ನ್ಯೂಸ್

ಆಂತರಿಕ ಉಗ್ರರ ಆತಂಕ: ಭಯೋತ್ಪಾದನೆ ಜಾಲ ರಾಜ್ಯದಲ್ಲಿ ವ್ಯಾಪಕ..

Webdesk - Ravikanth

ಮಂಗಳೂರು ಕಂಕನಾಡಿಯ ನಾಗುರಿ ಬಳಿ ಆಟೋರಿಕ್ಷಾದಲ್ಲಿ ಕುಮ್ಮರ್ ಬಾಂಬ್ ಸ್ಫೋಟ ಪ್ರಕರಣ ಭಯೋತ್ಪಾದನೆ ಕೃತ್ಯ ಎಂಬುದು ಬಹುತೇಕ ಸ್ಪಷ್ಟವಾಗಿದ್ದು, ತೀವ್ರ ಆತಂಕದ ಸಂಗತಿಯೇ ಆಗಿದೆ. ಕಾಶ್ಮೀರ, ಈಶಾನ್ಯ ರಾಜ್ಯಗಳು ಮುಂತಾದ ಪ್ರದೇಶಗಳಲ್ಲಿ ಬಾಹ್ಯ ರಾಷ್ಟ್ರಗಳ ಪರೋಕ್ಷ ಬೆಂಬಲದೊಂದಿಗೆ ಹಲವಾರು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡು ಈ ನಿಟ್ಟಿನಲ್ಲಿ ವ್ಯಾಪಕ ಯಶಸ್ಸನ್ನು ಕಂಡಿರುವುದು ಉಗ್ರ ಪ್ರಕರಣಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿರುವುದು ಅಂಕಿ-ಅಂಶಗಳಿಂದ ವೇದ್ಯವಾಗುತ್ತದೆ.

ಬಾಹ್ಯ ಬೆಂಬಲಿತ ಭಯೋತ್ಪಾದನೆಗೆ ಒಂದು ನಿರ್ದಿಷ್ಟ ಪ್ರದೇಶ ಹಾಗೂ ಚೌಕಟ್ಟಿನ ಅಡಿಯಲ್ಲಿ ಗುರುತಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗಬಹುದಾಗಿದೆ. ಆದರೆ, ಅಡುಗೆಯ ಕುಕ್ಕರ್ ಬಳಸಿ ಈ ರೀತಿಯ ವಿಧ್ವಂಸಕ ಕೃತ್ಯಗಳನ್ನು ಎಸಗುವ ಆಂತರಿಕ ಉಗ್ರರನ್ನು ಸದೆಬಡಿಯುವುದು ಮತ್ತೊಂದು ರೀತಿಯ ಸವಾಲು. ಏಕೆಂದರೆ, ಇವರು ನಮ್ಮೊಳಗೆ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಮನಸ್ಥಿತಿಯುಳ್ಳವರು. ಈ ರೀತಿ ಕುಕ್ಕರ್ ಬಾಂಬ್​ಗಳನ್ನು ಹಿಂದೆಯೂ ಬಳಸಲಾಗಿದೆ. ಮಂಗಳೂರಿನಲ್ಲಿ ಭಯೋತ್ಪಾದಕರ ಪರವಾಗಿ ಗೋಡೆಬರಹ ಪ್ರಕರಣದಲ್ಲಿ ಬಂಧಿತರಾಗಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡವರಿಗೂ ಈ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಸಂಬಂಧ ಇರುವುದನ್ನು ಪೊಲೀಸರು ಶಂಕಿಸಿದ್ದಾರೆ.

ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರು ಈ ದಿನಗಳಲ್ಲಿ ಇಂಟರ್​ನೆಟ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಂಘಟನೆ ಮಾಡಿ, ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವುದು ಕೂಡ ಆತಂಕದ ವಿಚಾರವಾಗಿದೆ. ಸೈಬರ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ಜಿಲ್ಲೆ, ರಾಜ್ಯ ಮತ್ತು ಹೊರದೇಶಗಳಿಗೂ ಸಂಪರ್ಕವನ್ನು ಈ ದುಷ್ಕರ್ವಿುಗಳು ವಿಸ್ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸೈಬರ್ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವ ಮೂಲಕ ಕಡಿವಾಣ ಹಾಕುವ ಅಗತ್ಯ ಇದೆ. ಟೆರರಿಸ್ಟ್ ಸ್ಲೀಪರ್ ಸೆಲ್​ಗಳು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸಕ್ರಿಯವಾಗಿದ್ದು ಕರ್ನಾಟಕದ ಕರಾವಳಿ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ಜಮಾತ್-ಉಲ್ - ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಎಂಬ ಉಗ್ರ ಸಂಘಟನೆಯು ಈ ಪ್ರದೇಶದಲ್ಲಿ ಕಾರ್ಯನಿರತವಾಗಿದೆ ಎಂದು ಈ ಹಿಂದೆ ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದರು.

ಪ್ರಸ್ತುತ ಮಂಗಳೂರಿನಲ್ಲಿ ಸ್ಪೋಟಿಸಿದ ಕುಕ್ಕರ್ ಬಾಂಬ್ ಪ್ರಕರಣದಲ್ಲಿ ಬಹಿರಂಗವಾಗಿರುವ ಸಂಗತಿಗಳನ್ನು ಗಮನಿಸಿದರೆ, ಬೊಮ್ಮಾಯಿ ಈ ಹಿಂದೆ ಶಂಕಿಸಿರುವ ರೀತಿಯಲ್ಲಿಯೇ ಭಯೋತ್ಪಾದಕರ ಸಂಘಟನೆ ನಡೆಯುತ್ತಿರುವ ಸಾಧ್ಯತೆಗಳು ಗೋಚರಿಸುತ್ತವೆ. ಈ ಉಗ್ರಗಾಮಿ ಚಟುವಟಿಕೆಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲದ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ರಾಜ್ಯ ಪೊಲೀಸರಿಂದ ಮಾತ್ರ ಇದನ್ನು ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ದೇಶ-ವಿದೇಶಗಳಲ್ಲಿ ಸಂಪರ್ಕ ಹೊಂದಿ ದುಷ್ಕೃತ್ಯ ಎಸಗುವ ಉಗ್ರರನ್ನು ಸದೆಬಡಿಯುವಲ್ಲಿ ಎನ್​ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು ಸಹ ಈ ನಿಟ್ಟಿನಲ್ಲಿ ನಿಗಾ ವಹಿಸಿ ಮಾಹಿತಿ ನೀಡುವುದು ಕೂಡ ಭಯೋತ್ಪಾದನೆ ಮಟ್ಟ ಹಾಕಲು ಮಹತ್ವದ ಕೊಡುಗೆ ನೀಡುತ್ತದೆ.