ಸಂವಿಧಾನದ 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಐತಿಹಾಸಿಕ ತೀರ್ವನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ನಲ್ಲಿ ತೆಗೆದುಕೊಂಡಿತು. ನಂತರದಲ್ಲಿ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿ, ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಅಲ್ಲಿ ರಾಜ್ಯ ಸ್ಥಾನಮಾನವನ್ನು ಪುನರ್ ಸ್ಥಾಪಿಸಬೇಕೆಂಬ ಬೇಡಿಕೆ ಅನೇಕ ರಾಜಕೀಯ ಪಕ್ಷಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ, ಗುರುವಾರ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕಾಶ್ಮೀರದ ವಿವಿಧ ರಾಜಕೀಯ ನಾಯಕರ ಸಭೆ ಮಹತ್ವ ಪಡೆದುಕೊಂಡಿದೆ. ಮೂರು ತಾಸು ನಡೆದ ಸುದೀರ್ಘ ಸಭೆಯಲ್ಲಿ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮುಂತಾದ ನಾಯಕರು ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಉಪಸ್ಥಿತರಿದ್ದರು. ಜಮ್ಮು-ಕಾಶ್ಮೀರದಲ್ಲೀಗ ಕ್ಷೇತ್ರಗಳ ಪುನರ್ವಿಂಗಡಣೆ ನಡೆಯುತ್ತಿದ್ದು, ಆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರೈಸಿ, ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ಒಲವು ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಸರ್ಕಾರದ ಆದ್ಯತೆ ಎಂಬುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದವರೆಲ್ಲರ ಅನಿಸಿಕೆಗಳನ್ನು ಸಾವಧಾನವಾಗಿ ಆಲಿಸಿದ ಪ್ರಧಾನಿ, ಈ ನಾಯಕರ ಮುಕ್ತ ಅಭಿಪ್ರಾಯಕ್ಕಾಗಿ ಧನ್ಯವಾದ ತಿಳಿಸಿದರೆಂದು ಕೇಂದ್ರದ ಮೂಲಗಳು ಹೇಳಿವೆ. ರಾಜ್ಯ ಸ್ಥಾನಮಾನ ನೀಡುವುದು, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ, ರಾಜಕೀಯ ಕೈದಿಗಳ ಬಿಡುಗಡೆ ಮುಂತಾದ ಬೇಡಿಕೆಗಳನ್ನು ಕಾಶ್ಮೀರದ ನಾಯಕರು ಮುಂದಿಟ್ಟರು. ಆಲ್ಲದೆ, ವಿಶೇಷ ಸ್ಥಾನಮಾನ ರದ್ದತಿಯನ್ನು ವಿರೋಧಿಸಿದರು. ವಿಶೇಷ ಸ್ಥಾನಮಾನ ರದ್ದತಿ ವಿಷಯ ಸುಪ್ರೀಂ ಕೋರ್ಟಿನಲ್ಲಿದೆ ಎಂಬುದು ಸಹ ಗಮನಿಸಬೇಕಾದ ವಿಷಯ. ಮತ್ತು ಈ ವಿಷಯದಲ್ಲಿ ಮೋದಿ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟ. ರಾಜ್ಯ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರದ ಮನಸಿನಲ್ಲೇನಿದೆ ಎಂಬುದು ತಕ್ಷಣಕ್ಕೆ ಗೊತ್ತಾಗದಿದ್ದರೂ, ಅಲ್ಲಿ ಚುನಾವಣೆ ನಡೆಸುವ ಬಗ್ಗೆಯಂತೂ ಮುಕ್ತವಾಗಿದೆ. ಸಂವಿಧಾನದ 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನು ಬಿಜೆಪಿ ಮೊದಲಿಂದಲೂ ವಿರೋಧಿಸಿಕೊಂಡು ಬಂದಿತ್ತು.
‘ಒಂದು ದೇಶದಲ್ಲಿ ಎರಡು ಸಂವಿಧಾನ ಸಲ್ಲದು’ ಎಂಬುದು ಬಿಜೆಪಿಯ ಸ್ಪಷ್ಟ ಪ್ರತಿಪಾದನೆಯಾಗಿತ್ತು. ಆದರೆ ಆ ಸವಲತ್ತು ರದ್ದುಪಡಿಸುವ ರಾಜಕೀಯ ನಿರ್ಣಯ ತೆಗೆದುಕೊಳ್ಳುವ ಸೂಕ್ತ ಸಂದರ್ಭ ಅದಕ್ಕೆ ಒದಗಿಬಂದಿರಲಿಲ್ಲ. ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ಖಡಕ್ ನಿರ್ಣಯ ತೆಗೆದುಕೊಂಡರು. ನಂತರದಲ್ಲಿ ಲಡಾಖ್ ಮತ್ತು ಜಮ್ಮ-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ರಚಿಸಲಾಯಿತು. ರಾಜಕೀಯ ವಾದ-ಪ್ರತಿವಾದಗಳು ಏನೇ ಇದ್ದರೂ, ಅಲ್ಲಿ ಚುನಾವಣೆ ನಡೆದು, ಜನಪ್ರತಿನಿಧಿಗಳ ಕೈಗೆ ಆಡಳಿತಸೂತ್ರ ಹೋಗುವುದು ಉತ್ತಮ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಇಂಥದೊಂದು ಸಭೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಘಟಿಸಬಹುದಾದ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.