ನ್ಯೂಸ್

ದೇಶದ ಭದ್ರತೆಗೆ ಆತಂಕಕಾರಿ; ಲೋನ್ ಆ್ಯಪ್​ ಮೂಲಕ ಚೀನಿ ವಂಚಕರ ಜಾಲ

Webdesk - Ravikanth

ಲೋನ್ ಆಪ್​ಗಳ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಭಾರತದಲ್ಲಿ ಇಂತಹ ವಂಚನಾ ಜಾಲಗಳನ್ನು ಹರಡುವಲ್ಲಿ ಚೀನಾ ಪ್ರಜೆಗಳ ಕೈವಾಡವಿರುವುದು ಹಾಗೂ ನೂರಾರು ಕೋಟಿ ರೂಪಾಯಿಗಳಷ್ಟು ಹಣ ಅಕ್ರಮವಾಗಿ ಆ ದೇಶಕ್ಕೆ ರವಾನೆಯಾಗುತ್ತಿರುವುದು ದೇಶದ ಭದ್ರತೆ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಚೀನಾದ ಸಂಪರ್ಕ ಹೊಂದಿರುವ ನೂರಕ್ಕೂ ಅಧಿಕ ಇನ್​ಸ್ಟಂಟ್ ಲೋನ್ ಆಪ್​ಗಳನ್ನು ಪತ್ತೆ ಮಾಡಿದೆ. ಈ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳಲ್ಲಿ ವಿವಿಧ ರಾಜ್ಯಗಳ 22 ಜನರನ್ನು ಬಂಧಿಸಿದ್ದು, 550 ಕೋಟಿ ರೂಪಾಯಿಗಳನ್ನು ಹವಾಲಾ ಇಲ್ಲವೇ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮೂಲಕ ಚೀನಾಗೆ ರವಾನೆ ಮಾಡಿರುವುದನ್ನು ಗುರುತಿಸಿದೆ. ಈ ಜಾಲವು ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಗೆ ವಿಸ್ತರಿಸಿದೆ ಎಂದು ದೆಹಲಿ ಪೊಲೀಸರು ಹೇಳಿರುವುದು ವಿಷಯದ ಗಂಭೀರತೆಗೆ ಸಾಕ್ಷಿ.

ಮನಿ ಲೋನ್ ಆಪ್​ಗಳು ಲಕ್ಷಾಂತರ ರೂಪಾಯಿ ಸಾಲವನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನೀಡುವುದಾಗಿ ಆಮಿಷವೊಡ್ಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ನಂತರ ಹೆಚ್ಚಿನ ಬಡ್ಡಿ ದರ ವಿಧಿಸಿ, ಕಿರುಕುಳ ನೀಡಿ ಸುಲಿಗೆ ಮಾಡುತ್ತವೆ. ಈ ಕುರಿತು 2021ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅಧ್ಯಯನ ನಡೆಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಸಮಿತಿಯೊಂದು ಸಾಲ ನೀಡುವ 600 ಅಕ್ರಮ ಆಪ್​ಗಳನ್ನು ಪತ್ತೆ ಮಾಡಿತ್ತು. ಡಿಜಿಟಲ್ ಸಾಲ ಒದಗಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದೂ ಗುರುತಿಸಿತ್ತು. ಇಂತಹ ಆಪ್​ಗಳ ಮೇಲೆ ಕಣ್ಗಾವಲು ಇಡಬೇಕೆಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದುಹಾಕಿದ್ದರೂ ಇವುಗಳ ಹಾವಳಿ ಮುಂದುವರಿದಿದೆ.

ಇಂತಹ ಆಪ್​ಗಳಲ್ಲಿ ಸಾಲ ಪಡೆಯುವುದು ಅಪಾಯಕಾರಿ ಎಂದು ಅರಿತಿದ್ದರೂ ಅನಿವಾರ್ಯ ಸಂದರ್ಭಗಳಲ್ಲಿ, ಒತ್ತಡದ ಪರಿಸ್ಥಿತಿಗಳಲ್ಲಿ ಸಾಲ ಪಡೆದುಕೊಂಡು ಮೋಸದ ಜಾಲಕ್ಕೆ ಜನರು ಸಿಲುಕುತ್ತಿದ್ದಾರೆ. ಲೋನ್ ಆಪ್ ಡೌನ್​ಲೋಡ್ ಮಾಡಿಕೊಂಡಾಗ ಮೊಬೈಲ್​ಫೋನ್​ನಲ್ಲಿನ ಎಲ್ಲ ಮಾಹಿತಿಗೂ ಕನ್ನ ಹಾಕಲಾಗುತ್ತದೆ. ಹೆಚ್ಚಿನ ಬಡ್ಡಿ ಹಾಗೂ ಇಎಂಐ ಪಾವತಿಸದವರಿಗೆ ಬ್ಲಾ್ಯಕ್​ವೆುೕಲ್ ಮಾಡಿ ಕಿರುಕುಳ ನೀಡಲಾಗುತ್ತದೆ. ಚೀನಾ ವಂಚಕರು ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವುದನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ. ಗ್ರಾಹಕರ ಮೊಬೈಲ್​ನಿಂದ ಕದ್ದ ದತ್ತಾಂಶ ಮತ್ತು ಮಾಹಿತಿಗಳನ್ನು ಕೂಡ ಈ ವಂಚಕರು ಮಾರಿಕೊಂಡಿದ್ದಾರೆ. ಈ ವಂಚನೆ ಜಾಲವು ದೇಶದ ಆರ್ಥಿಕತೆಗೆ ಹೊಡೆತ ನೀಡುವುದಲ್ಲದೆ, ಭದ್ರತೆಗೆ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು. ಭಾರತೀಯರನ್ನು ವಂಚಿಸಲು ಭಾರತೀಯರನ್ನೇ ದಾಳವಾಗಿ ಬಳಸಿಕೊಂಡಿರುವುದು, ಗ್ರಾಹಕರ ಮೊಬೈಲ್​ನಿಂದ ಕದ್ದ ಮಾಹಿತಿಯನ್ನು ಮಾರಾಟ ಮಾಡಿರುವುದು, ಹವಾಲಾ- ಕ್ರಿಪ್ಟೊ ಕರೆನ್ಸಿ ಮೂಲಕ ಹಣ ರವಾನೆ ಮಾಡಿರುವುದು ಆತಂಕಕಾರಿ ಸಂಗತಿಗಳಾಗಿವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಸೈಬರ್ ಅಪರಾಧ ನಿಯಂತ್ರಣ ಘಟಕಗಳನ್ನು ಸಶಕ್ತಗೊಳಿಸಬೇಕು. ಹಾಗೇ ಜನರು ಕೂಡ ಹೆಚ್ಚೆಚ್ಚು ಜಾಗೃತರಾಗಬೇಕು.