ಯೂಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದರಿಂದಾಗಿ, ಅಲ್ಲಿ ಶಿಕ್ಷಣಕ್ಕೆಂದು ತೆರಳಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಮೂಡಿರುವುದು ಸುಳ್ಳಲ್ಲ. ಅದರಲ್ಲೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಕೊಂಡು ವೈದ್ಯಕೀಯ ಪದವಿ ಓದಲು ಹೋಗಿದ್ದ ವಿದ್ಯಾರ್ಥಿಗಳು ಇನ್ನಷ್ಟು ಆತಂಕಕ್ಕೀಡಾಗಿದ್ದರೆ ಅದು ಸಹಜವೇ. ಇಂಥ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅವರಿಗೆ ನೆರವಿನಹಸ್ತ ಚಾಚಲು ಮುಂದಾಗಿರುವುದು ಶ್ಲಾಘನೀಯ. ಯುದ್ಧಪೀಡಿತ ಯೂಕ್ರೇನ್ನಿಂದ ಹಿಂದಿರುಗಿರುವ ರಾಜ್ಯದ 40 ವೈದ್ಯ ವಿದ್ಯಾರ್ಥಿಗಳ ಜತೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಮಾತುಕತೆ ನಡೆಸಿದರು. ರಾಜ್ಯದಲ್ಲೇ ಕಲಿಕೆ ಮುಂದುವರಿಸಲು ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿದ್ದು, ಯೂಕ್ರೇನ್ನಿಂದ ಬಂದವರು ಈ ಕಾಲೇಜುಗಳಲ್ಲಿ ವ್ಯಾಸಂಗವನ್ನು ಆಯಾ ವರ್ಷದಲ್ಲೇ ಮುಂದುವರಿಸಲು ಮತ್ತು ವೈದ್ಯ ಶಿಕ್ಷಣ ತರಬೇತಿ ಮುಂದುವರಿಕೆಗೆ ಸರ್ಕಾರ ಒಪ್ಪಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮತಿ ಬೇಕಾಗುತ್ತದೆ. ಈ ಕುರಿತು ವ್ಯವಹರಿಸಲು ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಯೂಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸಲಹೆ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಬೇಡಿಕೆಗಳನ್ನು ಈ ಸಮಿತಿ ಸಿದ್ಧಪಡಿಸಲಿದೆ.
ಯೂಕ್ರೇನ್ನಲ್ಲಿದ್ದ 700 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಸದ್ಯಕ್ಕೆ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೆ ಅವರ ಕಲಿಕೆ, ತರಬೇತಿಯನ್ನು ಇಲ್ಲಿ ಮುಂದುವರಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಬೇಕಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಇದ್ದುದರಲ್ಲಿ ಸಮಾಧಾನದ ಸಂಗತಿ. ಇನ್ನು, ವೈದ್ಯಕೀಯ ಶಿಕ್ಷಣದಲ್ಲಿ ಮಾರ್ಪಾಡು ತರುವ ಬಗ್ಗೆಯೂ ವಿದ್ಯಾರ್ಥಿಗಳು ಸಲಹೆ ನೀಡಿದ್ದು, ಈ ಬಗ್ಗೆಯೂ ಸಮಿತಿ ರ್ಚಚಿಸಲಿದೆ. ‘ಯೂಕ್ರೇನಿನಲ್ಲಿ ಈಗ ಆನ್ಲೈನ್ ಕ್ಲಾಸ್ ಆರಂಭಿಸಿದ್ದಾರೆ. ಆದರೆ ಅದು ನಮಗೆ ಎಷ್ಟು ಅರ್ಥ ಆಗುತ್ತದೆ? ಆದಷ್ಟು ಇಲ್ಲೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಿ’ ಎಂಬ ವಿದ್ಯಾರ್ಥಿಗಳ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ವಾಗ್ದಾನವನ್ನು ಆದಷ್ಟು ಶೀಘ್ರ ಈಡೇರಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಕೆಲ ಖಾಸಗಿ ಸಂಸ್ಥೆಗಳು ಕೂಡ ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂದೆಬಂದಿರುವುದು ಉತ್ತಮ ನಡೆ. ಇದೇ ಸಂದರ್ಭದಲ್ಲಿ, ಭಾರತದಲ್ಲಿನ ವೈದ್ಯಕೀಯ ಶಿಕ್ಷಣದಲ್ಲಿ ಆಗಬೇಕಾದ ಬದಲಾವಣೆಗಳು ಹಾಗೂ ವೆಚ್ಚ ತಗ್ಗಿಸುವ ಕುರಿತಂತೆ ಜೋರುದನಿಯಲ್ಲಿ ಚರ್ಚೆ ನಡೆಯುತ್ತಿದೆ. ಯೂಕ್ರೇನ್ ಪರಿಸ್ಥಿತಿಯಿಂದ ಉದ್ಭವಿಸಿದ ಸನ್ನಿವೇಶಕ್ಕೆ ಸೀಮಿತವಾಗಿ ಈ ಚರ್ಚೆಯನ್ನು ನೋಡದೆ, ಒಟ್ಟಾರೆಯಾಗಿ ಭಾರತದ ವೈದ್ಯಕೀಯ ಶಿಕ್ಷಣವನ್ನು ವಿದ್ಯಾರ್ಥಿಸ್ನೇಹಿಯಾಗಿ ಮಾಡುವ ನಿಟ್ಟಿನಲ್ಲಿ ಒಂದಷ್ಟು ನಿರ್ಣಯಗಳು ಆಗಬೇಕಾದ್ದು ಅಪೇಕ್ಷಣೀಯ. ಸರ್ಕಾರಿ ಸೀಟು ಸಿಗದಿದ್ದರೆ ಬಡವರು, ಮಧ್ಯಮವರ್ಗದವರು ವೈದ್ಯ ಶಿಕ್ಷಣ ಪಡೆಯುವುದು ಬಹುತೇಕ ಅಸಾಧ್ಯ ಎಂಬ ಪರಿಸ್ಥಿತಿ ಇದೆ. ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಭರವಸೆಯೂ ಮುಖ್ಯಮಂತ್ರಿಗಳಿಂದ ಬಂದಿದೆ. ಶೈಕ್ಷಣಿಕ ಗುಣಮಟ್ಟದಲ್ಲಿ ರಾಜಿಯಾಗದೆ, ವ್ಯವಸ್ಥೆಯನ್ನು ಸುಧಾರಿಸುವುದು ಇಂದಿನ ತುರ್ತ.