ನಿವೇಶನ ಹಂಚಿಕೆ ಮಾಡುವುದಾಗಿ ಹಣ ಪಡೆದು ಸದಸ್ಯತ್ವ ನೀಡಿ ಹತ್ತಾರು ವರ್ಷಗಳಿಂದ ಸತಾಯಿಸುತ್ತಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ವಿಜಯವಾಣಿ ಪ್ರಕಟಿಸಿದ ಸರಣಿ ವರದಿ ಅಭಿಯಾನದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಹೊಸದಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳ ನೋಂದಣಿ ಮಾಡುವುದಕ್ಕೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಮೂಲಕ ಹಲವು ಕಠಿಣ ನಿಯಮಗಳನ್ನು ಸೇರ್ಪಡೆ ಮಾಡಿದೆ. ಈ ಸಂಬಂಧ ಸಹಕಾರ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂಥದ್ದೊಂದು ಬಿಗಿಕ್ರಮ ತೀರಾ ಅವಶ್ಯವೂ, ಅನಿವಾರ್ಯವೂ ಆಗಿತ್ತು.
ಸೊಸೈಟಿ ಆರಂಭಿಸಬೇಕಾದಲ್ಲಿ, ಆ ಸ್ಥಳದಲ್ಲಿನ ಸ್ಥಳೀಯ ಸದಸ್ಯರನ್ನು ಹೊಂದುವುದು ಕಡ್ಡಾಯ ಮಾಡಿ ಸಂಖ್ಯೆಯನ್ನು ನಿಗದಿ ಮಾಡಲಾಗಿರುವುದು ಗಮನಾರ್ಹ. ಹಳೆಯ ನಿಯಮದಲ್ಲಿ ಈ ಅಂಶ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಸೊಸೈಟಿ ಪ್ರಮುಖರು ಇಷ್ಟ ಬಂದವರನ್ನು ಸೇರಿಸಿಕೊಂಡು ಸಂಘ ಸ್ಥಾಪಿಸುತ್ತಿದ್ದರು. ಅಲ್ಲದೆ, ಹೊಸ ನಿಯಮಗಳ ಪ್ರಕಾರ ಕೃಷಿ ಭೂಮಿಯನ್ನು ನೇರ ಖರೀದಿ ಮೂಲಕ ಅಥವಾ ಸಂಘದ ಹೆಸರಿನಲ್ಲೇ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಭೂ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೆ ಹಣ ನೀಡುವ ವೇಳೆ ಆಡಳಿತ ಮಂಡಳಿ ಜತೆಗೆ ರ್ಚಚಿಸಿ ಆನಂತರ ಚೆಕ್ ಮೂಲಕ ಹಣ ನೀಡಬೇಕು ಎಂಬುದು ಸೇರಿದಂತೆ 18ಕ್ಕಿಂತ ಅಧಿಕ ಕಠಿಣ ನಿಯಮ ಸೇರಿಸಲಾಗಿರುವುದು ಸ್ವಾಗತಾರ್ಹ. ಆದರೆ, ಹೊಸ ಮಾರ್ಗಸೂಚಿ ಕೇವಲ ತೋರಿಕೆಗೆ ಎಂಬಂತೆ ಆಗಬಾರದು. ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ಸಹಕಾರ ಇಲಾಖೆಯ ಮೇಲಿದೆ. ಆಗಲೇ ಇಂಥ ಅಪಸವ್ಯಗಳಿಗೆ, ವಿಳಂಬನೀತಿಗಳಿಗೆ ಕಡಿವಾಣ ಹಾಕಲು ಸಾಧ್ಯ.
ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ಸೊಸೈಟಿ ತೆರೆದು ಜನರಿಗೆ ಯಾವ ರೀತಿಯಲ್ಲಿ ವಂಚನೆ ಮಾಡಲಾಗುತ್ತದೆ ಎಂಬುದನ್ನು ವಿಜಯವಾಣಿ ಸರಣಿ ವರದಿಯಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ. ಕಳೆದ 5-10 ವರ್ಷಗಳಿಂದ ನಿವೇಶನ ಹಂಚಿಕೆ ಮಾಡದ 127 ಸೊಸೈಟಿಗಳ ಪೈಕಿ 56 ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿವೆ ಎಂಬುದು ಗಮನಾರ್ಹ ಸಂಗತಿ. ಇದೀಗ ಸರ್ಕಾರಿ ಇಲಾಖೆ, ಉದ್ಯಮ, ಮಂಡಳಿ ನೌಕರರ ಹೆಸರಿನಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಒಂದಕ್ಕಿಂತ ಹೆಚ್ಚಿನ ಇಲಾಖೆಗಳನ್ನು ಸೇರಿಸಿ ನಿರ್ಮಾಣ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಗೃಹ ನಿರ್ಮಾಣ ಸಹಕಾರ ಸಂಘಗಳ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರಿಂದ ನಿರಂತರ ದೂರುಗಳು ಬರುತ್ತಿದ್ದು, ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಇಲ್ಲಿ ಇಡೀ ವ್ಯವಸ್ಥೆಯ ಶುದ್ಧೀಕರಣವಾದಾಗಲೇ ಸಮಸ್ಯೆಗೆ ಪರಿಹಾರ ಸಾಧ್ಯ. ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ತಪ್ಪೆಸಗಿರುವ ಸಂಘಗಳ ಮತ್ತು ಅದಕ್ಕೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಅಡ್ಡಮಾರ್ಗಗಳನ್ನು ಹಿಡಿದು ಅಕ್ರಮಕ್ಕೆ ಮುಂದಾಗಿ ಜನರನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸರ್ಕಾರ ಇನ್ನಾದರೂ ಇಂಥ ಸೊಸೈಟಿಗಳ ಕುರಿತು ಎಚ್ಚರಿಕೆ ವಹಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.