ಕಬ್ಬು ಬೆಳೆಗಾರರಿಗೆ ಶೀಘ್ರದಲ್ಲಿಯೇ ಸಿಹಿ ನಿರೀಕ್ಷೆ ಚಿಗುರೊಡೆದಿದೆ. ಕಬ್ಬಿನ ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೂ ಪಾಲು ಸಿಗಬೇಕೆಂಬ ಬೇಡಿಕೆಗೆ ಮನ್ನಣೆ ದೊರೆಯುವಂತಹ ವಾತಾವರಣ ಸೃಷ್ಟಿಯಾಗಿದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಜ್ಞರು ನೀಡಿರುವ ವರದಿ ಕುರಿತಂತೆ ನಡೆಸಿದ ಚರ್ಚೆಯಲ್ಲಿ ಈ ಸಾಧ್ಯತೆ ಗೋಚರಿಸಿದೆ. ಕಬ್ಬು ಉಪಉತ್ಪನ್ನಗಳ ಲಾಭವನ್ನು ರೈತರೊಂದಿಗೆ ಹಂಚಿಕೊಳ್ಳಬೇಕು ಎಂಬುದರ ಕುರಿತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇನ್ನು ಐದು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಕಬ್ಬು ಬೆಳೆಯುವಲ್ಲಿ ಕರ್ನಾಟಕವು ದೇಶದಲ್ಲಿ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಮೂರನೇ ಸ್ಥಾನದಲ್ಲಿದೆ. ಕಬ್ಬು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬೆಳೆಗಾರರಿಗೆ ಸಾಕಷ್ಟು ಆದಾಯ ತಂದುಕೊಡುತ್ತಿದೆ.
ಕಬ್ಬು ಬೆಳೆಯುವಲ್ಲಿ ಈ ಮೊದಲು ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿತ್ತು. ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯು ಈಗ ಸಕ್ಕರೆ ಉತ್ಪಾದನೆಯಲ್ಲಿ ಮೊದಲ ಸ್ಥಾನ ಗಳಿಸಿದೆ. ಆದರೆ ಸಕ್ಕರೆ ಕಾರ್ಖಾನೆ ಹಾಗೂ ಬೆಳೆಗಾರರ ನಡುವೆ ಅನೇಕ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಕಬ್ಬಿಗೆ ಯೋಗ್ಯ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನ ಬೆಳೆಗಾರರಲ್ಲಿ ಇದೆ. ಎಫ್ಆರ್ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ದರಕ್ಕಿಂತ ಹೆಚ್ಚಿನ ದರವನ್ನು ಕೊಡಬೇಕೆಂದು ಬೆಳೆಗಾರರು ಆಗ್ರಹಿಸುತ್ತಿದ್ದರೆ, ಎಫ್ಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆ ನೀಡಬೇಕೆಂದು ಕಾರ್ಖಾನೆಗಳಿಗೆ ಸೂಚನೆ ನೀಡಲಾಗದು ಎಂದು ಸರ್ಕಾರ ಹೇಳಿದೆ. ಕಬ್ಬಿನ ತೂಕ ಹಾಗೂ ಇಳುವರಿಯಲ್ಲಿ ಮೋಸ ಆಗುತ್ತಿದೆ ಎಂದು ರೈತರು ಆಪಾದಿಸುತ್ತಿದು, ಇದನ್ನು ತಡೆಯಲು ಪರಿಶೀಲನೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಕ್ಕರೆ ತಯಾರಿಸುವ ಮತ್ತು ಬಳಸುವ ದೇಶವಾಗಿ ಭಾರತ ಹೊರಹೊಮ್ಮಿದೆ. ಅಲ್ಲದೆ, ಸಕ್ಕರೆ ರಫ್ತು ಮಾಡುವಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ. 2021-22ರಲ್ಲಿ ಭಾರತವು 3.58 ಕೋಟಿ ಟನ್ ಸಕ್ಕರೆ ಉತ್ಪಾದಿಸಿದ್ದು, 2022-23ರಲ್ಲಿ ಇದು 3.65 ಕೋಟಿ ಟನ್ಗೆ ತಲುಪುವ ನಿರೀಕ್ಷೆ ಇದೆ. ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1700 ಲಕ್ಷ ಟನ್ಗಳಷ್ಟಿದ್ದು, ಇದರಲ್ಲಿ ಶೇ. 15ರಷ್ಟು ಸಕ್ಕರೆಯನ್ನು ಭಾರತೀಯರೇ ಬಳಸುತ್ತಾರೆ. ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷಗಳಲ್ಲಿ 300 ಲಕ್ಷ ಟನ್ಗಳಿಗಿಂತಲೂ ಅಧಿಕವಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅಂದಾಜು ಮಾಡಿದೆ. ಕಬ್ಬಿನ ಪ್ರಮುಖ ಉಪಉತ್ಪನ್ನವೆಂದರೆ ಎಥೆನಾಲ್. ಕೇಂದ್ರದಿಂದ ಎಥೆನಾಲ್ ಉತ್ಪಾದನೆಗೆ ಪೋ›ತ್ಸಾಹ ದೊರೆಯುತ್ತಿದ್ದು, ಪೆಟ್ರೋಲ್ಗೆ ಮಿಶ್ರಣ ಮಾಡಲು ಇದನ್ನು ಬಳಸುವುದರಿಂದ ಬೇಡಿಕೆ ಇದೆ. ಮದ್ಯ ತಯಾರಿಕೆಯಲ್ಲಿ ಬಳಸಲಾಗುವ ಕಾಕಂಬಿಯೂ ಇನ್ನೊಂದು ಪ್ರಮುಖ ಉಪಉತ್ಪನ್ನವಾಗಿದೆ. ‘ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು’ ಎಂಬ ನೀತಿ ನಮ್ಮದಾಗಿದೆ ಸಚಿವ ಮುನೇನಕೊಪ್ಪ ಹೇಳಿರುವುದು ಸೂಕ್ತವೇ ಆಗಿದೆ. ಸಕ್ಕರೆ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಹಾಗೂ ಅಧಿಕ ಇಳುವರಿಯ ಕಬ್ಬು ಬೆಳೆಯಲು ಗಮನ ನೀಡಿದರೆ ಬೆಳೆಗಾರರಿಗೂ-ಕಾರ್ಖಾನೆಗಳಿಗೂ ಹೆಚ್ಚಿನ ಲಾಭ ದೊರೆಯಲಿದೆ.