ಗಂಗಾ ನದಿ ಎಂಬುದು ಕೇವಲ ನೀರಿನ ಹರಿವಾಗಿರದೆ, ಕೋಟ್ಯಂತರ ಶ್ರದ್ಧಾಳುಗಳ ಭಾವಕೋಶದಲ್ಲಿ ಪ್ರವಹಿಸುವ ಜೀವನದಿಯಾಗಿದೆ. ಗಂಗೆಯ ಪೌರಾಣಿಕ ಐತಿಹ್ಯದ ಜತೆಗೆ, ನಮ್ಮ ಅನೇಕ ಪುಣ್ಯತಾಣಗಳು ಗಂಗೆಯ ದಡದಲ್ಲೇ ಇರುವುದು ಶ್ರದ್ಧೆಯನ್ನು ಇಮ್ಮಡಿಸಿದೆ. ಇದಲ್ಲದೆ, ಸಾವಿರಾರು ಕೈಗಾರಿಕೆಗಳು ಗಂಗಾ ನದಿಯ ದಡದಲ್ಲಿ ನೆಲೆಗೊಂಡಿವೆ. ಹೀಗೆ ಗಂಗಾ ನದಿ ಭಾವನೆಯ ಜತೆಗೆ ಜನರ ಜೀವನಾಧಾರವೂ ಆಗಿರುವುದರಿಂದ ಮಹತ್ವ ಮತ್ತಷ್ಟು ಹೆಚ್ಚಿದೆ. ಆದರೆ ಮಾಲಿನ್ಯವು ಈ ನದಿಯನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಯಾಗಿದ್ದು, ದಶಕಗಳಿಂದ ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಹಲವು ಉಪಕ್ರಮಗಳ ನಂತರವೂ, ನದಿಗೆ ಶೇ.50 ಅಸಂಸ್ಕರಿತ ಒಳಚರಂಡಿ ನೀರು ಬಂದು ಸೇರುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್ಜಿಟಿ) ಹೇಳಿರುವುದು ಗಂಭೀರ ಸಂಗತಿ.
‘ಗಂಗಾ ನದಿಯ ನೀರು ಶುದ್ಧವಾಗಿರಬೇಕಾದುದು ಅಗತ್ಯ. ಏಕೆಂದರೆ ಜನರು ಈ ನದಿಯಲ್ಲಿ ಪುಣ್ಯಸ್ನಾನ ಮಾಡುವುದಲ್ಲದೆ ಆಚಮನಕ್ಕೂ ಬಳಸುತ್ತಾರೆ’ಎಂದು ಎನ್ಜಿಟಿ ಅಧ್ಯಕ್ಷ ನ್ಯಾ.ಆದರ್ಶ ಕುಮಾರ ಗೋಯೆಲ್ ಅವರು ಹೇಳಿರುವುದು ಸೂಕ್ತವಾಗಿಯೇ ಇದೆ. ನ್ಯಾಷನಲ್ ಮಿಷನ್ ಫಾರ್ ಗಂಗಾ ಕ್ಲೀನ್ ಸಂಸ್ಥೆಯು ನಿಯಮ ಪಾಲನೆಗೆ ಕಠಿಣ ಕ್ರಮಗಳನ್ನು ಜರುಗಿಸುವ ಸ್ಥಿತಿಯಲ್ಲಿ ಇದ್ದಂತಿಲ್ಲ ಎಂದೂ ಹೇಳಿರುವ ಅವರು, ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಗಂಗಾ ಮಂಡಳಿ (ಎನ್ಜಿಸಿ)ಗೆ ಸೂಚಿಸಿದ್ದಾರೆ. ಯಾವುದೇ ಫಲಿತಾಂಶವಿಲ್ಲದೆ ಕಳೆದ 37 ವರ್ಷಗಳಿಂದ ನಡೆಯುತ್ತಿರುವುದನ್ನೇ ಮತ್ತೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಒಳಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸಿ ನದಿಗೆ ಬಿಡುವ ವ್ಯವಸ್ಥೆ ಕುರಿತು ನಾವು ಒಂದು ನಿರ್ದಿಷ್ಟ ಕಾರ್ಯಯೋಜನೆಯನ್ನು ಅಪೇಕ್ಷಿಸುತ್ತೇವೆ ಎಂದು ನ್ಯಾ. ಗೋಯೆಲ್ ಹೇಳಿದ್ದಾರೆ. ಹಾಗಂತ ಗಂಗಾ ನದಿ ಶುದ್ಧೀಕರಣ ಪ್ರಯತ್ನಗಳು ನಡೆದೇ ಇಲ್ಲ ಎಂದಲ್ಲ. ಸುಮಾರು ನಾಲ್ಕು ದಶಕಗಳಿಂದ ವಿವಿಧ ಸರ್ಕಾರಗಳ ಅವಧಿಯಲ್ಲಿ ಈ ಯತ್ನ ಜಾರಿಯಲ್ಲಿದೆ. ಅದರಲ್ಲೂ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಯತ್ನ ಇನ್ನಷ್ಟು ವೇಗ ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಉದ್ದೇಶಕ್ಕಾಗಿ ‘ನಮಾಮಿ ಗಂಗೆ’ಎಂಬ ಯೋಜನೆಯನ್ನೇ ಘೋಷಿಸಿ, ಪ್ರತ್ಯೇಕ ಉಸ್ತುವಾರಿಗಳನ್ನು ಸಹ ನೇಮಿಸಿದರು. ಇದರ ಫಲವಾಗಿ, ಕಾಶಿಯ ವಿವಿಧ ಘಾಟ್ಗಳು ಪುನರುಜ್ಜೀವನ ಪಡೆದು ಸ್ವಚ್ಛವಾಗಿವೆ; ನದಿಯಲ್ಲಿ ಮೃತದೇಹಗಳನ್ನು ತೇಲಿಬಿಡುವ ಪ್ರಮಾಣ ಮೊದಲಿಗಿಂತ ಕಡಿಮೆಯಾಗಿದೆ. ಆದರೂ ಗಂಗಾ ನದಿಯ ಶುದ್ಧೀಕರಣ ಭಗೀರಥ ಪ್ರಯತ್ನವೇ ಸರಿ. ಅದರಲ್ಲೂ ಕೈಗಾರಿಕೆಗಳಿಂದ ಬರುವ ತ್ಯಾಜ್ಯವನ್ನು ತಗ್ಗಿಸಬೇಕಾದ ಅಗತ್ಯ ಇದೆ. ಹಿಂದೆ ಈ ವಿಷಯ ಗಂಭೀರವಾಗಿ, ನದಿದಂಡೆಯಲ್ಲಿದ್ದ ಅನೇಕ ಕೈಗಾರಿಕೆಗಳನ್ನು ಸುಪ್ರೀಂ ಕೋರ್ಟ್ ಮುಚ್ಚಿಸಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು. ಇದಲ್ಲದೆ, ಗಂಗಾ ನದಿ ಪ್ರದೇಶದಲ್ಲಿ ಬರುವ ಉತ್ತರ ಪ್ರದೇಶದಂತಹ ರಾಜ್ಯಗಳು ನದಿ ವಿಚಾರದಲ್ಲಿ ತಮ್ಮದೇ ಆದ ಕೆಲ ನಿಯಮಗಳನ್ನು ಸಹ ರೂಪಿಸಿಕೊಂಡಿವೆ. ಅದೇ ವೇಳೆ, ಗಂಗಾ ನದಿ ಸ್ವಚ್ಛತೆ ವಿಷಯದಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದೆಂಬುದನ್ನು ಮರೆಯುವಂತಿಲ್ಲ.