ನ್ಯೂಸ್

ಗೋಳಾಗದಿರಲಿ ಗೀಳು; ಸೆಲ್ಫಿ ದುರಂತಗಳ ರಾಜಧಾನಿ ಭಾರತ

Webdesk - Ravikanth

ಸೆಲ್ಪಿ ತೆಗೆದುಕೊಳ್ಳಲು ಹೋದ ನಾಲ್ವರು ಯುವತಿಯರು ಸಾವನ್ನಪ್ಪಿದ ದುರ್ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್​ನಲ್ಲಿ ಸಂಭವಿಸಿರುವುದು ತೀವ್ರ ಖೇದಕರ ಸಂಗತಿ. ಫಾಲ್ಸ್​ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಬೀಳುತ್ತಿದ್ದ ಹುಡುಗಿಯೊಬ್ಬಳನ್ನು ರಕ್ಷಣೆ ಮಾಡಲು ಹೋದಾಗ ಉಳಿದ ಮೂವರು ಕೂಡ ಬಿದ್ದು ದುರಂತ ಸಂಭವಿಸಿದೆ. ಹೀಗೆ ಸೆಲ್ಫಿ ದುರಂತಗಳು ಆಗೀಗ ವರದಿಯಾಗುತ್ತಿರುತ್ತವೆ. ಭಾರತವನ್ನು ಸೆಲ್ಫಿ ಅವಘಡಗಳ, ಸಾವುಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಭಾರತ, ರಷ್ಯಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿ ಸೆಲ್ಫಿ ಸಾವುಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತವೆ ಎಂದು ಅಧ್ಯಯನ ವರದಿಗಳು ಬಹಿರಂಗಪಡಿಸಿವೆ.

ಅಮೆರಿಕದ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯ ನಡೆಸಿದ ಅಧ್ಯಯನದ ಪ್ರಕಾರ, 2011 ಮತ್ತು 2017ರ ನಡುವೆ ಸೆಲ್ಫಿ ತೆಗೆದುಕೊಳ್ಳುವಾಗ 259 ಜನರು ಸಾವನ್ನಪ್ಪಿರುವುದು ತಿಳಿದುಬಂದಿದ್ದು, ಇದರಲ್ಲಿ ಅರ್ಧದಷ್ಟು ಜನರು ಭಾರತೀಯರೇ ಆಗಿದ್ದಾರೆ. 2011ರ ಅಕ್ಟೋಬರ್​ನಿಂದ 2017ರ ನವೆಂಬರ್​ವರೆಗೆ 137 ಘಟನೆಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ 259 ಸಾವುಗಳು ಸಂಭವಿಸಿವೆ. ಮೊದಮೊದಲು ಮೊಬೈಲ್​ಫೋನನ್ನು ಸಂಭಾಷಣೆಗಾಗಿ ಬಳಸಲಾಗುತ್ತಿತ್ತು. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಸ್ಮಾರ್ಟ್​ಫೋನ್​ಗಳ ಯುಗ ಆರಂಭವಾದ ನಂತರ ಹಾಗೂ ಇಂಟರ್​ನೆಟ್ ಸುಲಭದಲ್ಲಿ ಲಭಿಸತೊಡಗಿದಂತೆ ಅದರ ಬಳಕೆಯ ವ್ಯಾಪ್ತಿ ಅಗಾಧ ಪ್ರಮಾಣದಲ್ಲಿ ಪಸರಿಸಿತು. ಗುಣಮಟ್ಟದ ಫೋಟೋ ತೆಗೆಯಲು, ವಿಡಿಯೋ ಚಿತ್ರಿಸಲು ಅಗತ್ಯವಿರುವ ಉತ್ತಮ ಲೆನ್ಸ್ ಸೌಲಭ್ಯವಿರುವ ಮೊಬೈಲ್​ಗಳು ಈಗ ದಂಡಿಯಾಗಿ ಲಭಿಸುತ್ತವೆ.

ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳನ್ನು ಬಂಧುಗಳಿಗೆ, ಸ್ನೇಹಿತರಿಗೆ ಹಂಚಿಕೊಳ್ಳುವ ಪ್ರವೃತ್ತಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ, ಸದಾ ಕೈಯಲ್ಲೇ ಇರುವ ಮೊಬೈಲ್​ನಿಂದಾಗಿ ಮನತೋಚಿದಾಗಲೆಲ್ಲ ಫೋಟೋ ಕ್ಲಿಕ್ಕಿಸುವ, ವಿಡಿಯೋ ಚಿತ್ರೀಕರಿಸುವ ಗೀಳು ಬೆಳೆಯುತ್ತಿದೆ. ಇನ್ನು ಪ್ರವಾಸಿ ತಾಣಗಳಿಗೆ ತೆರಳಿದಾಗಲಂತೂ ತೆಗೆದುಕೊಳ್ಳುವ ಫೋಟೋಗಳಿಗೆ ಲೆಕ್ಕವೇ ಇಲ್ಲ. ಈ ಸಂದರ್ಭಗಳಲ್ಲಿ ಉತ್ಸಾಹದಲ್ಲಿ ಮೈಮರೆತೋ, ಸಾಹಸಿ ಮನೋಭಾವದಿಂದಲೋ ಅಥವಾ ಇನ್ನಾರದೋ ಪ್ರೇರಣೆಯಿಂದಲೋ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವು- ನೋವುಗಳು ಸಂಭವಿಸುತ್ತಿವೆ. 2015ರಲ್ಲಿ ವೇಲ್ಸ್​ನ ಬ್ರಿಕಾನ್ ಬಿಕಾನ್ಸ್ ರಾಷ್ಟ್ರಿಯ ಉದ್ಯಾನದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈತ ಕೈಯಲ್ಲಿ ಹಿಡಿದಿದ್ದ ಸೆಲ್ಪಿ ಸ್ಟಿಕ್​ನ ಮೆಟಲ್ ರಾಡ್​ನಿಂದ ಸಿಡಿಲು ಆಕರ್ಷಿತಗೊಂಡು ಈತನ ಸಾವಿಗೆ ಕಾರಣವಾಗಿತ್ತು.

ದಕ್ಷಿಣ ಗುಜರಾತ್​ನ ದಾಂಗ್ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಅಪರಾಧ ಎಂದು ಘೋಷಿಸಲಾಗಿದೆ. ಸಪುತರಾ ಗಿರಿಧಾಮ ಮತ್ತು ಜಲಪಾತಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಸೆಲ್ಪಿ ಅವಘಡಗಳು ವ್ಯಾಪಕವಾಗಿ ಸಂಭವಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಲ್ಲಿ, ಅಪಾಯಕಾರಿ ತಾಣಗಳಲ್ಲಿ ಸರ್ಕಾರ ಇಲ್ಲವೇ ಸ್ಥಳೀಯ ಆಡಳಿತಗಳು ಎಚ್ಚರಿಕೆಯ ಫಲಕಗಳನ್ನು ಹಾಕಿದರೆ ಒಳಿತು. ಯಾವುದೇ ಒಂದು ತಂತ್ರಜ್ಞಾನ ಹಾಗೂ ತಂತ್ರಜ್ಞಾನದ ಆಧರಿತ ಉಪಕರಣವನ್ನು ಸೂಕ್ತವಾಗಿ ಬಳಸಿಕೊಂಡರೆ ಅದು ವರವಾಗಿ ಪರಿಣಮಿಸುತ್ತದೆ. ಇಲ್ಲದಿದ್ದರೆ ಶಾಪವಾಗಿ ಕಾಡುತ್ತದೆ. ಮೊಬೈಲ್​ಫೋನ್ ಕೂಡ ಇದಕ್ಕೆ ಹೊರತಾಗಿಲ್ಲ. ಈಗೀಗ ದೊಡ್ಡ ವ್ಯಸನವಾಗಿರುವ ಇಂಟರ್ನೆಟ್ ಬಳಕೆಗೂ ಈ ಮಾತು ಅನ್ವಯ. ಅಗತ್ಯಕ್ಕೆ ತಕ್ಕಷ್ಟು, ಹಿತಮಿತವಾಗಿ, ಹುಷಾರಾಗಿ ಬಳಸುವತ್ತ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಬಹುಮುಖ್ಯ.