ಕರೊನಾ 2ನೇ ಅಲೆ ಸೃಷ್ಟಿಸಿದ ದೊಡ್ಡಹಾನಿಯ ತೀವ್ರತೆಯನ್ನು ಮನಗಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಮಿಕ್ರಾನ್ ಮೂಲಕ ಸೃಷ್ಟಿಯಾಗಬಹುದಾದ ಮೂರನೇ ಅಲೆಯನ್ನು ಆರಂಭದಲ್ಲೇ ಕಟ್ಟಿಹಾಕಲು ತಯಾರಿ ಮಾಡಿಕೊಂಡಿರುವುದು ಸಮಾಧಾನಕರ ಸಂಗತಿ. ವರ್ಷಾಂತ್ಯದ ರಜೆ, ಹೊಸವರ್ಷದ ಸ್ವಾಗತದ ಸಂಭ್ರಮದಲ್ಲಿ ಜನರು ಮೈಮರೆತರೆ ಅಪಾಯ ಎಂಬುದನ್ನು ಮನಗಂಡು ಕರೊನಾ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಆರಂಭಿಸಲಾಗುತ್ತಿದೆ. ಇದರ ಭಾಗವಾಗಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಲ್ಲದೆ, ಜನವರಿ 3ರಿಂದ 15ರಿಂದ 18 ವರ್ಷದವರಿಗೆ ಲಸಿಕೆ ಆರಂಭಿಸಲಾಗುತ್ತಿರುವುದು ಮಹತ್ವದ ಬೆಳವಣಿಗೆ. ಶಾಲೆ-ಕಾಲೇಜುಗಳು ಈಗಾಗಲೇ ಆರಂಭಗೊಂಡಿವೆ. ಈ ಶೈಕ್ಷಣಿಕ ವರ್ಷವೂ ಸ್ತಬ್ಧಗೊಳ್ಳಬಾರದೆಂದು ಪಾಲಕರು ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಶಿಕ್ಷಕರು ಕೂಡ ಭಯದ ವಾತಾವರಣದಲ್ಲಿ ಪಾಠ ಮಾಡುವಂತಾಗಿದೆ. ಈಗ ಮಕ್ಕಳಿಗೆ ಲಸಿಕೆ ಶುರುವಾಗುತ್ತಿರುವುದರಿಂದ, ದೊಡ್ಡದೊಂದು ಆತಂಕ ಕರಗಲಿದೆ. ಹಾಗೆಯೇ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ, ಕರೊನಾ ವಿರುದ್ಧ ಹೋರಾಡುವ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಮೂರನೇ ಲಸಿಕೆ ಆರಂಭವಾಗಲಿದೆ. ‘ದೇಶದಲ್ಲಿ ಕರೊನಾ ಸಾಂಕ್ರಾಮಿಕ ವಿರುದ್ಧದ ಹೋರಾಟ ವೈಜ್ಞಾನಿಕ ಮಾರ್ಗದಲ್ಲಿ, ತಜ್ಞರ ಸಲಹೆಯಂತೆ ನಡೆಯುತ್ತಿದೆ. ಮುಂದೆಯೂ ನಡೆಯಲಿದೆ’ ಎಂದು ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ವ್ಯವಸ್ಥೆಯ ಸಿದ್ಧತೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಕೇಂದ್ರದ ಈ ಕ್ರಮಗಳ ಬೆನ್ನಲ್ಲೇ ರಾಜ್ಯ ಸರ್ಕಾರವು ಲಸಿಕೆ ಅಭಿಯಾನಕ್ಕೆ ಮೈಕೊಡವಿಕೊಂಡು ನಿಂತಿದೆ. ಅಲ್ಲದೆ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವೆಡೆ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾತ್ರಿ ಕರ್ಫ್ಯೂ (10ರಿಂದ 5) ಜಾರಿಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಹೊಸ ವರ್ಷಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಗುವ ಸಂಭ್ರಾಮಚರಣೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಫೆಬ್ರವರಿಯಲ್ಲಿ ಸೋಂಕಿನ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುವುದು ಸಕಾಲಿಕ ನಡೆ.
ಈಗಷ್ಟೇ ಜನಜೀವನ, ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಕಠಿಣ ನಿರ್ಬಂಧಗಳಿಂದ ಮತ್ತೆ ಸಂಕಷ್ಟಗಳು ತಲೆದೋರಲಿವೆ ಎಂಬ ಆಕ್ಷೇಪಗಳ ದನಿಯಲ್ಲಿ ಸತ್ಯಾಂಶವಿದೆಯಾದರೂ, ಸಂಭಾವ್ಯ ಮೂರನೇ ಅಲೆಯನ್ನು ತಡೆಯಲು ಇವು ಅನಿವಾರ್ಯ ಹೆಜ್ಜೆಯಾಗಿವೆ. ಜನರು ಕೂಡ ಅವರ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ ಮುಂದಿನ ದಿನಗಳಲ್ಲಿ ಸೋಂಕಿನ ಅಪಾಯದಿಂದ ಪಾರಾಗಬಹುದು. ಲಸಿಕೆ ಪಡೆದುಕೊಳ್ಳುವುದು, ಸುರಕ್ಷಿತ ಅಂತರ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು, ಅನಗತ್ಯ ಓಡಾಟಕ್ಕೆ ಕಡಿವಾಣ, ಮುಖಗವಸು ಧರಿಸುವುದು ಸೇರಿದಂತೆ ಅವಶ್ಯಕ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಿದೆ. ಒಟ್ಟಾರೆ, ಕರೊನಾ ವಿರುದ್ಧದ ಮತ್ತೊಂದು ಹಂತದ ಸಮರದಲ್ಲಿ ಸರ್ಕಾರ, ಜನಸಾಮಾನ್ಯರ ಪಾತ್ರ ಮಹತ್ವದ್ದಾಗಿದ್ದು, ಒಮಿಕ್ರಾನ್ ಪ್ರಸರಣವನ್ನು ತಡೆಯಬೇಕಿದೆ.