಂತ್ರಣಕ್ಕೆ ಬರಬೇಕಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಹೊಸ ಸವಾಲಿನ ಬಗ್ಗೆ ಮೈಮರೆಯುವಂತಿಲ್ಲ.
ಕೇರಳದ ಪರಿಸ್ಥಿತಿ ಕಳವಳ ಮೂಡಿಸಿದ್ದು, ಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ತಜ್ಞರ ತಂಡ ಕಳುಹಿಸಲು ನಿರ್ಧರಿಸಿದೆ. ಸೋಂಕು ಪ್ರಸರಣ ತಡೆಗೆ ರಾಜ್ಯದೊಂದಿಗೆ ಕೈಜೋಡಿಸಿ, ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಹೇಳಿದ್ದಾರೆ. ಅಲ್ಲದೆ, ಕೇರಳದಲ್ಲಿ ವಾರಾಂತ್ಯ ಲಾಕ್ಡೌನ್ ಕೂಡ ಘೋಷಿಸಲಾಗಿದೆ. ಸೋಂಕು ಪ್ರಸರಣದ ವೇಗವನ್ನು ನಿಯಂತ್ರಿಸದಿದ್ದಲ್ಲಿ, ಈ ಆತಂಕ ಮತ್ತಷ್ಟು ರಾಜ್ಯಗಳಿಗೂ ವಿಸ್ತರಣೆಯಾಗುವ ಅಪಾಯವಿದೆ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಾರ್ಖಂಡ, ಒಡಿಶಾ, ತಮಿಳುನಾಡು, ಮಿಜೋರಂ, ಗೋವಾ, ಪುದುಚೇರಿಯಲ್ಲಿ ಈಗಲೂ ಕಠಿಣ ನಿರ್ಬಂಧಗಳು ಮುಂದುವರಿದಿವೆ.
ಕಳೆದ ಬಾರಿಯ ಸ್ಥಿತಿಯನ್ನು ಮರೆಯುವಂತಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಬಳಿಕವೇ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೋವಿಡ್ ಉಪಟಳ ಅಧಿಕವಾಯಿತು. ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸಬೇಕಾಯಿತು. ವೈದ್ಯಕೀಯ ಆಮ್ಲಜನಕದ ಕೊರತೆ, ಅಗತ್ಯ ಔಷಧಗಳ ಕೊರತೆ ಕಾಡಿತು. ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಯಿತು. ಹೀಗೆ ಎರಡನೇ ಅಲೆ ಸೃಷ್ಟಿಸಿದ ಹಾನಿ ಮತ್ತು ಅದು ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಂತೂ ಎಲ್ಲರ ಗಮನ ರಾಜಕೀಯ ಬೆಳವಣಿಗೆಗಳ ಮೇಲಿದೆ. ಅಧಿಕಾರಿವರ್ಗವೂ ಅದರಲ್ಲೇ ಮಗ್ನವಾಗಿದೆ. ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ್ದಾರಾದರೂ, ಸಂಪುಟ ವಿಸ್ತರಣೆ ನಡೆಯಬೇಕಿದೆ. ಹೀಗಾಗಿ ಆಡಳಿತವರ್ಗದ ಗಮನ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿಲ್ಲ. ಕರೊನಾ ನಿಯಂತ್ರಣದ ವಿಷಯದಲ್ಲಿ ಒಂದಷ್ಟು ಅಸಡ್ಡೆ ತೋರಿದರೂ, ಅದರಿಂದ ಭಾರಿ ಹಾನಿ ಅನುಭವಿಸಬೇಕಾಗುತ್ತದೆ. ರಾಜಕೀಯ ಬೆಳವಣಿಗೆಗಳೇನೆ ಇರಲಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೋಂಕು ನಿಯಂತ್ರಣ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಜನರು ಕೂಡ ಸುರಕ್ಷಾ ಕ್ರಮಗಳನ್ನು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬಾರದು.