ನ್ಯೂಸ್

ಆರ್ಥಿಕ ಚೇತರಿಕೆಯ ನಿರೀಕ್ಷೆ; ಬೆಲೆ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಬೇಕು

Webdesk - Ravikanth

ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ. 15.7ರಷ್ಟು ಬೆಳವಣಿಗೆ ಕಾಣಬಹುದಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್​ನ (ಎಸ್​ಬಿಐ) ಇಕೊರ್ಯಾಪ್ ವರದಿ ಅಂದಾಜಿಸಿರುವುದು ದೇಶದ ಆರ್ಥಿಕತೆ ಚೇತರಿಕೆಯ ಸೂಚನೆ ಎಂದೇ ಪರಿಗಣಿಸಬಹುದಾಗಿದೆ. ಈಗ ಕೆಲ ತಿಂಗಳಿಂದ ಜಿಎಸ್​ಟಿ ಸಂಗ್ರಹ ಏರಿರುವುದು ಕೂಡ ಆರ್ಥಿಕ ಚೇತರಿಕೆಯ ಲಕ್ಷಣ. 2022-23ನೇ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ (ಏಪ್ರಿಲ್​ನಿಂದ ಜೂನ್​ವರೆಗೆ) ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಶೇ. 15.7 ಆಗಬಹುದಾಗಿದೆ ಎಂದು ಎಸ್​ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಕಾಂತಿ ಘೋಷ್ ಹೇಳಿದ್ದಾರೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯು ಮೊದಲ ತ್ರೖೆಮಾಸಿಕದ ಜಿಡಿಪಿಯ ಅಂಕಿ-ಅಂಶಗಳನ್ನು ಬರುವ ವಾರ ಬಿಡುಗಡೆ ಮಾಡಲಿದ್ದು, ಆಗ ವಾಸ್ತವಾಂಶ ಬಹಿರಂಗವಾಗಲಿದೆ. 2022-23ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.2ರಷ್ಟು ಬೆಳವಣಿಗೆ ಕಾಣಬಹುದು ಎಂದು ಕಳೆದ ಜೂನ್ ತಿಂಗಳಲ್ಲಿ ಆರ್​ಬಿಐ ಅಂದಾಜಿಸಿತ್ತು. ಜಿಡಿಪಿಯ ಬೆಳವಣಿಗೆ ಪ್ರಥಮ ತ್ರೖೆಮಾಸಿಕದಲ್ಲಿ ಶೇ. 16.2, ದ್ವೀತಿಯ ತ್ರೖೆಮಾಸಿಕದಲ್ಲಿ ಶೇ. 6.2, ತೃತೀಯ ತ್ರೖೆಮಾಸಿಕದಲ್ಲಿ ಶೇ. 4.1 ಮತ್ತು ಕೊನೆಯ ತ್ರೖೆಮಾಸಿಕದಲ್ಲಿ ಶೇ. 4ರಷ್ಟು ಬೆಳವಣಿಗೆ ಕಾಣಬಹುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದರು. ರಷ್ಯಾ- ಯೂಕ್ರೇನ್ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಅಡಚಣೆಗಳೂ ತಲೆದೋರಬಹುದು ಎಂದಿದ್ದರು. ಪ್ರಥಮ ತ್ರೖೆಮಾಸಿಕದಲ್ಲಿ ಆರ್​ಬಿಐ ಅಂದಾಜಿಸಿದ ಬೆಳವಣಿಗೆ ದರಕ್ಕೆ ಬಹುತೇಕ ಸಮಾನವಾಗಿಯೇ ಎಸ್​ಬಿಐ ಇಕೊರ್ಯಾಪ್ ಕೂಡ ನಿರೀಕ್ಷೆ ವ್ಯಕ್ತಪಡಿಸಿದೆ.

ಜಿಡಿಪಿ ಬೆಳವಣಿಗೆ ದರವು 2018-19ರಲ್ಲಿ ಶೇ. 6.5 ಹಾಗೂ 2019-20ರಲ್ಲಿ ಶೇ. 4 ಆಗಿತ್ತು. 2020-21ರಲ್ಲಿ ಈ ದರವು ಮೈನಸ್ ಶೇ. 6.6ರಷ್ಟು ಕುಸಿತ ಕಂಡಿತ್ತು. ಕೋವಿಡ್ ಮಹಾಮಾರಿ ಹಾಗೂ ಲಾಕ್​ಡೌನ್ ಹೇರಿಕೆ ಸಂಗತಿಗಳೇ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದವು. 2021-22ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 8.7ರಷ್ಟು ಏರಿಕೆ ಕಂಡಿತ್ತು. ಜಿಡಿಪಿ ಹಾಗೂ ಹಣದುಬ್ಬರ ದೇಶದ ಆರ್ಥಿಕ ಸ್ಥಿತಿಗತಿ ಸೂಚಿಸುವ ಎರಡು ಪ್ರಮುಖ ಮಾನದಂಡಗಳಾಗಿವೆ. ಜಿಡಿಪಿಯು ದೇಶದ ಜನರ ತಲಾದಾಯವನ್ನು ಸೂಚಿಸುತ್ತದೆ. ಜಿಡಿಪಿ ಏರಿಕೆಯಾದರೆ ಜನರ ಆದಾಯದಲ್ಲಿ ಏರಿಕೆಯಾದಂತೆ. ಆದರೆ, ಜಿಡಿಪಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ದೇಶದಲ್ಲಿ ಹಣದುಬ್ಬರವೂ ಹೆಚ್ಚಾಗುತ್ತಲೇ ಸಾಗಿದೆ. 2022-23ನೇ ಸಾಲಿನಲ್ಲಿ ಹಣದುಬ್ಬರವು ಶೇ. 6.7ರಷ್ಟು ಆಗಬಹುದೆಂದು ಆರ್​ಬಿಐ ಅಂದಾಜಿಸಿರುವುದು ಅಷ್ಟೇನು ಶುಭ ಸಂಗತಿಯಲ್ಲ. ಅಲ್ಲದೆ, ಕಳೆದ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರವು ದಾಖಲೆಯ ಮಟ್ಟವಾದ ಶೇ. 15.08ಕ್ಕೆ ಏರುವ ಮೂಲಕ ಆತಂಕ ಸೃಷ್ಟಿಸಿತ್ತು. ಹೀಗಾಗಿ, ಹಣದುಬ್ಬರ ದರವನ್ನು ಶೇ. 6ರ ಒಳಗೆ ಇರುವಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಆರ್​ಬಿಐ ರೆಪೋ ದರ ಹೆಚ್ಚಿಸುವ ಅಸ್ತ್ರ ಪ್ರಯೋಗಿಸಿತ್ತು. ಹಣದುಬ್ಬರ ಹೆಚ್ಚುತ್ತಲೇ ಹೋದರೆ ಜನಸಾಮಾನ್ಯರಿಗೆ ಅಗತ್ಯವಸ್ತುಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಈಗ ಕೆಲ ವಸ್ತುಗಳ ಬೆಲೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ, ಇನ್ನೂ ಎಷ್ಟೋ ಅಗತ್ಯವಸ್ತುಗಳ ದರ ಏರಿಕೊಂಡೇ ಇದೆ. ಹೀಗಾಗಿ, ಬೆಲೆಯೇರಿಕೆ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳಬೇಕಾದ ತುರ್ತಿದೆ.