ನ್ಯೂಸ್

ಸಂಪಾದಕೀಯ | ಶತಕೋಟಿ ಸಾಧನೆ; ಕರೊನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ

Webdesk - Ravikanth

ಭಾರತವು ಕೋವಿಡ್ ವಿರುದ್ಧ ಲಸಿಕೆ ನೀಡುವುದರಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸಿದ್ದು, ಜಾಗತಿಕ ವಲಯವೂ ಭಾರತದ ಈ ಸಾಧನೆಗೆ ಹೆಮ್ಮೆ ಪಡುತ್ತಿದೆ. ಲಸಿಕೆಯ 100 ಕೋಟಿ ಡೋಸ್ ನೀಡಲಾಗಿದ್ದು, ಈ ಮೂಲಕ ಕರೊನಾ ಸೋಂಕು ವಿರುದ್ಧದ ಸಮರದಲ್ಲಿ ನಿರ್ಣಾಯಕ ಮೇಲುಗೈ ಸಾಧಿಸಿದಂತಾಗಿದೆ. ಕರೊನಾದ ಮೊದಲನೇ ಮತ್ತು ಎರಡನೇ ಅಲೆ ಸೃಷ್ಟಿಸಿದ ಹಾನಿ ಅಷ್ಟಿಷ್ಟಲ್ಲ. ಮೂರನೇ ಅಲೆಯೂ ವ್ಯಾಪಿಸಲಿದೆ ಎಂಬ ಸಂಗತಿ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿತು. ಆದರೆ, ಲಸಿಕೆ ಅಭಿಯಾನಕ್ಕೆ ವೇಗ ನೀಡಿದ ಪರಿಣಾಮ, ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿವೆ. ಜನಜೀವನ ಸಾಮಾನ್ಯಸ್ಥಿತಿಗೆ ಮರಳುತ್ತಿದ್ದು, ಬಹುತೇಕ ರಾಜ್ಯಗಳಲ್ಲಿ ಶಾಲೆಗಳು ಕೂಡ ಆರಂಭವಾಗಿವೆ.

ಸಂಕಷ್ಟಗಳು ದಿಢೀರಾಗಿ ಎದುರಾದರೆ ಆತ್ಮಸ್ಥೈರ್ಯವನ್ನೇ ಅಲುಗಾಡಿಸಿ ಬಿಡುತ್ತವೆ. ಅದರಲ್ಲೂ, ಭಾರತದಂಥ ಭಾರಿ ಜನಸಂಖ್ಯೆಯ ದೇಶದಲ್ಲಿ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುವುದು ಸಾಧಾರಣ ಸಂಗತಿಯೇನಲ್ಲ. ಕರೊನಾ ನಮ್ಮ ಆರೋಗ್ಯ ವ್ಯವಸ್ಥೆಗೇ ಸವಾಲೊಡ್ಡಿತ್ತು. ಲಸಿಕೆ ವಿತರಣೆಯೇ ಇದಕ್ಕೆ ಪರಿಣಾಮಕಾರಿ ಅಸ್ತ್ರ ಎಂದು ಸಾಬೀತಾದಾಗ ಕೇಂದ್ರ ಸರ್ಕಾರ ಹಂತ-ಹಂತವಾಗಿ ಎಲ್ಲ ವಯಸ್ಸಿನವರಿಗೂ ಉಚಿತವಾಗಿ ಲಸಿಕೆ ನೀಡುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿತು. ಆದರೂ, ಅಪಸ್ವರ ಎತ್ತಿದವರ ಸಂಖ್ಯೆಯೇನೂ ಕಡಿಮೆಯಲ್ಲ. ಇಷ್ಟು ದೊಡ್ಡ ದೇಶಕ್ಕೆ ಲಸಿಕೆ ನೀಡಲು ಹಲವು ವರ್ಷಗಳೇ ಬೇಕಾಗುತ್ತವೆ; ಅಷ್ಟರಲ್ಲಿ ಕರೊನಾ ತನ್ನ ಆರ್ಭಟ ತೋರಿಸಿಯಾಗಿರುತ್ತದೆ ಎಂಬೆಲ್ಲ ಟೀಕೆಗಳು ಕೇಳಿಬಂದವು. ಆದರೆ, ಸಂಕಷ್ಟಗಳನ್ನೇ ಅವಕಾಶವಾಗಿ ಪರಿವರ್ತಿಸಿ ಪ್ರಬಲ ಇಚ್ಛಾಶಕ್ತಿಯಿಂದ ಮುಂದಡಿ ಇಟ್ಟರೆ ಅಸಾಧಾರಣ ಸಾಧನೆ ಸಾಧ್ಯ ಎಂಬುದಕ್ಕೆ ಈ ಲಸಿಕೆ ಅಭಿಯಾನವೇ ಸಾಕ್ಷಿ.

ಭಾರತ ಲಸಿಕೆ ವಿತರಣೆಯಲ್ಲಿ ಯಾವುದೇ ದೇಶವಲ್ಲ, ಖಂಡಕ್ಕಿಂತಲೂ ಮುಂದಿರುವುದು ವಿಶೇಷ. ಭಾರತವು ದಿನಂಪ್ರತಿ ಸರಾಸರಿ 30.07 ಲಕ್ಷ ಡೋಸ್​ಗಳನ್ನು ನೀಡುತ್ತಿದೆ. ದಕ್ಷಿಣ ಅಮೆರಿಕ ನಿತ್ಯ 20.23 ಲಕ್ಷ, ಉತ್ತರ ಅಮೆರಿಕ 18.49 ಲಕ್ಷ, ಆಫ್ರಿಕಾ 12.68 ಲಕ್ಷ, ಆಸ್ಟ್ರೇಲಿಯಾ ಖಂಡದಲ್ಲಿ 3.33 ಲಕ್ಷ ಡೋಸ್ ವಿತರಿಸಲಾಗುತ್ತಿದೆ. ಭಾರತದ ಈ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಪ್ರಶಂಸಿಸಿ, ಅಭಿನಂದಿಸಿದೆ. ‘ಬಲವಾದ ನಾಯಕತ್ವ, ಅಂತರ್ ವಲಯದ ಒಗ್ಗೂಡಿಸುವಿಕೆ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಪಡೆಯ ಸಮರ್ಪಕ ಪ್ರಯತ್ನ ಮತ್ತು ಜನರ ಭಾಗವಹಿಸುವಿಕೆ ಇಲ್ಲದೆ ಈ ಅಸಾಮಾನ್ಯ ಸಾಧನೆ ಸಾಧ್ಯವಿಲ್ಲ’ ಎಂದಿದೆ ಡಬ್ಲ್ಯುಎಚ್​ಒ. 100 ಕೋಟಿ ಡೋಸ್ ಲಸಿಕೆ ಮೂಲಕ ಭಾರತ ಬಲವಾದ ರಕ್ಷಾಕವಚ ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಪ್ರಧಾನಿ. ಈ ಸಾಧನೆಯ ಗರಿ ಕೋವಿಡ್ ವಿರುದ್ಧ ಹೋರಾಡಲು ಮತ್ತಷ್ಟು ಸ್ಪೂರ್ತಿ ತುಂಬಲಿ. ಸದ್ಯದಲ್ಲೇ, 1ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ತಯಾರಿ ಮಾಡಿಕೊಂಡು, ಈ ಅಭಿಯಾನವೂ ಯಶಸ್ವಿಯಾಗಲಿ.