ತಂತ್ರಜ್ಞಾನದ ವ್ಯಾಪ್ತಿ ಬೆಳೆದಂತೆಲ್ಲ ವಂಚನೆಯ ದಾರಿಗಳೂ ಹೆಚ್ಚುತ್ತಿವೆ. ಅದರಲ್ಲೂ, ಕರೊನಾ ಸೋಂಕಿನ ಹಾವಳಿ ಸೃಷ್ಟಿಸಿದ ಬಿಕ್ಕಟ್ಟು ಆರ್ಥಿಕ ಸ್ಥಿತಿಯನ್ನೇ ಡೋಲಾಯಮಾನವಾಗಿಸಿದೆ. ಹೀಗಾಗಿ, ಸುಲಭವಾಗಿ ದುಡ್ಡು ಮಾಡಲು ಸಮಾಜವಿರೋಧಿ ಶಕ್ತಿಗಳು ಅಪರಾಧದ ನಾನಾ ತಂತ್ರಗಳನ್ನು ಬಳಸುತ್ತಿವೆ. ಇದರ ಪರಿಣಾಮವೇ ಕಳೆದ ಒಂದೂವರೆ ವರ್ಷದಲ್ಲಿ ಸೈಬರ್ ಅಪರಾಧದ ಪ್ರಮಾಣವೂ ವೇಗವಾಗಿ ಹೆಚ್ಚಿದ್ದು, ಕಳವಳದ ವಿಚಾರ. ಇಂಥ ಮೋಸ, ಕುತಂತ್ರಗಳಿಗೆ ಒಳಗಾಗದಂತೆ ಅರಿವು, ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆಯಾದರೂ, ಜನರು ಆಮಿಷ, ತರಾತುರಿ, ಕೆಲವೊಮ್ಮೆ ಆತಂಕದ ಕಾರಣದಿಂದಲೂ ವಂಚನೆಯ ದಾಳವಾಗಿ ಬಿಡುತ್ತಾರೆ. ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವುದು ಸುಲಭದ ಮಾತಲ್ಲ. ಸೈಬರ್ ವಂಚಕರು ಉತ್ತರ ಭಾರತದ ದೂರದ ಯಾವುದೋ ಪ್ರದೇಶದಿಂದ ಅಥವಾ ವಿದೇಶಗಳಲ್ಲಿ ಕುಳಿತು, ಮೂಲ ದಾಖಲೆ, ಗುರುತು ಬಿಟ್ಟುಕೊಡದೆ ಹಣ ಎಗರಿಸಿರುತ್ತಾರೆ. ಹಾಗಾಗಿ, ಹಣ ಕಳೆದುಕೊಂಡವರ ಬಳಿ ನ್ಯಾಯಪ್ರಾಪ್ತಿಗೆ ಅನ್ಯಮಾರ್ಗವೇ ಇರುವುದಿಲ್ಲ. ಆದರೆ, ವ್ಯವಹರಿಸುವಾಗಲೇ ನಿರ್ಲಕ್ಷ್ಯ ತೊರೆದು, ಒಂದಿಷ್ಟು ಎಚ್ಚರಿಕೆ ವಹಿಸಿದರೆ ಖಂಡಿತವಾಗಿಯೂ ಇಂಥ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಬಹುದು.
ಕಳೆದ 18 ತಿಂಗಳಲ್ಲಿ ದೇಶಾದ್ಯಂತ 3,17,439 ಸೈಬರ್ ಅಪರಾಧಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ 21,562 ಪ್ರಕರಣ ದಾಖಲಾದರೆ, ಮಹಾರಾಷ್ಟ್ರದಲ್ಲಿ 50,806 ಅತೀ ಹೆಚ್ಚು ಸೈಬರ್ ಅಪರಾಧ ಕೇಸ್ ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ಅಂದಾಜು 4 ಸಾವಿರ ಕೋಟಿ ರೂ.ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗುತ್ತಿರುವುದು ಆತಂಕದ ಸಂಗತಿ. ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ 7 ರಿಂದ 10 ಸಾವಿರ ಸೈಬರ್ ವಂಚನೆ ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತಿದ್ದು, ಈ ಪೈಕಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಮಹಿಳೆಯರ ಮೇಲೆ ನಡೆಯುತ್ತಿರುವ ಸೈಬರ್ ಕ್ರೖೆಂಗಳ ಪೈಕಿ ದೇಶದಲ್ಲೇ ಕರ್ನಾಟಕ 5ನೇ ಸ್ಥಾನದಲ್ಲಿದ್ದು, 2020ರಲ್ಲಿ 143 ಕೇಸ್ ದಾಖಲಾಗಿವೆ.
ಮಹಿಳೆಯರ ಖಾಸಗಿ ಫೋಟೋ ಅಥವಾ ದೃಶ್ಯಗಳನ್ನು ಇರಿಸಿಕೊಂಡು ಬೆದರಿಕೆ ಹಾಕುವುದು, ಕಡಿಮೆ ಬೆಲೆಗೆ ಒಳ್ಳೆಯ ಸೀರೆ, ಆಭರಣ ಕೊಡುತ್ತೇವೆ ಎಂದು ಮೋಸ ಮಾಡುವುದು, ಯಾವುದೋ ನೆಪ ಮಾಡಿ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಕನ್ನ ಹಾಕುವುದು, ಡೇಟಿಂಗ್ ಆಪ್ಗಳಲ್ಲಿನ ಮಾಹಿತಿ ಕದ್ದು ಹಣಕ್ಕಾಗಿ ಪೀಡಿಸುವುದು ಸೇರಿದಂತೆ ಹಲವು ಬಗೆಯ ವಂಚನೆ/ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕಾದ ಸೈಬರ್ ಕ್ರೖೆಂ ಪೊಲೀಸ್ ಠಾಣೆಗಳು ಸಿಬ್ಬಂದಿ ಕೊರತೆ, ಮೂಲಸೌಕರ್ಯ ಇಲ್ಲದೆ ಬಳಲುತ್ತಿವೆ. ಪರಿಣಾಮ, ರಾಜ್ಯದಲ್ಲೇ 50 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂಥ ಅಪರಾಧ ನಿಯಂತ್ರಿಸುವಲ್ಲಿ ಜನಸಾಮಾನ್ಯರ ಪಾತ್ರವೂ ಮಹತ್ವದ್ದಾಗಿದ್ದು, ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಸೈಬರ್ ಲೋಕದಲ್ಲಿ ವಿಹರಿಸುವಾಗ ಸಂಯಮ, ವಿವೇಕ ತೋರಬೇಕು. ಆಗಲೇ ಪರಿಸ್ಥಿತಿ ಸುಧಾರಿಸಲು ಸಾಧ್ಯ.