ನ್ಯೂಸ್

ಸಂಪಾದಕೀಯ | ಜಾಗೃತಿ ಇರಲಿ: ಡಿಜಿಟಲ್ ವ್ಯವಹಾರ ಕುರಿತು ಸಮರ್ಪಕ ಮಾಹಿತಿ ಅಗತ್ಯ

ಜಗತ್ತು ಈಗ ಹೆಚ್ಚೆಚ್ಚು ಡಿಜಿಟಲ್​ವುಯವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆ ಹೊಂದಿದಂತೆಲ್ಲ ಇಂಥದು ಸಹಜವೇ. ಅದರಲ್ಲೂ ಕರೊನಾ ಅವಧಿಯಲ್ಲಿ ಈ ಪ್ರವೃತ್ತಿ ಹೆಚ್ಚತೊಡಗಿ ದಿನೇದಿನೇ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಭಾರತದಲ್ಲಿ ಸಹ ಡಿಜಿಟಲ್ ವ್ಯವಹಾರಕ್ಕೆ ಜಾಸ್ತಿ ಉತ್ತೇಜನ ದೊರೆಯುತ್ತಿದೆ. ಹೀಗಾಗಿ, ಸಣ್ಣಪುಟ್ಟ ಪಾವತಿಗೆ ಜನಸಾಮಾನ್ಯರು ಸಹ ಮೊಬೈಲಲ್ಲಿ ಯುಪಿಐ ವೇದಿಕೆಯನ್ನೇ ಬಳಸುತ್ತಿದ್ದಾರೆ. ಡಿಜಿಟಲ್ ವ್ಯವಹಾರವು ಕ್ಷಿಪ್ರ ಹಾಗೂ ಅಂಗೈಯಲ್ಲಿ ದೊರೆಯುವಂತಾದುದರಿಂದ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಈವರೆಗೆ ಕಂಡುಕೇಳರಿಯದ, ಊಹಿಸಲೂ ಆಗದ ಸೇವೆ-ಸವಲತ್ತುಗಳು ಸಹ ಈ ಮೂಲಕ ಲಭ್ಯವಾಗುತ್ತಿವೆ. ಈ ದೃಷ್ಟಿಯಿಂದ ಇದು ಸ್ವಾಗತಾರ್ಹ ವಿದ್ಯಮಾನ.

ಅದೇ ಸಂದರ್ಭದಲ್ಲಿ, ಡಿಜಿಟಲ್ ವ್ಯವಹಾರ ಮಾಡುವಾಗ ಕಟ್ಟೆಚ್ಚರ ವಹಿಸುವುದು ಸಹ ಅನಿವಾರ್ಯ ಎಂಬುದನ್ನು ಮನಗಾಣಬೇಕಿದೆ. ತಂತ್ರಜ್ಞಾನ ಬಳಕೆಯೇ ಇಲ್ಲಿ ಪ್ರಧಾನವಾದುದರಿಂದ, ಬಳಕೆದಾರರು ಈ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅಗತ್ಯ. ಇಲ್ಲಿ ಸ್ವಲ್ಪ ಯಾಮಾರಿದರೂ, ಗಾಳ ಹಾಕಿಕೊಂಡು ಕೂತಿರುವ ಸೈಬರ್ ಖದೀಮರ ಬಲೆಗೆ ಬಿದ್ದು ಹಾನಿ ಅನುಭವಿಸಬೇಕಾಗುತ್ತದೆ. ಇದಕ್ಕೆ ಒಂದು ಉದಾಹರಣೆ- ಕೆಲವೇ ನಿಮಿಷಗಳಲ್ಲಿ ಸಾಲ ಕೊಡುವ ಅನಧಿಕೃತ ಡಿಜಿಟಲ್ ಆಪ್​ಗಳು ಜನರಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿರುವುದು. ಸುಮಾರು 600 ಅನಧಿಕೃತ ಲೋನ್ ಆಪ್​ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗುರುತಿಸಿದೆ. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದು ಹಾಕಿದರೂ ಫೇಸ್​ಬುಕ್, ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಕ್ರಿಯವಾಗಿವೆ. ಗೂಗಲ್ ಪ್ಲೇಸ್ಟೋರ್​ನಲ್ಲಿ ನೂರಾರು ಸಾಲದ ಅಪ್ಲಿಕೇಷನ್​ಗಳು ಗೋಚರಿಸುತ್ತವೆ. ಈ ಪೈಕಿ ಕೆಲವು ಮಾತ್ರ, ಆರ್​ಬಿಐ ಅನುಮೋದಿತ ಆಪ್​ಗಳಿದ್ದು, ಉಳಿದವು ನಕಲಿ ಸಾಲದ ಆಪ್​ಗಳಾಗಿವೆ. ಇಂತಹ ಅನಧಿಕೃತ ಆಪ್​ಗಳ ಮೂಲಕ ಸಾಲ ಪಡೆದರೆ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ; ಇಎಂಐ ಪಾವತಿಸದವರಿಗೆ ಕಿರುಕುಳ ನೀಡಲಾಗುತ್ತದೆ. ಅಷ್ಟೇ ಅಲ್ಲ, ಬ್ಲಾ್ಯಕ್​ವೆುೕಲ್ ಕೂಡ ಮಾಡಲಾಗುತ್ತದೆ. ಈ ಕಿರುಕುಳ ತಾಳಲಾರದೆ ಅನೇಕರು ಆತ್ಮಹತ್ಯೆಯ ದಾರಿಹಿಡಿದಿರುವುದು ನಿಜಕ್ಕೂ ಕಳವಳಕಾರಿ, ಖೇದಕರ. ಇಂಥ ಆಪ್​ಗಳಿಂದ ಮೋಸಹೋದವರು ಅಥವಾ ಕಿರುಕುಳಕ್ಕೆ ಈಡಾದವರು ದೊಡ್ಡ ಸಂಖ್ಯೆಯಲ್ಲಿದ್ದರೂ, ಪೊಲೀಸ್ ದೂರು ನೀಡುವವರ ಪ್ರಮಾಣ ಕಡಿಮೆಯೇ.

2020 ಜ.1ರಿಂದ 2021ರ ಮಾ.31ರವರೆಗೆ ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ 2562 ದೂರುಗಳು ದಾಖಲಾಗಿವೆ. ಕೆಲವು ಸಾಲದ ಆಪ್​ಗಳು ಚೀನಾ ಮೂಲದವು ಎಂಬುದು ಮತ್ತಷ್ಟು ಗಂಭೀರ ವಿಚಾರ. ವೈಯಕ್ತಿಕ ವಿವರಗಳನ್ನು ನಮೂದಿಸುವುದು, ಪಾನ್​ಕಾರ್ಡ್ ಸೇರಿ ಅವರು ಕೇಳುವ ದಾಖಲೆಗಳನ್ನು ಅಪ್​ಲೋಡ್ ಮಾಡಿದರೆ ತ್ವರಿತವಾಗಿ ಪರಿಶೀಲನೆ ಪೂರ್ಣಗೊಳಿಸಿ ಖಾತೆಗೆ ಲಕ್ಷಾಂತರ ರೂಪಾಯಿ ಸಾಲದ ಹಣ ವರ್ಗಾವಣೆ ಮಾಡುತ್ತಾರೆ. ಈ ಜಾಲಕ್ಕೆ ಬಿದ್ದರೆ ಸುಲಭದಲ್ಲಿ ಪಾರಾಗಲಾರದು. ಸಾಲ ಕೊಡುವ ಸಂಸ್ಥೆ ಆರ್​ಬಿಐನಡಿ ನೋಂದಣಿ ಆಗಿದೆಯೇ ಎಂದು ಪರಿಶೀಲಿಸಿಕೊಂಡೇ ಮುಂದುವರಿಯಬೇಕು. ಈಗ ಅಧಿಕೃತ ಮಾಹಿತಿ ಪಡೆಯಲು ಬೇಕಾದಷ್ಟು ಮೂಲಗಳಿವೆ. ಯಾವುದೇ ಡಿಜಿಟಲ್ ವ್ಯವಹಾರ ನಡೆಸಬೇಕಿದ್ದರೂ, ಮೊದಲು ಆ ಕುರಿತು ಪೂರ್ಣ ಮಾಹಿತಿ ಹೊಂದಿರಬೇಕು.