ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿತ್ತು. ಸರ್ಕಾರ ರಚನೆಯ ನಂತರ, ಆ ಯೋಜನೆಗಳ ಜಾರಿಗೆ ಒಪ್ಪಿಗೆಯನ್ನೂ ನೀಡಿದ್ದು, ವಿವಿಧ ಹಂತಗಳಲ್ಲಿ ಅನುಷ್ಠಾನ ನಡೆಯುತ್ತಿದೆ. ಈ ಯೋಜನೆಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಕೂಡ ಪ್ರಮುಖವಾಗಿದ್ದು, ಈಗ ಇದಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಒನ್, ಬೆಂಗಳೂರು ಒನ್ ಇತ್ಯಾದಿ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮುಖಾಂತರವೂ ಅವಕಾಶವಿದೆ. ಆದರೆ ಒಮ್ಮೆಲೆ ಗ್ರಾಹಕರ ಸಂಖ್ಯೆ ಹೆಚ್ಚಿಗೆಯಿರುವುದರಿಂದಾಗಿ ಸರ್ವರ್ ಕೈಕೊಡುತ್ತಿದೆ. ಈ ಸಮಸ್ಯೆ ಕ್ರಮೇಣ ಸರಿಹೋಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯೋಜನೆಯ ಪರಿಣಾಮವಾಗಿ ವಿದ್ಯುಚ್ಛಕ್ತಿ ಬಳಕೆ ಈಗಿನದಕ್ಕಿಂತ ಅಧಿಕವಾಗುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಸರ್ಕಾರ ಮತ್ತು ಇಂಧನ ಇಲಾಖೆ ಮುಂಚಿತವಾಗಿಯೇ ಸನ್ನದ್ಧತೆಯಲ್ಲಿ ಇರುವುದು ಅಗತ್ಯ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನ ಮೂಲವಾದ ಸೌರವಿದ್ಯುತ್ ವರವಾಗಿ ಒದಗಬಲ್ಲದು. ಹಾಗೆನೋಡಿದರೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಉತ್ತಮ ಪ್ರಗತಿ ಸಾಧಿಸಿದೆ. ಈ ಗತಿಯನ್ನು ಕಾಯ್ದುಕೊಂಡು, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಸಾಧಿಸಿದಲ್ಲಿ ಜನರಿಗೂ ಅನುಕೂಲ; ವಿವಿಧ ವಲಯಗಳ ಬೆಳವಣಿಗೆಗೂ ಅನುಕೂಲ. ಇನ್ನೊಂದೆಡೆ, ಕೇಂದ್ರ ಸರ್ಕಾರವು ನೂತನ ವಿದ್ಯುತ್ ನೀತಿಯಲ್ಲಿ ಕೆಲ ಹೊಸ ಅಂಶ ಸೇರ್ಪಡೆ ಮಾಡಿದ್ದು, ಅಲ್ಲಿಯೂ ಸೌರವಿದ್ಯುತ್ಗೆ ಒತ್ತು ನೀಡಿರುವುದು ಗಮನಾರ್ಹ. ಈ ಪ್ರಕಾರ, ದಿನದಲ್ಲಿ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ದರ ಇರುವ ಅವಧಿ ಹಾಗೂ ಕಡಿಮೆ ವಿದ್ಯುತ್ ದರ ಇರುವ ಅವಧಿ (ಖಜಿಞಛಿ ಟ್ಛ ಠಿಜಛ ಈಚಢಖಟಈ) ಎಂದು ವಿಭಾಗ ಮಾಡಲಾಗುತ್ತಿದ್ದು, ಹಗಲಿನಲ್ಲಿ ವಿದ್ಯುತ್ ಬಿಲ್ನಲ್ಲಿ ಶೇ.20 ಕಡಿಮೆ ಬರುವ ಸಾಧ್ಯತೆಯಿರುತ್ತದೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಇದರ ಒಟ್ಟಾರೆ ತಾತ್ಪರ್ಯವೆಂದರೆ, ಹಗಲಿನಲ್ಲಿ ಸೌರ ವಿದ್ಯುತ್ ಇನ್ನಿತರ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಪೂರೈಕೆಯಾದರೆ, ಬಳಕೆ ಹೆಚ್ಚಿಗೆಯಿರುವ ರಾತ್ರಿ ಅವಧಿಯಲ್ಲಿ ಜಲ, ಉಷ್ಣ ಇತ್ಯಾದಿ ಮೂಲಗಳ ವಿದ್ಯುತ್ ಪೂರೈಕೆಯಾಗುತ್ತದೆ. ಈ ಯೋಜನೆ ಜಾರಿ ನಂತರದಲ್ಲಿ ಬಳಕೆದಾರರು, ಹೆಚ್ಚು ವಿದ್ಯುತ್ ಬೇಡುವ ಕೆಲಸಗಳನ್ನು ಉದಾಹರಣೆಗೆ- ವಾಷಿಂಗ್ ಮಷಿನ್ ಬಳಕೆ- ಇತ್ಯಾದಿಯನ್ನು ವಿದ್ಯುತ್ ದರ ಹೆಚ್ಚಿಗೆ ಇರುವ ಅವಧಿಯಲ್ಲಿ ಬಳಸದಿದ್ದರೆ ಬಿಲ್ ಮೊತ್ತದಲ್ಲಿ ಕಡಿಮೆಯಾಗುತ್ತದೆ ಎಂದು ಇಂಧನ ಸಚಿವರು ಹೇಳಿದ್ದಾರೆ. ಹತ್ತು ಕಿಲೋವಾಟ್ಗಿಂತ ಅಧಿಕ ವಿದ್ಯುತ್ ಬಳಸುವ ವಾಣಿಜ್ಯಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ 2024ರ ಏಪ್ರಿಲ್ನಿಂದ ಇದು ಜಾರಿಗೆ ಬರುತ್ತಿದ್ದು, ದೇಶಾದ್ಯಂತದ ಬಳಕೆದಾರರಿಗೆ 2025ರ ಏಪ್ರಿಲ್ ಅನ್ನು ಗುರಿಯಾಗಿಸಿಕೊಳ್ಳಲಾಗಿದೆ. ಸ್ಮಾರ್ಟ್ ವಿದ್ಯುತ್ ಮೀಟರ್ ಇರುವವರಿಗೆ ಈ ಯೋಜನೆ ತಕ್ಷಣ ಅನ್ವಯವಾಗಲಿದೆ. ಇಂಧನವು ರಾಜ್ಯಗಳ ವಿಷಯವೂ ಆಗಿದ್ದು, ಈ ಯೋಜನೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟತೆ ಮೂಡಬಹುದಾಗಿದೆ. ಇದೇನೇ ಇದ್ದರೂ, ಪರ್ಯಾಯ ಇಂಧನ ಮೂಲಗಳತ್ತ ಕೇಂದ್ರ ಮತ್ತು ಸರ್ಕಾರಗಳ ಒಲವು ಹೆಚ್ಚುತ್ತಿರುವುದು ಸ್ವಾಗತಾರ್ಹ ವಿದ್ಯಮಾನ. ಇಂಥ ನೀತಿಗಳಿಂದ ಜನರಿಗೆ ಹಾಗೇ ಒಟ್ಟಾರೆಯಾಗಿ ದೇಶಕ್ಕೆ ಅಪಾರ ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ.