ಒಂದು ಅವಧಿಗೆ ನೋಂದಣಿ (ಒನ್ ಟೈಮ್ ರಜಿಸ್ಟ್ರೇಶನ್- ಒಟಿಎಸ್) ಸೌಲಭ್ಯವನ್ನು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಆರಂಭಿಸುವುದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನು ಮುಂದೆ ಸುಲಭವಾಗಲಿದೆ. ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಇ- ಆಡಳಿತದ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವ ಕ್ರಮ ಇದಾಗಿದೆ. ಸರ್ಕಾರಿ ನೌಕರಿಗಳಿಗೆ ನೇಮಕಾತಿ ಪರೀಕ್ಷೆಗಳು ನಡೆದಾಗ ಪ್ರತಿ ಸಲವೂ ಅಭ್ಯರ್ಥಿಗಳು ತಮ್ಮೆಲ್ಲ ವೈಯಕ್ತಿಕ ವಿವರಗಳೊಂದಿಗೆ ಅರ್ಜಿ ತುಂಬಬೇಕಾಗುತ್ತದೆ. ಈ ಅರ್ಜಿಯಲ್ಲಿ ಹೆಸರು, ವಯಸ್ಸು, ವಿಳಾಸ, ಶೈಕ್ಷಣಿಕ ಅರ್ಹತೆ ಮೊದಲಾದ ವೈಯಕ್ತಿಕ ವಿವರಗಳನ್ನು ಪ್ರತಿ ಬಾರಿಯೂ ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ದಾಖಲಿಸುವ ಪುನರಾವರ್ತನೆಯನ್ನು ತಪ್ಪಿಸುವ ಉದ್ದೇಶದಿಂದ ಯುಪಿಎಸ್ಸಿ ಒಟಿಎಸ್ ಸೌಲಭ್ಯದ ವೇದಿಕೆಯನ್ನು ಸೃಷ್ಟಿಸಿದೆ.
ಕೇಂದ್ರ ಸರ್ಕಾರದ ನೌಕರಿಗಳಿಗೆ ಅರ್ಜಿ ಸಲ್ಲಿಸ ಬಯಸುವವರಿಗೆ ಯುಪಿಎಸ್ಸಿ ವೈಬ್ಸೈಟ್ನಲ್ಲಿ ಒಟಿಎಸ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯವು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹಾಗೂ ಅರ್ಜಿ ಸ್ವೀಕರಿಸುವ ಇಲಾಖೆಗಳಿಗೆ ಇಬ್ಬರಿಗೂ ಪ್ರಯೋಜನಕಾರಿ ಎಂದೇ ಹೇಳಬಹುದಾಗಿದೆ. ಪ್ರತಿಯೊಂದು ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮತ್ತೆ ಮತ್ತೆ ವೈಯಕ್ತಿಕ ವಿವರಗಳನ್ನು ದಾಖಲಿಸುವ ಅಗತ್ಯ ಬೀಳುವುದಿಲ್ಲ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ವೈಯಕ್ತಿಕ ಮಾಹಿತಿಗಳನ್ನು ತಾವೇ ಭರ್ತಿ ಮಾಡುವುದರಿಂದ ದೋಷಗಳಾದಂತೆ ಎಚ್ಚರಿಕೆ ವಹಿಸಬಹುದಾಗಿದೆ. ಅಲ್ಲದೆ, ಒಂದು ವೇಳೆ ದೋಷಗಳಾಗಿದ್ದರೂ ಸರಿಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅರ್ಜಿ ಆಹ್ವಾನಿಸುವ ಸರ್ಕಾರಿ ಇಲಾಖೆಗಳು ಅರ್ಜಿಗಳ ಗಾತ್ರವನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸಲು ಇದರಿಂದ ಸಾಧ್ಯವಾಗುತ್ತದೆ.
ಏಕೆಂದರೆ, ಒಟಿಎಸ್ ಮೂಲಕ ಅಭ್ಯರ್ಥಿಗಳ ವೈಯಕ್ತಿಕ ವಿವರಗಳ ಮಾಹಿತಿಯು ಯುಪಿಎಸ್ಸಿ ಸರ್ವರ್ನಲ್ಲಿ ಮೊದಲೇ ಲಭ್ಯವಿರುತ್ತದೆ. ಈ ಮಾಹಿತಿಯು ಒಟ್ಟಾರೆ ಅರ್ಜಿಯ ಶೇ. 70ರಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಅರ್ಜಿ ಪ್ರಕ್ರಿಯೆಯಲ್ಲಿ ಕೆಲಸ ಹಾಗೂ ಸಮಯದ ಉಳಿತಾಯವಾಗುತ್ತದೆ.
ಐಎಎಸ್, ಎಎಫ್ಎಸ್, ಐಪಿಎಸ್ ಮುಂತಾದ ಹುದ್ದೆಗಳ ನೇಮಕಾತಿಗಳಿಗಾಗಿ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯಲು ಸಾಮಾನ್ಯ ವರ್ಗದವರಿಗೆ ಗರಿಷ್ಠ 6 ಬಾರಿ, ಇತರೆ ಹಿಂದುಳಿದ ವರ್ಗದವರಿಗೆ ಮತ್ತು ಅಂಗವೈಕಲ್ಯ ಉಳ್ಳವರಿಗೆ 9 ಬಾರಿ ಹಾಗೂ ಎಸ್ಸಿ/ಎಸ್ಟಿ ವರ್ಗದವರಿಗೆ ವಯೋಮಿತಿ ಮೀರುವವರೆಗೆ ಮಿತಿ ಇಲ್ಲದೆ ಅವಕಾಶಗಳನ್ನು ನೀಡಲಾಗುತ್ತದೆ.
ಅಭ್ಯರ್ಥಿಗಳು ಎಷ್ಟನೇ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬಂಥ ದಾಖಲಾತಿ ಇಟ್ಟು ಪರಿಶೀಲಿಸಲು ಕೂಡ ಯುಪಿಎಸ್ಸಿಗೆ ಈ ಒಟಿಎಸ್ ವ್ಯವಸ್ಥೆ ಅನುಕೂಲ ಒದಗಿಸುತ್ತದೆ. ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಕೆಎಎಸ್, ಕೆಪಿಎಸ್ ಮುಂತಾದ ಪ್ರೊಬೆಷನರಿ ಗೆಜೆಟೆಡ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಯುಪಿಎಸ್ಸಿ ಮಾದರಿಯಲ್ಲಿ (ಪ್ರಿಲಿಮನರಿ ಪರೀಕ್ಷೆ, ನಂತರ ಮೇನ್ಸ್ ಪರೀಕ್ಷೆ ಹಾಗೂ ಕೊನೆಯಲ್ಲಿ ಸಂದರ್ಶನ ಆಧಾರಿತವಾಗಿ ನೇಮಕಾತಿ) ಮೊದಲ ಬಾರಿಗೆ 1998ರಲ್ಲಿ ನಡೆಸಿತ್ತು. ಒಟಿಎಸ್ ಮಾದರಿಯ ಸೌಲಭ್ಯವನ್ನು ಕೆಪಿಎಸ್ಸಿ ಸಹ ಅಳವಡಿಸಿಕೊಂಡರೆ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ. ಮಾಹಿತಿ ತಂತ್ರಜ್ಞಾನದ ನೆರವು ಪಡೆದುಕೊಂಡು, ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ಆ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಿ ಜನರಿಗೆ ಅನುಕೂಲವುಂಟುಮಾಡುವ ಪದ್ಧತಿ ನಿರಂತರವಾಗಿ ನಡೆಯುತ್ತಿರಬೇಕು.