ಪದವಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ನಡೆಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ, ಈ ಪ್ರಕ್ರಿಯೆಯ ಆರಂಭದಲ್ಲೇ ಕೆಲವು ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡು ಅರ್ಜಿ ಸಲ್ಲಿಸುವಲ್ಲಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ತಲೆದೋರಿದೆ. ದ್ವಿತೀಯ ಪಿಯು ಫಲಿತಾಂಶವು ಈ ಬಾರಿ ಸಾರ್ವಕಾಲಿಕ ದಾಖಲೆಯ ಶೇ. 61.88 ಆಗಿರುವುದರಿಂದ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆಯೂ ಹೆಚ್ಚು ಪ್ರಮಾಣದಲ್ಲಿ ಇರಲಿದೆ. ಹೀಗಾಗಿ, ತಮಗೆ ಬೇಕಾದ ಕೋರ್ಸ್ಗೆ ಪ್ರವೇಶ ದೊರೆಯುವುದೋ ಇಲ್ಲವೋ ಎಂಬ ಸಹಜ ಆತಂಕ ವಿದ್ಯಾರ್ಥಿಗಳಲ್ಲಿರುತ್ತದೆ. ಈ ನಡುವೆಯೇ ಆನ್ಲೈನ್ ಮೂಲಕವೇ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕೆಂಬ ಹೊಸ ನಿಯಮ ರೂಪಿಸಿರುವುದು ಹಾಗೂ ಇದಕ್ಕಾಗಿ ಸಜ್ಜುಗೊಳಿಸಿರುವ ವೆಬ್ಸೈಟ್ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದಿರುವುದು ವಿದ್ಯಾರ್ಥಿಗಳ ಆಂತಕವನ್ನು ಹೆಚ್ಚಿಸಿದೆ.
ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಮಗ್ರ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸುವ ವ್ಯವಸ್ಥೆ ರೂಪಿಸಲಾಗಿದೆ. ಆದರೆ, ಈ ಆನ್ಲೈನ್ ವೇದಿಕೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿಲ್ಲ ಎಂಬುದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಈ ತಂತ್ರಾಂಶದಲ್ಲಿ ಸಾಮಾನ್ಯ ಮಾಹಿತಿ ಭರ್ತಿ ಮಾಡಿದ ನಂತರ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಆಯ್ಕೆಗಳೇ ಸಿಗುತ್ತಿಲ್ಲ. ತಂತ್ರಾಂಶದಲ್ಲಿ ಕಾಲೇಜುಗಳು ಸರಿಯಾಗಿ ಮ್ಯಾಪಿಂಗ್ ಆಗದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಕೋವಿಡ್ ಸೋಂಕು ಮಹಾಮಾರಿ ಎರಡು ವರ್ಷಗಳ ಕಾಲ ವಿದ್ಯಾರ್ಥಿಗಳನ್ನು, ಶಿಕ್ಷಣ ಕ್ಷೇತ್ರವನ್ನು ಬಾಧಿಸಿದೆ. ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹಿನ್ನಡೆ ಉಂಟಾಗಿದೆ. ಈ ನಡುವೆಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಾಲೆಗಳ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಲೆದೋರಿದ್ದು, ಈ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದಲ್ಲಿ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ.
ಶೈಕ್ಷಣಿಕ ರಂಗದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ಇರುವ ರಾಜ್ಯ ಎಂಬ ಹೆಮ್ಮೆ ನಮ್ಮದು. ದೇಶದಾದ್ಯಂತ ನೂತನ ರಾಷ್ಟ್ರಿಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಈ ನೀತಿ ಅಳವಡಿಸಿಕೊಂಡ ಪ್ರಥಮ ರಾಜ್ಯ ಎಂಬ ಶ್ರೇಯ ಕೂಡ ಕರ್ನಾಟಕಕ್ಕೆ ಸಲ್ಲುತ್ತದೆ. ಮಾಹಿತಿ ತಂತ್ರಜ್ಞಾನ ನಗರಿ ಎಂಬ ಗರಿ ಬೆಂಗಳೂರಿಗೆ ಇದೆ. ಇದಕ್ಕೆ ತಕ್ಕ ಹಾಗೆ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ರಾಜ್ಯದಲ್ಲಿ 430 ಸರ್ಕಾರಿ ಹಾಗೂ ಖಾಸಗಿ 375 ಅನುದಾನಿತ ಪದವಿ ಕಾಲೇಜುಗಳಿವೆ. ಪದವಿ ಕೋರ್ಸ್ ಪ್ರವೇಶ ಪ್ರಕ್ರಿಯೆಯನ್ನು ಆನ್ಲೈನ್ಗೆ ಮಾರ್ಪಡಿಸುವ ಸಂದರ್ಭದಲ್ಲಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಾದುದು ಸಂಬಂಧಪಟ್ಟವರ ಜವಾಬ್ದಾರಿ. ವೆಬ್ಸೈಟ್ ಸಿದ್ಧಗೊಂಡ ನಂತರ ಪ್ರಾಯೋಗಿಕವಾಗಿ ಪರಿಶೀಲಿಸುವ ಮೂಲಕ ದೋಷಗಳನ್ನು ಸರಿಪಡಿಸಿದ ನಂತರವೇ ಸಾರ್ವಜನಿಕ ಬಳಕೆಗೆ ನೀಡಬೇಕಾಗುತ್ತದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತ್ವರಿತವಾಗಿ ಕ್ರಮ ಕೈಗೊಂಡು, ಪದವಿ ಕೋರ್ಸ್ಗಳಿಗೆ ಪ್ರವೇಶ ಬಯಸುತ್ತಿರುವ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಪರದಾಟವನ್ನು ತಪ್ಪಿಸಬೇಕಿದೆ.