ನ್ಯೂಸ್

ಪೂರ್ವಯೋಜನೆ ಇರಲಿ: ಸಿಇಟಿ ರ‌್ಯಾಂಕ್ ಪಟ್ಟಿಗೆ ಸಮನ್ವಯ ಸೂತ್ರ

ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಸೂಚಿಸಿರುವ ಸಮನ್ವಯ ಸೂತ್ರ ಅಳವಡಿಸಿಕೊಳ್ಳಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡುವ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ರ‍್ಯಾಂಕಿಂಗ್ ಪಟ್ಟಿ ಕುರಿತ ಬಿಕ್ಕಟ್ಟಿಗೆ ಬಹುತೇಕ ಪರಿಹಾರ ದೊರೆತಂತಾಗಿದೆ. ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ತಜ್ಞರ ಸಮಿತಿ ನೀಡಿದ ವರದಿಯನ್ನು ಪರಿಣಿಸಿ ಹೈಕೋರ್ಟ್ ನೀಡಿರುವ ಈ ತೀರ್ಪಿನಿಂದಾಗಿ 1.74 ಲಕ್ಷ ವಿದ್ಯಾರ್ಥಿಗಳು ನಿಟ್ಟಿಸಿರುಬಿಡುವಂತಾಗಿದೆ. ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರತಿವರ್ಷ ಪರೀಕ್ಷೆ ನಡೆಸುತ್ತದೆ. ದ್ವಿತೀಯ ಪಿಯು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ತಲಾ ಶೇ. 50 ಅಂಕಗಳನ್ನು ಆಧರಿಸಿ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸುವುದು ವಾಡಿಕೆ.

ಈ ಬಾರಿ 2021ರಲ್ಲಿ ದ್ವಿತೀಯ ಪಿಯು ಉತ್ತೀರ್ಣರಾದ ಅಂದಾಜು 24 ಸಾವಿರ ವಿದ್ಯಾರ್ಥಿಗಳು ಮತ್ತೆ ಸಿಇಟಿ ಪರೀಕ್ಷೆ ಎದುರಿಸಿದ್ದಾರೆ. ಆದರೆ, ಕೆಇಎಯು ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸುವಾಗ ಈ ಅಭ್ಯರ್ಥಿಗಳ ದ್ವಿತೀಯ ಪಿಯು ಅಂಕಗಳನ್ನು ಕಡೆಗಣಿಸಿ ಕೇವಲ ಪ್ರವೇಶ ಪರೀಕ್ಷೆ ಅಂಕಗಳನ್ನು ಪರಿಗಣಿಸಿತ್ತು. ಏಕೆಂದರೆ, ಕೋವಿಡ್ ಸಾಂಕ್ರಾಮಿಕ ಹರಡಿದ್ದ ಹಿನ್ನೆಲೆಯಲ್ಲಿ 2021ರಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿರಲಿಲ್ಲ. ಪ್ರಥಮ ಪಿಯು ಹಾಗೂ ಎಸ್​ಎಸ್​ಎಲ್​ಸಿ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯು ಅಂಕಗಳನ್ನು ಘೋಷಿಸಲಾಗಿತ್ತು. ಈ ಬಾರಿಯ ಪರೀಕ್ಷೆ ಆಯೋಜಿಸುವಾಗ ಕೆಇಎ 2021ರ ಪುನರಾವರ್ತಿತ ಸಿಇಟಿ ಅಭ್ಯರ್ಥಿಗಳಿಗೆ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಮುಂಚಿತವಾಗಿ ತಿಳಿಸದೇ ಇರುವುದು ಮುಂದಿನ ಗೊಂದಲಗಳಿಗೆ ಕಾರಣವಾಯಿತು. ಇದೇ ಕಾರಣವನ್ನಿಟ್ಟುಕೊಂಡು 2021ರ ಪುನರಾವರ್ತಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಪಡೆದ ಪಿಯು ಅಂಕಗಳನ್ನು ಈ ವರ್ಷದ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಪರಿಗಣಿಸಿ ಹೊಸದಾಗಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ ಮೇಲ್ಮನವಿಯು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪೊ›.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಮುಂದಿಟ್ಟಿರುವ ವಿಧಾನ ಅಳವಡಿಸಿಕೊಳ್ಳಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿರುವುದರಿಂದ ಬಿಕ್ಕಟ್ಟಿಗೆ ತೆರೆ ಬೀಳುವಂತಾಗಿದೆ. ಸಿಟಿಇಯು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪ್ರಮುಖ ಶೈಕ್ಷಣಿಕ ಘಟ್ಟವಾಗಿದ್ದು, ಈ ಪ್ರಕ್ರಿಯೆಯಲ್ಲಿ ನ್ಯೂನತೆಗಳು ಇರದಂತೆ ಕಟ್ಟೆಚ್ಚರ ಬೇಕಾಗುತ್ತದೆ. ಅದರಲ್ಲೂ ಕರ್ನಾಟಕದ ಸಿಇಟಿ ವ್ಯವಸ್ಥೆ ಮಾದರಿಯೆನಿಸಿ, ಶ್ಲಾಘನೆಗೆ ಪಾತ್ರವಾಗಿದೆ. ಸಿಇಟಿ ಬಂದ ಮೇಲೆ ಸಾಕಷ್ಟು ಸುಧಾರಣೆ ಆಗಿದೆ. ಹೀಗಾಗಿ ಆ ವ್ಯವಸ್ಥೆಯಲ್ಲಿ ಲೋಪಕ್ಕೆ ಆಸ್ಪದವಾಗದಂತೆ ಅಧಿಕಾರಿಗಳು ಜವಾಬ್ದಾರಿ ನಿಭಾಯಿಸಬೇಕಾದುದು ಅಪೇಕ್ಷಣೀಯ. ಈ ಮಾತು ಸಿಇಟಿಗೆ ಮಾತ್ರವಲ್ಲ, ಎಸ್​ಎಸ್​ಎಲ್​ಸಿ, ಪಿಯುಸಿ, ನೀಟ್ ಇತ್ಯಾದಿ ಎಲ್ಲ ಪ್ರಮುಖ ಘಟ್ಟಗಳ ಪರೀಕ್ಷೆಗೂ ಅನ್ವಯ.