ಕಳೆದ ಎರಡು ವರ್ಷಗಳಲ್ಲಿ ಕರೊನಾದ ಹೊಡೆತಕ್ಕೆ ಬಹುತೇಕ ಎಲ್ಲ ವಲಯಗಳು ನಲುಗಿಹೋಗಿವೆ. ಹಿಂದೆಂದೂ ಊಹಿಸದ ಸ್ಥಿತಿಯನ್ನು ತಂದೊಡ್ಡಿದ ಸಾಂಕ್ರಾಮಿಕ ಹಾವಳಿಯು ಜೀವಹಾನಿಯ ಜತೆಗೆ ವಿತ್ತೀಯ ಹಾನಿಯನ್ನು ಸೃಷ್ಟಿಸಿತು. ಅದರಲ್ಲೂ, ವಿಶೇಷವಾಗಿ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಭಾರಿ ನಷ್ಟ ಅನುಭವಿಸಿದವು. ಈ ಅವಧಿಯಲ್ಲಿ ಉದ್ಯೋಗನಷ್ಟ, ವೇತನ ಕಡಿತದ ಪ್ರಮಾಣವೂ ಹೆಚ್ಚಿ ಸಂಕಷ್ಟದ ತೀವ್ರತೆ ಹೆಚ್ಚಿತು. ಪ್ರಸಕ್ತ ಸವಾಲನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜುಗಳನ್ನು ಘೋಷಿಸಿ, ಅನುಷ್ಠಾನಕ್ಕೆ ತಂದವು. ಈಗ ಕರೊನಾದ ಅಬ್ಬರ ಇಳಿದಿದೆ. ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿವೆ. ಹೀಗಾಗಿ, ಹೂಡಿಕೆಯನ್ನು ಆಕರ್ಷಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ವದ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ.
ಸ್ವಿಜರ್ಲೆಂಡಿನ ದಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ಹಲವು ಜಾಗತಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಮಹತ್ವದ ಒಪ್ಪಂದಗಳೂ ಏರ್ಪಟ್ಟಿರುವುದು ಗಮನಾರ್ಹ. ಲುಲು ಗ್ರೂಪ್ ಇಂಟರ್ನ್ಯಾಷನಲ್ ರಾಜ್ಯದಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದು, ಈ ಮೂಲಕ 10 ಸಾವಿರ ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ. ಮಾತ್ರವಲ್ಲ, ಸೀಮೆನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಯೋಜನೆಗಳನ್ನು, ಹಿಟಾಟಿ ಎನರ್ಜಿ ದೊಡ್ಡಬಳ್ಳಾಪುರದಲ್ಲಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿವೆ. ಜ್ಯೂಬಿಲಿಯಂಟ್ ಬಯೋಸಿಸ್ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನ ಸಂಶೋಧನಾ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ಹೂಡಿಕೆ ಹೆಚ್ಚಿಸಲು ಮಾತುಕತೆ ನಡೆದಿವೆ.
ಒಟ್ಟಾರೆ, ಜಾಗತಿಕ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿರುವುದು ಮಾತ್ರವಲ್ಲದೆ, ಒಪ್ಪಂದ ಮಾಡಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ. ಆರ್ಥಿಕತೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಒಂದಿಷ್ಟು ಸಮಯ ಬೇಕು. ಆದರೆ, ಈ ನಿಟ್ಟಿನಲ್ಲಿ ಇರಿಸಿದ ಹೆಜ್ಜೆಗಳು ಬಲವಾಗಿರಬೇಕು. ಕರೊನಾ ಕಾಮೋಡ ಬಹುತೇಕ ಕರಗಿರುವಾಗ ಆರ್ಥಿಕ ಚಟುವಟಿಕೆ, ಉದ್ಯಮ ಬೆಳವಣಿಗೆ, ಉದ್ಯೋಗಸೃಷ್ಟಿಯತ್ತ ಗಮನ ಕೇಂದ್ರೀಕರಿಸಲು ಇದು ಸಕಾಲ. ಅದರಲ್ಲೂ, ಕರ್ನಾಟಕ ಭೌಗೋಳಿಕವಾಗಿ ಅನುಕೂಲಕರ ಅಂಶಗಳನ್ನು ಹೊಂದಿದ್ದು ಮೂಲಸೌಕರ್ಯ ನಿಟ್ಟಿನಲ್ಲಿಯೂ ಮುಂಚೆಗಿಂತ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಸೂಕ್ತ ಮಾನವ ಸಂಪನ್ಮೂಲ, ಕೌಶಲ ಹೊಂದಿದ ಸಿಬ್ಬಂದಿ, ಸಾರಿಗೆ ಸಂಪರ್ಕದ ಅನುಕೂಲತೆಗಳು ಹೀಗೆ ಹಲವು ಸಂಗತಿಗಳು ಪೂರಕವಾಗಿವೆ. ಇವುಗಳನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಟ್ಟು ಹೊಸ ಕೈಗಾರಿಕೆ, ಯೋಜನೆಗಳನ್ನು ರಾಜ್ಯಕ್ಕೆ ತಂದಲ್ಲಿ ಅಭಿವೃದ್ಧಿ ಪ್ರಕ್ರಿಯೆಗೆ ವೇಗ ನೀಡಬಹುದು. ಯುವಸಮೂಹದ ಆಶೋತ್ತರಗಳನ್ನು ಸಾಕಾರಗೊಳಿಸಬಹುದು. ದಾವೋಸ್ನಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಸಕಾಲದಲ್ಲಿ ಜಾರಿಯಾಗಿ, ಹೂಡಿಕೆಸ್ನೇಹಿ ವಾತಾವರಣ ರಾಜ್ಯದಲ್ಲಿ ನೆಲೆಗೊಳ್ಳಲಿ.