ಎಲ್ಲ ಪೌರಕಾರ್ವಿುಕರ ಸೇವೆಯನ್ನು ಕಾಯಂ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಚಾಲಕ, ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಸಂಬಂಧಪಟ್ಟ ಸಚಿವರು ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಇವೆಲ್ಲ ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದು ಸಾವಿರಾರು ಜನರ ಸರ್ಕಾರಿ ಉದ್ಯೋಗದ ಕನಸು ನನಸಾಗಬಹುದೆಂದು ನಿರೀಕ್ಷಿಸಬಹುದಾಗಿದೆ. ನಾಳೆ, ಸೆ. 23ರಂದು ಪೌರಕಾರ್ವಿುಕರ ದಿನವನ್ನು ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಲ್ಲ ಪೌರಕಾರ್ವಿುಕರ (ಅಂದಾಜು 43 ಸಾವಿರ) ಸೇವೆ ಕಾಯಂ ಮಾಡುವ ಘೋಷಣೆಯನ್ನು ಮಾಡುವ ಮೂಲಕ ಉಡುಗೊರೆ ನೀಡಿದ್ದಾರೆ.
ಕಳೆದ ಜುಲೈ 1ರಂದು ಪೌರಕಾರ್ವಿುಕರು ಸೇವೆ ಕಾಯಮಾತಿಗೆ ಒತ್ತಾಯಿಸಿ ರಾಜ್ಯದಾದ್ಯಂತ ಮುಷ್ಕರ ಕೈಗೊಂಡಿದ್ದರು. ಅದೇ ದಿನ ಬೇಡಿಕೆ ಈಡೇರಿಕೆ ಕುರಿತಂತೆ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು ಸೇವೆ ಕಾಯಂ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಕಾನೂನು ಅಂಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಿ, ಮೂರು ತಿಂಗಳಲ್ಲಿ ನೇಮಕ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಸೇವೆ ಕಾಯಂ ಮಾಡುವ ಮಹತ್ವದ ಘೋಷಣೆಯನ್ನು ಅವರು ಮಾಡಿದ್ದಾರೆ. ಬಹುತೇಕವಾಗಿ ಸಮಾಜದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಪೌರಕಾರ್ವಿುಕರ ಸೇವೆ ಮಹತ್ವದ್ದು. ಪ್ರತಿದಿನ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಪೌರಕಾರ್ವಿುಕರು ಕೋವಿಡ್ ಸಾಂಕ್ರಾಮಿಕದ ಹಾವಳಿಯಲ್ಲೂ ತಮ್ಮ ಆರೋಗ್ಯದ ಹಂಗು ತೊರೆದು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕಾರ್ಯಗೈದಿದ್ದರು. ಇವರ ಸೇವೆಯನ್ನು ಕಾಯಂ ಮಾಡುವುದಾಗಿ ಘೋಷಿಸಿರುವ ಸರ್ಕಾರವು ಶೀಘ್ರ ಇದನ್ನು ಕಾರ್ಯರೂಪಕ್ಕೆ ತರುವುದು ಈ ವರ್ಗದ ಸಬಲೀಕರಣಕ್ಕೆ ಮಹತ್ವದ ಕೊಡುಗೆಯಾಗಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಒಟ್ಟು 1142 ನಿಲಯ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 212 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ತೋಟಗಾರಿಕೆ ಇಲಾಖೆಯಲ್ಲಿ 200 ತೋಟಗಾರರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ. ಈ ಹುದ್ದೆಗಳ ನೇಮಕಕ್ಕೆ ಮೇ ತಿಂಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣಾ ಅರ್ಜಿಗಳ ಪರಿಶೀಲನೆ ನಂತರ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. 2019ರಲ್ಲೇ ಅಧಿಸೂಚನೆ ಹೊರಡಿಸಿ, ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಇಲಾಖೆಯ 2,814 ಚಾಲಕರ ನೇಮಕ ಪ್ರಕ್ರಿಯೆಯನ್ನು ಮತ್ತೆ ಆರಂಭಿಸುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಈ ಎಲ್ಲ ನೇಮಕಾತಿಗಳು ಶೀಘ್ರ ಪೂರ್ಣಗೊಂಡರೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿ ಹಾಗೂ ದಕ್ಷತೆಯಿಂದ ಒದಗಿಸಲು ಸಾಧ್ಯವಾಗುತ್ತದೆ.