ಆನ್ಲೈನ್ ಮೂಲಕ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿಸುವ ಗ್ರಾಹಕರನ್ನು ನಕಲಿ ವಿಮರ್ಶೆ(ರಿವ್ಯೂ)ಯಿಂದ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಮಾನದಂಡ ರೂಪಿಸಿದ ವಿಶ್ವದ ಮುಂಚೂಣಿ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪ್ರಸ್ತುತ ಇಂಟರ್ನೆಟ್ ಹಾಗೂ ಸಂವಹನ ತಂತ್ರಜ್ಞಾನದಲ್ಲಿನ ಅಪಾರ ಬೆಳವಣಿಗೆಗಳ ಪರಿಣಾಮವಾಗಿ ಸಾಂಪ್ರದಾಯಿಕ ಚಿಲ್ಲರೆ ಮಾರುಕಟ್ಟೆಗೆ ಹೋಲಿಸಿದರೆ ಆನ್ಲೈನ್ ಮಾರುಕಟ್ಟೆಯ ವ್ಯಾಪಾರ ವಹಿವಾಟು ಬಹಳ ವೇಗವಾಗಿ ಹೆಚ್ಚುತ್ತಿದೆ. ಎರಡು ವರ್ಷಗಳ ಕಾಲ ಬಾಧಿಸಿದ ಕೋವಿಡ್ ಸಾಂಕ್ರಾಮಿಕದ ಸಂದರ್ಭ ಕೂಡ ಆನ್ಲೈನ್ ಮಾರುಕಟ್ಟೆ ವಿಸ್ತರಣೆಗೆ ಕೊಡುಗೆ ನೀಡಿದೆ.
ಜಾಗತಿಕವಾಗಿ ಒಟ್ಟಾರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಆನ್ಲೈನ್ ವಹಿವಾಟಿನ ಪಾಲು 2022ರಲ್ಲಿ ಶೇ. 19.7ರಷ್ಟಿದ್ದು, ಇದರ ಮೊತ್ತ 465 ಲಕ್ಷ ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. 2026ರ ಹೊತ್ತಿಗೆ ಈ ಆನ್ಲೈನ್ ವಹಿವಾಟಿನ ಪಾಲು ಶೇ 24ಕ್ಕೆ ಏರಲಿದ್ದು, ಇದರ ಮೊತ್ತವು 661 ಲಕ್ಷ ಕೋಟಿ ರೂಪಾಯಿ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೆಳವಣಿಗೆಗಳಿಗೆ ಭಾರತ ಕೂಡ ಹೊರತಾಗಿಲ್ಲ. ಜನಸಂಖ್ಯೆಯಲ್ಲಿ ಪ್ರಸ್ತುತ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ದೇಶವಾಗಿರುವ ಭಾರತ ಮುಂದಿನ ವರ್ಷದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳಲಿದೆ. 140 ಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ ಬೃಹತ್ ಚಿಲ್ಲರೆ ಮಾರುಕಟ್ಟೆಯಾಗಿರುವ ಭಾರತದಲ್ಲಿ ಸ್ವದೇಶಿ ಇ- ಕಾಮರ್ಸ್ ಕಂಪನಿಗಳಲ್ಲದೆ, ಜಾಗತಿಕ ಪ್ರಮುಖ ಸಂಸ್ಥೆಗಳು ಕೂಡ ಕಾಲಿಟ್ಟಿದ್ದು, ಆನ್ಲೈನ್ ವಹಿವಾಟನ್ನು ಭರ್ಜರಿಯಾಗಿ ನಡೆಸುತ್ತಿವೆ.
ಭಾರತದಲ್ಲಿ 2021ರಲ್ಲಿ ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ 83 ಕೋಟಿಗೆ ತಲುಪಿದ್ದು, ಇದರಲ್ಲಿ ಶೇ. 97ರಷ್ಟು ಸಂಪರ್ಕ ಇರುವುದು ಸ್ಮಾರ್ಟ್ಫೋನ್ಗಳ ಮೂಲಕ. ಇದರಿಂದಾಗಿ, ಬೆರಳತುದಿಯಲ್ಲಿಯೇ ಶಾಪಿಂಗ್ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. 2022ರಲ್ಲಿ ಭಾರತದಲ್ಲಿ ಇ-ಕಾಮರ್ಸ್ ವಹಿವಾಟು ಶೇ. 21.5ರಷ್ಟು ಬೆಳವಣಿಗೆ ದಾಖಲಿಸಲಿದ್ದು, ಇದರ ಮೊತ್ತವು 6,10,500 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. 2030ರ ಹೊತ್ತಿಗೆ ಈ ಮೊತ್ತವು 28 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಮನೆಯಲ್ಲೇ ಕುಳಿತು ಖರೀದಿ, ಸಮಯದ ಉಳಿತಾಯ, ಸ್ಪರ್ಧಾತ್ಮಕ ಬೆಲೆ, ವೈವಿಧ್ಯಮಯ ಉತ್ಪನ್ನ ಲಭ್ಯತೆ, ಉತ್ಪನ್ನದ ಬಗೆಗೆ ಸವಿವರ ಮಾಹಿತಿ, ಉತ್ಪನ್ನಗಳ ಹೋಲಿಕೆ ಮುಂತಾದ ಅನುಕೂಲಗಳ ಕಾರಣಕ್ಕಾಗಿ ಆನ್ಲೈನ್ ಖರೀದಿಯತ್ತ ಗ್ರಾಹಕರು ಒಲವು ತೋರುತ್ತಿದ್ದಾರೆ. ಆದರೆ, ಭೌತಿಕವಾಗಿ ವಸ್ತುಗಳನ್ನು ರ್ಸ³ಸಿ ನೋಡಲು ಸಾಧ್ಯವಾಗದಿರುವುದು ಇದರಲ್ಲಿರುವ ಪ್ರಮುಖ ಅಡಚಣೆ.
ಹೀಗಾಗಿ, ಗ್ರಾಹಕರು ಉತ್ಪನ್ನ ಖರೀದಿಸುವಾಗ ವಿಮರ್ಶೆಯ ಮೊರೆ ಹೋಗುತ್ತಾರೆ. ಮಾರಾಟಗಾರರು ಗ್ರಾಹಕರನ್ನು ಆಕರ್ಷಿಸಲು ಸುಳ್ಳು ವಿಮರ್ಶೆಗಳನ್ನು ಪ್ರಕಟಿಸುತ್ತಾರೆ; ನಕಾರಾತ್ಮಕವಾಗಿ ಬರೆದ ವಿಮರ್ಶೆಗಳನ್ನು ಪ್ರಕಟಿಸುವುದಿಲ್ಲ ಎಂಬ ಗಂಭೀರ ಆಪಾದನೆ ಇದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಹಿತಾಸಕ್ತಿ ಕಾಪಾಡಲು ನಕಲಿ ವಿಮರ್ಶೆಗೆ ಬ್ರೇಕ್ ಹಾಕಲು ಹಾಗೂ ಖರೀದಿದಾರರು ವ್ಯಕ್ತಪಡಿಸಿದ ನೈಜ ಅಭಿಪ್ರಾಯಗಳನ್ನು ಪ್ರಕಟಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿರುವುದು ಸಕಾಲಿಕ ಕ್ರಮವಾಗಿದ್ದು,ಈ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತಹ ವ್ಯವಸ್ಥೆ ರೂಪಿಸಬೇಕಿದೆ.