ಭಾರತದಲ್ಲಿ ಕರೊನಾ ಮೂರನೆಯ ಅಲೆ ಬರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿರುವಂತೆಯೇ, ಒಂದೊಮ್ಮೆ ಅದು ಬಂದರೂ ಮೊದಲಿನಷ್ಟು ಪ್ರಬಲವಾಗಿರುವುದಿಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ನಡುವೆ, ಜನಜೀವನದ ಎಲ್ಲ ಚಟುವಟಿಕೆಗಳು ಈಗ ಮತ್ತೆ ಮೊದಲಿನ ಹಂತಕ್ಕೆ ಬಂದಿವೆ. ಇನ್ನೇನು ಕರೊನಾ ಕಾಟ ಕಡಿಮೆಯಾಯಿತು, ಎಲ್ಲವೂ ಹಳಿಗೆ ಬಂತು ಎನ್ನುವಷ್ಟರಲ್ಲೇ ಹೊಸ ಪ್ರಭೇದವೊಂದು ಗೋಚರಿಸಿರುವುದು ಸ್ವಲ್ಪಮಟ್ಟಿಗೆ ಆತಂಕ ಉಂಟುಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಬಿ.1.1.529 ಪ್ರಭೇದ ಕಂಡುಬಂದಿದ್ದು, ಇದು ಭಾರಿ ಅಪಾಯಕಾರಿ ಪ್ರಭೇದ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಫ್ರಿಕಾದಲ್ಲಿ ಈವರೆಗೆ 22 ಪ್ರಕರಣಗಳು ಪತ್ತೆಯಾಗಿವೆ. ಕರೊನಾದ ಈ ಅಸಹಜ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಸಹ ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರಯಾಣಿಕರಿಗೆ ನಿರ್ಬಂಧ ಹೇರುವ ಬಗ್ಗೆ ಯುರೋಪ್ ಒಕ್ಕೂಟ ಪರಿಶೀಲನೆ ನಡೆಸುತ್ತಿದೆ. ಭಾರತ ಸಹ ಈಗಾಗಲೇ ಈ ಕುರಿತು ನಿಗಾ ಇಟ್ಟಿದ್ದು, ಈ ಪ್ರಭೇದ ಕಂಡುಬಂದಿರುವ ದಕ್ಷಿಣ ಆಫ್ರಿಕಾ, ಬೋಟ್ಸವಾನಾ ಮತ್ತು ಹಾಂಕಾಂಗ್ನಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಹೊಸ ಪ್ರಭೇದದ ಸುದ್ದಿಯು ಶುಕ್ರವಾರ ಭಾರತದ ಷೇರುಪೇಟೆ ಮೇಲೂ ಪರಿಣಾಮ ಬೀರಿದ್ದು, ಷೇರುಪೇಟೆ ಕುಸಿತಕ್ಕೆ ಒಂದು ಕಾರಣವಾಗಿ ಪರಿಣಮಿಸಿದೆ. ಕರೊನಾ ಮೊದಲ ಮತ್ತು ಎರಡನೆಯ ಅಲೆಯ ಸಮಯದಲ್ಲಿ ಭಾರತವೂ ಸೇರಿದಂತೆ ವಿಶ್ವದ ಎಲ್ಲ ದೇಶಗಳು ವಿಪರೀತ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ಅದರಲ್ಲೂ ಎರಡನೆಯ ಅಲೆಯ ಸಂದರ್ಭದಲ್ಲಿ ಅಪಾರ ಸಾವುನೋವು ಸಂಭವಿಸಿತು. ಹೀಗಾಗಿ ಈಗ ಮೂರನೆಯ ಅಲೆಯ ಸಾಧ್ಯತೆ ಮತ್ತು ಹೊಸ ಪ್ರಭೇದ ಗೋಚರಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಎಚ್ಚರ ವಹಿಸುವುದು ಅನಿವಾರ್ಯ.
ಕರೊನಾದ ಡೆಲ್ಟಾ ರೂಪಾಂತರಿ ಎಬ್ಬಿಸಿದ ಹಾವಳಿ ಬಗ್ಗೆ ಗೊತ್ತೇ ಇದೆ. ಯಾವುದೇ ವೈರಸ್ ಕಾಲಕಾಲಕ್ಕೆ ಹೊಸ ಹೊಸ ರೂಪಾಂತರಗಳನ್ನು ಹೊಂದುವ ಸಾಧ್ಯತೆ ಇದ್ದೇ ಇರುತ್ತದೆ ಎಂಬುದಾಗಿ ವೈದ್ಯವಿಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಈ ಕಟ್ಟೆಚ್ಚರ ಎನ್ನುವುದು ತಾತ್ಕಾಲಿಕವಾಗಿರದೆ ದೀರ್ಘಕಾಲೀನವಾಗಿರಬೇಕಾಗುತ್ತದೆ. ಈ ಕಾರಣಕ್ಕೆ, ‘ಕರೊನಾ ಜತೆ ಸಹಜೀವನ ಅನಿವಾರ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳುತ್ತಿರುತ್ತಾರೆ. ಕರೊನಾ ಕಟ್ಟಿಹಾಕುವಲ್ಲಿ ಸರ್ಕಾರ ಹಾಗೂ ಸಾರ್ವಜನಿಕರು ಇಬ್ಬರ ಪಾತ್ರವೂ ಮುಖ್ಯವಾದುದು. ಇವರಲ್ಲಿ ಯಾರೊಬ್ಬರು ನಿರ್ಲಕ್ಷ್ಯ ತೋರಿದರೂ ತೊಂದರೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ವ್ಯಕ್ತಿಗತ ಅಂತರ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆಯಂತಹ ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದನ್ನು ಜನರು ಮರೆಯಬಾರದು. ಅದರಲ್ಲೂ ಈಗ ಸಾರ್ವಜನಿಕ ಬದುಕಿನ ಜತೆಗೆ ಶಾಲಾಕಾಲೇಜುಗಳು ಸಹ ಆರಂಭವಾಗಿದ್ದು, ಮತ್ತಷ್ಟು ಎಚ್ಚರದಿಂದ ಇರಬೇಕಾಗುತ್ತದೆ. ಮಕ್ಕಳ ಲಸಿಕೆ ಬರುವ ಹಂತದಲ್ಲಿದ್ದು, ಗೊಂದಲಕ್ಕೆ ಆಸ್ಪದವಾಗದಂತೆ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ನಡೆಸಬೇಕಾದ ಹೊಣೆಗಾರಿಕೆ ಆಳುಗರ ಮೇಲಿದೆ. ಇದರ ಜತೆಗೆ, ಮುಂದೆ ಬರಬಹುದಾದ ಆರೋಗ್ಯ ಸಂಬಂಧಿ ಸನ್ನಿವೇಶಗಳನ್ನು ಎದುರಿಸಲು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ವ್ಯವಸ್ಥೆಗಳು ಸಜ್ಜಾಗಿರಬೇಕಾಗುತ್ತದೆ.