ಪ್ರಪಂಚದಾದ್ಯಂತ ಜನರು ಮಾದಕ ವ್ಯಸನ ತೊರೆಯಲು ಮತ್ತು ಆರೋಗ್ಯಕರ ಜೀವನ ಸಾಗಿಸಲು ಪೋ›ತ್ಸಾಹ ನೀಡುವ ನಿಟ್ಟಿನಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗೆಗೆ ಜಾಗೃತಿ ಮೂಡಿಸಲು ಮತ್ತು ಅದರ ವಿರುದ್ಧ ಹೋರಾಟಕ್ಕೆ ಅಂತಾರಾಷ್ಟ್ರೀಯ ಬೆಂಬಲ ಪಡೆಯಲು ಪ್ರತಿ ವರ್ಷ ಜೂನ್ 26ರಂದು ಮಾದಕವಸ್ತು ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲು 1987ರ ಡಿಸೆಂಬರ್ 17ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಮಾದಕ ವ್ಯಸನ ಮುಕ್ತ ಸಮಾಜವನ್ನು ವಿಶ್ವದಾದ್ಯಂತ ರೂಪಿಸುವ ಗುರಿಯೊಂದಿಗೆ, ಕಾನೂನುಬಾಹಿರ ಮಾದಕ ದ್ರವ್ಯಗಳ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಮೂರೂವರೆ ದಶಕದ ನಂತರವಾದರೂ ಈ ಗುರಿಯನ್ನು ಸಾಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ ಮತ್ತು ಸಂಕೀರ್ಣವಾಗಿದೆ. ಆದರೆ, ಜಗತ್ತಿನಲ್ಲಿ ಮಾದಕ ದ್ರವ್ಯ ಸೇವನೆಯು ಒಂದು ಪ್ರಮುಖ ಸಮಸ್ಯೆಯಾಗಿ ಈಗಲೂ ಮುಂದುವರಿದಿದೆ ಎಂದು ಮಾತ್ರ ಸ್ಪಷ್ಟವಾಗಿ ಹೇಳಬಹುದಾಗಿದೆ. ‘ಜನರು ಮೊದಲು: ಕಳಂಕ ಮತ್ತು ತಾರತಮ್ಯ ನಿಲ್ಲಿಸಿ, ತಡೆಗಟ್ಟುವಿಕೆ ಬಲಪಡಿಸಿ’ ಎಂಬ ಧ್ಯೇಯದೊಂದಿಗೆ ಈ ವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ.
ಮದ್ಯ, ತಂಬಾಕು, ಗಾಂಜಾ, ಕೋಕೆನ್, ಅಫೀಮು, ಆಂಫಿಟಮೈನ್, ಹೆರಾಯಿನ್, ಎಲ್ಎಸ್ಡಿ, ಪಿಸಿಪಿ, ನಿದ್ದೆ ಮಾತ್ರೆಗಳು ಮೊದಲಾದವು ಪ್ರಮುಖ ಮಾದಕ ವಸ್ತುಗಳಾಗಿವೆ. ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡಿದರೂ ದೂರಗಾಮಿ ಅಡ್ಡ ಪರಿಣಾಮಗಳನ್ನು ಹೊಂದಿದೆ. ಈ ಚಟವು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತಾ, ಆತನ ಜೀವನವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಈ ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ. ಇಂದು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
2018ರ ಭಾರತದ ರಾಷ್ಟ್ರೀಯ ಸಮಿಕ್ಷೆ ಪ್ರಕಾರ ಮದ್ಯ ಸೇವಿಸುವವರ ಸಂಖ್ಯೆ 15 ಕೋಟಿಗೂ ಹೆಚ್ಚು ಹಾಗೂ ಗಾಂಜಾ ಸೇವಿಸುವವರ ಸಂಖ್ಯೆ 2.9 ಕೋಟಿಗೂ ಅಧಿಕ ಇದೆ. ಒಪಿಯಡ್ ಸೇವಿಸುವವರು 1.8 ಕೋಟಿ, ನಿದ್ರೆ ಮಾತ್ರೆ ಸೇವಿಸುವವರು 1 ಕೋಟಿ, ಇನ್ಹೇಲರ್ ಸೇವಿಸುವವರು 51 ಲಕ್ಷ, ಕೊಕೈನ್ ಸೇವಿಸುವವರು 9.5 ಲಕ್ಷ ಹಾಗೂ ವಿವಿಧ ಉತ್ತೇಜಕ, ಭ್ರಮೆಕಾರಕಗಳನ್ನು ಸೇವಿಸುವವರ ಸಂಖ್ಯೆ 25 ಲಕ್ಷಕ್ಕೂ ಅಧಿಕ ಇದೆ. ಮಾದಕವಸ್ತು ಸೇವನೆ ಮತ್ತು ಕುಡಿತ ಚಟಕ್ಕೆ ಸಿಲುಕುವವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವ ಸಾಧ್ಯತೆಯೂ ಇರುತ್ತದೆ. ಭಾರತದಲ್ಲಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮೊದಲ ಬಾರಿಗೆ 10 ಸಾವಿರ ಗಡಿಯನ್ನು 2021ರಲ್ಲಿ ದಾಟಿತು. ಇದರಲ್ಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳ ಪಾಲು ಶೇ. 78ರಷ್ಟಿತ್ತು.
ಭಾರತದಲ್ಲಿ ಮಾದಕ ವ್ಯಸನವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ. ಶಾಲಾ ಪಠ್ಯಕ್ರಮದ ಕಡ್ಡಾಯ ಅಂಶವಾಗಿ ಮಾದಕ ವ್ಯಸನದ ಮಾಹಿತಿಯನ್ನು ಇತ್ತೀಚಿನ ಸೇರ್ಪಡೆಗೊಳಿಸಿರುವುದು ಒಂದು ಪ್ರಮುಖ ಸಂಗತಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಲವಾರು ವ್ಯಸನಮುಕ್ತಿ ಕೇಂದ್ರಗಳನ್ನು ಸ್ಥಾಪಿಸಿವೆ. ಮಾದಕ ವ್ಯಸನಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸಿನ ನೆರವನ್ನು ಕೂಡ ಸೇವಾ ಸಂಸ್ಥೆಗಳಿಗೆ ನೀಡುವ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಮಾದಕವಸ್ತು ತಯಾರಿಕೆ, ಮಾರಾಟ, ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಅನೇಕ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಮಾದಕವಸ್ತು ನಿಯಂತ್ರಣ ಬ್ಯುರೋವನ್ನು 1986ರಲ್ಲಿ ಸ್ಥಾಪಿಸಲಾಗಿದೆ. ಹೀಗಿದ್ದರೂ ಮಾದಕ ವಸ್ತು ಸೇವನೆ ಸಂಪೂರ್ಣ ತಡೆಗಟ್ಟಲಾಗಿಲ್ಲ. ಹೀಗಾಗಿ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗೆಗೆ ಸಾರ್ವಜನಿಕರಲ್ಲಿ ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಯೋಜನೆ, ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ವ್ಯಸನಿಗಳಾದವರಿಗೆ ಚಿಕಿತ್ಸೆ ನೀಡುವುದಕ್ಕಿಂತ ವ್ಯಸನಿಗಳಾಗದಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ.