ನ್ಯೂಸ್

ಸಂಪಾದಕೀಯ: ಮಹತ್ವದ ಮುನ್ನಡೆ; ಕಳಸಾ-ಬಂಡೂರಿ ವಿಸõತ ಯೋಜನಾ ವರದಿಗೆ ಸಮ್ಮತಿ

Bengaluru - General - Rama Kishan K V

ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯ ವಿಸõತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಗೆ ಶೀಘ್ರವೇ ಚಾಲನೆ ನೀಡುವುದಾಗಿ ಹೇಳಿರುವುದು ಕಿತ್ತೂರು ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ಮಹತ್ವದ ಯೋಜನೆಯೊಂದರ ಬಹುದಿನಗಳ ಕನಸು ನನಸಾಗುವ ನಿರೀಕ್ಷೆ ಮೂಡಿದೆ. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಹದಾಯಿ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್​ನಲ್ಲಿ ತೀರ್ಪು ನೀಡಿತ್ತು.

ಮಹದಾಯಿಯಲ್ಲಿನ 200 ಟಿಎಂಸಿ ಅಡಿ ನೀರಿನಲ್ಲಿ ಕೇವಲ 9 ಟಿಎಂಸಿ ಅಡಿ ನೀರನ್ನು ಗೋವಾ ಬಳಸಿಕೊಳ್ಳುತ್ತಿದ್ದು, ಇನ್ನುಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಹೀಗಾಗಿ, ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ ನಾವು 14.98 ಟಿಎಂಸಿ ಅಡಿ ನೀರನ್ನು ಕೇಳುತ್ತಿದ್ದೇವೆ ಎಂದು ಕರ್ನಾಟಕ ಸರ್ಕಾರ ವಾದ ಮಂಡಿಸಿತ್ತು. ಮಹದಾಯಿ ಮತ್ತು ಮಲಪ್ರಭಾ ನದಿಗಳನ್ನು ಜೋಡಿಸಿ, ಕಳಸಾ ಹಾಗೂ ಬಂಡೂರಿ ನಾಲೆಗಳ ಮೂಲಕ ನೀರು ತಿರುಗಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರಗಳು ಮತ್ತು ಸುತ್ತಮುತ್ತಲ ಪ್ರದೇಶಗಳ ಕುಡಿಯುವ ನೀರಿಗೆ ಬಳಸಿಕೊಳ್ಳುವ ಕರ್ನಾಟಕದ ಯೋಜನೆಗೆ ಗೋವಾ ಸರ್ಕಾರ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಮಂಡಳಿ ತೀರ್ಪಿನ ಪ್ರಕಾರವಾಗಿ ಕರ್ನಾಟಕಕ್ಕೆ ಒಟ್ಟು 13.07 ಟಿಎಂಸಿ ನೀರು ಹಂಚಿಕೆಯಾಗಿದ್ದು, ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ಮಹದಾಯಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಳಕೆ ಮಾಡಲು 1.50 ಟಿಎಂಸಿ ಹಾಗೂ ವಿದ್ಯುಚ್ಛಕ್ತಿಗೆ ಉತ್ಪಾದನೆಗೆ 8.02 ಟಿಎಂ ಅಡಿ ನೀರು ಹಂಚಿಕೆ ಮಾಡಲಾಗಿದೆ. ಕಳಸಾ ಹಳ್ಳಕ್ಕೆ ನಿರ್ವಿುಸಲಾಗುವ ಡ್ಯಾಂನಿಂದ 1.7 ಟಿಎಂಸಿ ಹಾಗೂ ಬಂಡೂರಿ ಡ್ಯಾಂನಿಂದ 2.18 ಟಿಎಂಸಿ ನೀರು ಪಡೆದುಕೊಳ್ಳುವ ಕರ್ನಾಟಕದ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಯೋಜನೆಗೆ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುತ್ತೇವೆ; ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ವಾಸ್ತವದಲ್ಲಿ ಕಾರ್ಯಗತವಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.

ಏಕೆಂದರೆ, ಬಸವರಾಜ ಬೊಮ್ಮಾಯಿ ಅವರು ಕಳಸಾ-ಬಂಡೂರಿ-ಮಹದಾಯಿ ಹೋರಾಟದಿಂದಲೇ ರಾಜಕೀಯ ಮರುಹುಟ್ಟು ಪಡೆದುಕೊಂಡವರು. ಜನತಾದಳದಲ್ಲಿದ್ದಾಗ ಈ ಯೋಜನೆಯ ಜಾರಿಗಾಗಿ ಆಗ್ರಹಿಸಿ 2007ರ ಜುಲೈನಲ್ಲಿ ಧಾರವಾಡದಿಂದ ನವಲಗುಂದದವರೆಗೆ 21 ದಿನಗಳ ಕಾಲ 232 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದರು. ಅಲ್ಲದೆ, ಜಲ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ. ಮಹದಾಯಿ ನದಿ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದ್ದರೂ ಅದನ್ನು ಬಳಸಿಕೊಳ್ಳುವ ಕರ್ನಾಟಕದ ಯೋಜನೆಗೆ ಸುದೀರ್ಘ ಕಾಲದಿಂದ ಗೋವಾ ಅಡ್ಡಿ ಮಾಡುತ್ತಿರುವುದು ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಸಮ್ಮತಾರ್ಹ ಸಂಗತಿಯಲ್ಲ. ದೇಶದ ಬೇರೆ ಬೇರೆ ರಾಜ್ಯಗಳ ನಡುವೆ ಜಲ ಹಾಗೂ ಗಡಿ ವಿವಾದಗಳಿದ್ದು, ಇಂಥ ಬಿಕ್ಕಟ್ಟುಗಳನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಂಡರೆ ಕಾನೂನು ಹೋರಾಟಕ್ಕೆ ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಹಾಗೂ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಶೀಘ್ರವಾಗಿ ಜಾರಿ ಮಾಡಲು ಅನುಕೂಲವಾಗುತ್ತದೆ.