ನ್ಯೂಸ್

ಸಂಪಾದಕೀಯ | ವಿವೇಚನೆಯ ನಿರ್ಧಾರ ಅಗತ್ಯ; ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಿ..

Webdesk - Ravikanth

ಈಗಾಗಲೇ ಕರೊನಾದ ಸಂಕಟ ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಆರ್ಥಿಕ ಸಂಕಷ್ಟದ ತೀವ್ರತೆ ಹೆಚ್ಚಿದೆ. ಅಲ್ಲದೆ, ಇಂಧನ ಬೆಲೆಯೇರಿಕೆಯ ಪರಿಣಾಮ ಜೀವನಾವಶ್ಯಕ ವಸ್ತುಗಳ ಬೆಲೆಯೂ ಹೆಚ್ಚಾಗಿ, ಜನಸಾಮಾನ್ಯರು ಪರದಾಡುವಂತಾಗಿದೆ. ಬಡ, ಕೆಳಮಧ್ಯಮ ಮತ್ತು ಮಧ್ಯಮವರ್ಗದ ಕುಟುಂಬಗಳ ತಿಂಗಳ ಬಜೆಟ್ ತಲೆಕೆಳಕಾಗಿದ್ದು, ಜೀವನ ಸಾಗಿಸುವುದು ಹೇಗೆ ಎಂಬ ಚಿಂತಿತರಾಗಿದ್ದಾರೆ. ಈ ನಡುವೆ, ರಾಜ್ಯದಲ್ಲಿ ವಿದ್ಯುತ್, ನೀರು ಮತ್ತು ಹಾಲಿನ ದರ ಏರಿಕೆಯ ಪ್ರಸ್ತಾವಗಳನ್ನು ಸರ್ಕಾರ ಪರಿಗಣಿಸಲಿದೆ ಎಂಬ ಸುದ್ದಿಯೇ ಜನರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಿದ್ಯುತ್, ನೀರು ಮತ್ತು ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ. ಈ ಕುರಿತಂತೆ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದರ ಏರಿಕೆಯ ಪ್ರಸ್ತಾವನೆಗಳನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸಿದ ಬಳಿಕವಷ್ಟೇ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿರುವುದು ಕೊಂಚ ಸಮಾಧಾನ ನೀಡುವ ಸಂಗತಿ.

ಕೆಲ ದರ ಏರಿಕೆ ಪ್ರಕ್ರಿಯೆಗಳು ವರ್ಷಕ್ಕೊಮ್ಮೆ ನಿಗದಿಯಂತೆ ನಡೆಯುತ್ತವೆ. ಅದರಂತೆ ವಿದ್ಯುತ್ ದರ ಏರಿಕೆ ತೀರ್ವನವು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​ಸಿ) ಕೈಗೊಳ್ಳುತ್ತದೆ. ಎಸ್ಕಾಂಗಳು ಈ ಪ್ರಸ್ತಾವನೆಯನ್ನು ನೇರವಾಗಿ ಕೆಇಆರ್​ಸಿಗೆ ಸಲ್ಲಿಸುತ್ತವೆ. ಪ್ರಸಕ್ತ ಸರ್ಕಾರವು ಮಧ್ಯಪ್ರವೇಶಿಸಿ ದರ ಏರಿಕೆ ಪ್ರಸ್ತಾವ ಕೈಬಿಡುವಂತೆ ಕೆಇಆರ್​ಸಿಗೆ ಮನವಿ ಮಾಡಿಕೊಳ್ಳಬೇಕಿರುವುದು ಅಗತ್ಯ. ಕೆಇಆರ್​ಸಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಸಿಇಆರ್​ಸಿ ಮೊರೆ ಹೋಗಬೇಕಾಗುತ್ತದೆ. ಆದರೆ, ಇತರ ಕ್ಷೇತ್ರಗಳ ಬೆಲೆ ಏರಿಕೆ ನಿರ್ಧಾರವನ್ನು ತಡೆಯುವ ಅಧಿಕಾರ ಸರ್ಕಾರದ ಕೈಯಲ್ಲೇ ಇದೆ. ಹಾಗಾಗಿ, ಮುಖ್ಯಮಂತ್ರಿಗಳ ಭರವಸೆಯ ಮಾತು ಬರೀ ತಾತ್ಕಾಲಿಕವಾಗಿ ರಾಜಕೀಯ ವಿರೋಧವನ್ನು ನಿಯಂತ್ರಿಸಲು ಸೀಮಿತವಾಗಬಾರದು. ಏಕೆಂದರೆ, ರೈತರು, ಕಾರ್ವಿುಕರು, ದಿನಗೂಲಿಗಳು ಸೇರಿದಂತೆ ಶ್ರಮಿಕವರ್ಗ ಆರ್ಥಿಕ ಬವಣೆಯನ್ನು ಅನುಭವಿಸುತ್ತಿರುವ ಹೊತ್ತಿದು. ಕರೊನಾ ಅವಧಿಯಲ್ಲಿ ದುಡಿಮೆಯೂ ನಿಂತು ಹೋಗಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪರಿಸ್ಥಿತಿ ಸಹಜತೆಗೆ ಬಂತು ಎನ್ನುತ್ತಿರುವಾಗಲೇ ಒಮಿಕ್ರಾನ್ ರೂಪದಲ್ಲಿ ಕರೊನಾ ಸೋಂಕಿನ ಮೂರನೇ ಅಲೆ ತೀವ್ರವಾಗಿ ಹಬ್ಬುತ್ತಿದೆ. ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಅಲ್ಲದೆ, ಈಗಾಗಲೇ ಹಲವು ಜೀವನಾವಶ್ಯಕ ವಸ್ತುಗಳ ದರ ಏರಿಕೆಯಾಗಿ, ಅದರ ಹೊರೆಯೂ ಶ್ರೀಸಾಮಾನ್ಯನ ಮೇಲೆ ಬಿದ್ದಿದೆ.

ಕರೊನಾ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಿದೆ ಎಂಬುದು ನಿರ್ವಿವಾದ. ಆದರೆ, ಇದು ಬೆಲೆ ಏರಿಕೆಗೆ ಸೂಕ್ತವಾದ ಸಮಯವಲ್ಲ. ಮುಖ್ಯಮಂತ್ರಿಗಳು, ಸಂಬಂಧಪಟ್ಟ ಆಯಾ ಇಲಾಖೆಗಳ ಸಚಿವರು ಈ ಕುರಿತಂತೆ ಅವಸರದ ತೀರ್ವನಕ್ಕೆ ಬರಬಾರದು. ಜನಸಾಮಾನ್ಯರ ಹಿತ ಕಾಯುವುದು ಈಗಿನ ಮೊದಲ ಆದ್ಯತೆಯಾಗಬೇಕು. ಪ್ರತಿಪಕ್ಷಗಳು ಕೂಡ ಈ ವಿಷಯದಲ್ಲಿ ರಾಜಕೀಯ ಮಾಡದೆ ಸರ್ಕಾರಕ್ಕೆ ವಾಸ್ತವಸ್ಥಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಸರ್ಕಾರ ಕೂಡ ವಿವೇಚನೆಯಿಂದ ವರ್ತಿಸಬೇಕು.