ಜನರ ಮನೆಬಾಗಿಲಿಗೆ ಆಡಳಿತ ಕೊಂಡೊಯ್ಯುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದೆ. ಗ್ರಾಮಗಳ ಸಮಸ್ಯೆಗಳನ್ನು ತಿಳಿಯಲು ಸರ್ಕಾರಕ್ಕೆ ಇದರಿಂದ ಅನುಕೂಲವಾಗಿದೆ. ಆದರೆ, ಸಮಸ್ಯೆ ಅರ್ಥವಾದರೆ ಸಾಕೆ? ಪರಿಹಾರದ ದಾರಿಯನ್ನು ಶೋಧಿಸಿದಾಗಲೇ ಈ ಎಲ್ಲ ಪ್ರಯತ್ನಗಳಿಗೆ ನಿಜವಾದ ಸಾರ್ಥಕತೆ. ಈ ನಿಟ್ಟಿನಲ್ಲಿ, ಕಂದಾಯ ಸಚಿವ ಆರ್. ಅಶೋಕ್ ಈ ಹಿಂದೆ ವಾಸ್ತವ್ಯ ಹೂಡಿದ್ದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ತಲ್ ಗ್ರಾಮ, ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಹಾಗೂ ಅಂಕೋಲಾ ತಾಲೂಕಿನ ಕುಂಟಕಣಿ, ಅಚವೆ ಗ್ರಾಮಗಳಿಗೆ ತಲಾ 1 ಕೋಟಿ ರೂ.ಗಳಂತೆ 3 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಅಭಿಯಾನದಲ್ಲಿ ಆಯ್ಕೆಯಾದ ಹಿಂದುಳಿದ ಗ್ರಾಮಗಳಲ್ಲಿ ಕುಡಿವ ನೀರು, ರಸ್ತೆ, ಸಾರಿಗೆ, ಆರೋಗ್ಯ ಕೇಂದ್ರ, ಅಂಗನವಾಡಿ, ಸ್ಮಶಾನ, ಗುಡಿಸಲು ವಾಸಿಗಳಿಗೆ ಮನೆ ನಿರ್ವಣ, ಒಳಚರಂಡಿ ವ್ಯವಸ್ಥೆ, ಶಾಲೆ ಮತ್ತು ಅಂಗನವಾಡಿ ಕಟ್ಟಡ ದುರಸ್ತಿ ಹಾಗೂ ಇನ್ನಿತರ ಮೂಲಸೌಕರ್ಯ ಕಲ್ಪಿಸಲು ಈ ಅನುದಾನ ಪೂರಕವಾಗಲಿದೆ.
ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಅರಿವು ಇಲ್ಲ ಎಂದೇನಲ್ಲ. ಇಚ್ಛಾಶಕ್ತಿ ಕೊರತೆ, ಅನುದಾನ ಇಲ್ಲದಿರುವುದು ಸೇರಿ ಹಲವು ಕಾರಣಗಳಿಂದ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ಆದ್ದರಿಂದ, ಆಡಳಿತಯಂತ್ರದ ಜಡತ್ವ ಕಳೆದು ಚುರುಕು ನೀಡಲು, ಸಣ್ಣ-ಪುಟ್ಟ ಕೆಲಸಗಳಿಗೆ ಜನರು ಅಲೆಯುವುದನ್ನು ತಪ್ಪಿಸಲು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಅಭಿಯಾನ ಪುನರಾರಂಭಗೊಂಡಿದೆ. ಅದೇ ರೀತಿ, ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಯೊಂದು ಹಳ್ಳಿಯಲ್ಲಿ ಆಟದ ಅಂಕಣ ನಿರ್ವಿುಸಲು ನಿರ್ಧರಿಸಲಾಗಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಘೋಷಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಅದ್ಭುತ ಕ್ರೀಡಾ ಪ್ರತಿಭೆಗಳಿದ್ದು, ಆಟದ ಅಂಕಣ, ಕ್ರೀಡಾಂಗಣ ನಿರ್ವಣಗೊಂಡರೆ ಅಂಥ ಪ್ರತಿಭೆಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ.
ಗ್ರಾಮೀಣ ಪ್ರದೇಶ ಇಂದಿಗೂ ಹತ್ತುಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿಜ. ಅದೆಷ್ಟೋ ಹಳ್ಳಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲ. ಕರೊನಾ ನಂತರ ಮತ್ತಷ್ಟು ಹೊಸ ಸಮಸ್ಯೆಗಳೂ ಸೇರಿಕೊಂಡಿವೆ. ಜನಪ್ರತಿನಿಧಿಗಳು ಚುನಾವಣೆ ಬಂದಾಗಲಷ್ಟೇ ಹಳ್ಳಿಗಳತ್ತ ಮುಖ ಮಾಡುತ್ತಾರೆ ಎಂಬ ಆರೋಪ, ಆಕ್ಷೇಪ ಬಹುದಿನಗಳಿಂದ ಇದ್ದೇ ಇದೆ. ಅಲ್ಲದೆ, ಸ್ಥಳೀಯವಾಗಿ ಪಂಚಾಯಿತಿ ಮಟ್ಟದಲ್ಲಿ ಪರಿಹಾರವಾಗಬಹುದಾದಂಥ ಸಣ್ಣಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿಯೂ ವಿಭಾಗ ಕೇಂದ್ರಗಳಿಗೆ ಅಥವಾ ಬೆಂಗಳೂರಿಗೆ ಎಡತಾಕಬೇಕು ಎಂಬ ಧೋರಣೆ ಸರಿಯಲ್ಲ. ಕೆಲ ಉನ್ನತ ಅಧಿಕಾರಿಗಳು ಸ್ವಇಚ್ಛೆ ಮತ್ತು ಕಳಕಳಿಯಿಂದ ಹಳ್ಳಿಗಳಿಗೆ ಹೋಗಿ ಅಹವಾಲು ಸ್ವೀಕರಿಸುತ್ತಾರೆ ಎಂಬುದನ್ನು ಬಿಟ್ಟರೆ, ಬಹುತೇಕ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡುವುದಿಲ್ಲ. ಈ ಪ್ರವೃತ್ತಿ ಇನ್ನಾದರೂ ಬದಲಾಗಬೇಕು.
ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಮುಂಚೆಗಿಂತ ಅನುದಾನ ಪ್ರಮಾಣ ಹೆಚ್ಚಿದೆ. ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಪಂಚಾಯಿತಿ ಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಿದರೆ ಹಳ್ಳಿಗರ ಅದೆಷ್ಟೋ ಬವಣೆಗಳನ್ನು ಕೊನೆಗಾಣಿಸಬಹುದು. ಗ್ರಾಮ ವಾಸ್ತವ್ಯದ ಕಾರ್ಯಕ್ರಮವು ಬರೀ ಅರ್ಜಿ ಸ್ವೀಕಾರಕ್ಕೆ ಸೀಮಿತವಾಗಿ ಉಳಿಯದೆ, ಸಮಸ್ಯೆಗಳನ್ನು ಅರಿಯಲು ಮತ್ತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದ್ದು, ಸೂಕ್ತ ಅನುದಾನ ಲಭ್ಯವಾಗುತ್ತಿರುವುದು ಉತ್ತಮ ಬೆಳವಣಿಗೆ.