ನ್ಯೂಸ್

ಸಮರ್ಪಕವಾಗಿ ತಲುಪಲಿ; ಮನೆಬಾಗಿಲಿಗೇ ಪಡಿತರ ಯೋಜನೆ..

ಪಡಿತರ ವಿತರಣೆ ವ್ಯವಸ್ಥೆಯಲ್ಲಿನ ಗೊಂದಲಗಳು, ಅಪಸವ್ಯಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಅದರಲ್ಲೂ, ನಿಜವಾದ ಫಲಾನುಭವಿಗಳಿಗೆ ಸಿಗದೆ ಅನ್ಯರ ಪಾಲು ಆದಾಗ ಬಡವರು ಸಂಕಷ್ಟಕ್ಕೆ ಈಡಾಗುವುದು ಮಾತ್ರವಲ್ಲ ಯೋಜನೆಯ ಮೂಲಉದ್ದೇಶವೂ ವಿಫಲವಾಗುತ್ತದೆ. ರೇಷನ್ ಕಾರ್ಡ್ ಹಂಚಿಕೆಯ ಸಮಸ್ಯೆಯೂ ಅಷ್ಟೇ ತೀವ್ರ ಸ್ವರೂಪದ್ದು. ನಕಲಿ ಬಿಪಿಎಲ್ ಕಾರ್ಡ್​ಗಳನ್ನು ಕಾಲಕಾಲಕ್ಕೆ ಪತ್ತೆ ಹಚ್ಚಲಾಗುತ್ತಿದ್ದರೂ, ಈ ನಕಲಿ ಕಾರ್ಡ್ ಮಾಡಿಸುವ ಜಾಲವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಕಾರ್ಡ್ ಸತ್ಪಾತ್ರರಿಗೆ ದೊರೆತರೂ, ಪಡಿತರ ಸಿಗುತ್ತದೆ ಎಂಬ ಖಾತ್ರಿ ಇಲ್ಲ. ಅದೇನಿದ್ದರೂ, ಆಗಾಗ ಸುಧಾರಣೆಯ ಹೊಸ ಉಪಕ್ರಮಗಳು, ಹೊಸ ಪ್ರಯೋಗಗಳನ್ನು ಕೈಗೊಂಡು ಒಂದಿಷ್ಟು ವ್ಯವಸ್ಥೆ ಸುಧಾರಣೆಗೆ ಯತ್ನಿಸಲಾಗುತ್ತಿದೆ. ಈಗಾಗಲೇ ಹಲವು ರಾಜ್ಯಗಳು ಈ ಸಂಬಂಧ ಮಹತ್ವದ ಹೆಜ್ಜೆಗಳನ್ನು ಇರಿಸಿದ್ದು, ಕರ್ನಾಟಕವು ಆಂಧ್ರ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ಆಂಧ್ರಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳೇ ಮನೆಬಾಗಿಲಿಗೆ ಸರಕು ಸಾಗಾಣಿಕೆಯ ಆಟೋ ಕಳುಹಿಸಿ ರೇಷನ್ ತಲುಪಿಸುತ್ತಿವೆ. ಪ್ರತಿ ಲಗೇಜ್ ಆಟೋಕ್ಕೆ ಇಬ್ಬರು ಸಿಬ್ಬಂದಿಯಿದ್ದು, ಸ್ಥಳದಲ್ಲೇ ಪಡಿತರವನ್ನು ತೂಕ ಮಾಡಿ ವಿತರಿಸಲಾಗುತ್ತಿದೆ. ಆಂಧ್ರದ ಯೋಜನೆ ಬಗ್ಗೆ ರಾಜ್ಯ ಆಹಾರ ಇಲಾಖೆ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಯೋಜನೆ ರೂಪುರೇಷೆಯ ಬಗ್ಗೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಈಗಾಗಲೇ ಒಂದು ಸಭೆ ನಡೆದಿದ್ದು, ಮುಂದಿನ ನಾಲ್ಕೈದು ದಿನದಲ್ಲಿ ಸಚಿವರ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ದಿನಗಳ ಹಿಂದಷ್ಟೇ ಮನೆಬಾಗಿಲಿಗೇ ಪಡಿತರ ತಲುಪಿಸುವ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸಿದ್ದರು. ಖಂಡಿತವಾಗಿಯೂ ಇದು ಉತ್ತಮ ಆಶಯದ ಯೋಜನೆಯೇ. ಫಲಾನುಭವಿಗಳ ಶ್ರಮ, ಸಮಯ ಎರಡನ್ನೂ ಉಳಿಸುತ್ತದೆ. ರೇಷನ್ ಪಡೆಯಲು ಆ ದಿನದ ಕೂಲಿ ಕೆಲಸ ಬಿಟ್ಟು ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವ ಕಿರಿಕಿರಿ ಇಲ್ಲ. ತೂಕದಲ್ಲಿ ಮೋಸ, ಹಣವಸೂಲಿ, ಕಿರುಕುಳ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ. ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಕಾರ್ಡ್​ಗೆ ಜೋಡಣೆ ಮಾಡಲಾಗಿರುವುದರಿಂದ ಅನಧಿಕೃತ ಪಡಿತರ ವಿತರಣೆಯ ಸಮಸ್ಯೆಯೂ ತಗ್ಗಬಹುದು.

ಯಾವುದೇ ಪಕ್ಷದ ಸರ್ಕಾರವಿರಲಿ, ಇತರ ರಾಜ್ಯಗಳ ಉತ್ತಮ ಯೋಜನೆ, ಕಾರ್ಯಕ್ರಮಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ, ಅದನ್ನು ಇಲ್ಲಿಯ ಜನರ ಅನುಕೂಲಕ್ಕೆ ಪೂರಕವಾಗುವಂತೆ ಜಾರಿ ಮಾಡುವುದು ಉತ್ತಮ ಕ್ರಮ. ಪಡಿತರ ವಿತರಣೆ ವ್ಯವಸ್ಥೆಯಲ್ಲಂತೂ ದೊಡ್ಡ ಮಟ್ಟದ ಸುಧಾರಣೆ ಅಗತ್ಯವಾಗಿತ್ತು. ಆದರೆ, ಹೊಸ ಯೋಜನೆಯ ಜಾರಿಯ ವೇಳೆ ಹಳೆಯ ತಪು್ಪಗಳು ನುಸುಳದಂತೆ ಕಾಳಜಿ ವಹಿಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮುಂಚಿನಂತೆ ನಿಗದಿತ ಕಮಿಷನ್ ದೊರೆಯುವುದರಿಂದ ಅವರೇನೂ ಆತಂಕ ಪಡುವ ಅಗತ್ಯವಿಲ್ಲ. ಒಟ್ಟಾರೆ, ಪಡಿತರ ಅನರ್ಹರ ಪಾಲಾಗದಂತೆ, ನೈಜ ಫಲಾನುಭವಿಗಳ ಮನೆಬಾಗಿಲಿಗೇ ತಲುಪಿ, ಅವರ ಹಸಿವನ್ನು ನೀಗಿಸಿದರೆ ಅದುವೇ ದೊಡ್ಡ ಸಾರ್ಥಕತೆ. ಸರ್ಕಾರದ ಕಾರ್ಯದಕ್ಷತೆಯ ದ್ಯೋತಕವೂ ಹೌದು.