ವಿದ್ಯುತ್ ಸಂಪರ್ಕ ಮತ್ತಿತರ ಸೇವೆಗಳ ವಿಷಯದಲ್ಲಿ ಜನರಿಗೆ ಸುಲಭದಲ್ಲಿ ಕೆಲಸವಾಗುವ ಹಾಗೆ ಮಾಡುವ ನಿಟ್ಟಿನಲ್ಲಿ ಇಂಧನ ಇಲಾಖೆ ‘ಜನಸ್ನೇಹಿ ವಿದ್ಯುತ್’ ಯೋಜನೆಯನ್ನು ರೂಪಿಸಿದೆ. ಇಂದು ಅಂದರೆ, ಅ.29ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ. ವಿದ್ಯುತ್ ಸಂಪರ್ಕ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಇಲಾಖೆಯನ್ನು ಗ್ರಾಹಕಸ್ನೇಹಿಯಾಗಿಸುವುದು ಇದರ ಉದ್ದೇಶಗಳಲ್ಲಿ ಸೇರಿದೆ. ಅರ್ಜಿ ಸಲ್ಲಿಸಿದ 24 ತಾಸಿನ ಒಳಗಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಈ ಯೋಜನೆಯನ್ನು ಕನಿಷ್ಠ 10 ಲಕ್ಷ ಜನರಿಗೆ ತಲುಪಿಸುವ ಉದ್ದೇಶವಿದ್ದು, ರಾಜ್ಯದ 409 ಉಪಕೇಂದ್ರಗಳಲ್ಲಿ ಜಾರಿಯಾಗಲಿದೆ. ಅರ್ಜಿದಾರರು ಕನಿಷ್ಠ ದಾಖಲಾತಿ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಹಾಗೂ ಕಚೇರಿಗೆ ತೆರಳಬೇಕಾದ ಪ್ರಮೇಯ ಇರದು. ವಿದ್ಯುತ್ ಸ್ಥಾವರವನ್ನು ಒಬ್ಬರ ಹೆಸರಿನಿಂದ ಮತ್ತೊಬ್ಬರ ಹೆಸರಿಗೆ ವರ್ಗಾಯಿಸುವ ಸವಲತ್ತು ಸಹ ಈ ಯೋಜನೆಯಲ್ಲಿ ಇರಲಿದೆ. ತಂತ್ರಜ್ಞಾನವು ಅಗಾಧವಾಗಿ ಬೆಳೆದಿರುವಾಗ ಸರ್ಕಾರಿ ಇಲಾಖೆಗಳು ಸಹ ಹೆಚ್ಚೆಚ್ಚು ತಂತ್ರಜ್ಞಾನಸ್ನೇಹಿ ಉಪಕ್ರಮಗಳನ್ನು ಕೈಗೊಂಡು ಜನರಿಗೆ ಸುಲಭದಲ್ಲಿ, ಸರಳವಾಗಿ ಸೇವೆ ನೀಡಲು ಮುಂದಾಗುವುದು ಕಾಲದ ಅನಿವಾರ್ಯ ಅಗತ್ಯ. ಇಲ್ಲವಾದಲ್ಲಿ ಜನರು ಖಾಸಗಿಯವರತ್ತ ಹೆಚ್ಚೆಚ್ಚು ವಾಲುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಈಗಾಗಲೇ ಅನೇಕ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ್ದು, ಭವಿಷ್ಯದಲ್ಲಿ ಮತ್ತಷ್ಟು ಸಂಸ್ಥೆಗಳು ಇದೇ ಹಾದಿ ಹಿಡಿಯುವ ಲಕ್ಷಣಗಳು ನಿಚ್ಚಳವಾಗಿವೆ. ಅದರಲ್ಲೂ ಕರೊನೊತ್ತರ ದಿನಗಳಲ್ಲಿ ಸರ್ಕಾರಗಳ ತೆರಿಗೆ ಸಂಗ್ರಹಣೆ ಮೇಲೆ ಪರಿಣಾಮ ಆಗಿದ್ದು, ಹಣಕಾಸು ಕ್ರೋಡೀಕರಣಕ್ಕೆ ಬೇರೆ ಬೇರೆ ಮಾರ್ಗಗಳನ್ನು ಅವು ಶೋಧಿಸುವುದು ಸಹಜ. ಹೀಗಾಗಿ ಸರ್ಕಾರಿ ಸಂಸ್ಥೆಗಳು ಸೇವೆಯ ಉನ್ನತೀಕರಣಕ್ಕೆ ಆದ್ಯ ಗಮನ ನೀಡಲೇಬೇಕಾಗುತ್ತದೆ. ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಕೆಯಿಂದ ಅನೇಕ ಪ್ರಯೋಜನಗಳಿದ್ದು, ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಕೆಲಸಕಾರ್ಯಗಳು ನೆರವೇರಲು ಅನುವಾಗುತ್ತದೆ. ಇದರ ಜತೆಗೆ, ಇಂಧನ ಇಲಾಖೆ ವಿದ್ಯುತ್ತಿನ ಕೊರತೆ ಆಗದಂತೆ ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಕೆಲ ದಿನಗಳ ಹಿಂದೆ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಯ ಆದುದರಿಂದ ಕೊರತೆ ಆಗಬಹುದೆಂಬ ಸನ್ನಿವೇಶ ನಿರ್ವಣವಾಗಿತ್ತು. ನಂತರ ಹೇಗೋ ಪರಿಸ್ಥಿತಿ ಸರಿಹೋಯಿತು. ಹೀಗಾಗಿ, ಪವನ ವಿದ್ಯುತ್ ಮತ್ತು ಸೌರ ವಿದ್ಯುತ್- ಹೀಗೆ ಪರ್ಯಾಯ ಮೂಲಗಳತ್ತ ಹೆಚ್ಚು ಆದ್ಯತೆ ನೀಡಬೇಕಾದುದು ಅನಿವಾರ್ಯ. ಅದರಲ್ಲೂ, ಜಾಗತಿಕ ತಾಪಮಾನ ಹೆಚ್ಚುತ್ತಿರುವ ಮತ್ತು ಅದರ ಪರಿಣಾಮಗಳು ಅನೇಕ ಬಗೆಗಳಲ್ಲಿ ಗೋಚರಿಸುತ್ತಿರುವ ಇಂದಿನ ದಿನಮಾನದಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ಕಡಿಮೆ. ಪರಿಸರದ ಮೇಲೆ ಇನ್ನಷ್ಟು ಒತ್ತಡ ಹೇರುವ ಪರಿಸ್ಥಿತಿ ಇಲ್ಲ. ಹೀಗಾಗಿ ಇರುವ ಮೂಲಗಳಲ್ಲೇ ಗರಿಷ್ಠ ಉತ್ಪಾದನೆ ಮಾಡಿಕೊಂಡು, ಅದನ್ನು ವಿವೇಕಯುತವಾಗಿ ಬಳಸುವುದು ಅನಿವಾರ್ಯ ಎಂಬ ವಾತಾವರಣ ನಿರ್ವಣವಾಗಿದೆ. ಇದರೊಟ್ಟಿಗೆ, ವಿದ್ಯುತ್ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಹ ತ್ವರಿತವಾಗಿ ಕಾರ್ಯವಾಗಬೇಕಿದೆ. ಇಲ್ಲವಾದಲ್ಲಿ ಅನಗತ್ಯ ಪೋಲು ಹೆಚ್ಚಿ, ಮತ್ತಷ್ಟು ಕಷ್ಟ ಎದುರಿಸಬೇಕಾಗುತ್ತದೆ.