ನ್ಯೂಸ್

ಸಂಪಾದಕೀಯ | ಎಚ್ಚರ ಅಗತ್ಯ: ವಿದೇಶಗಳಲ್ಲಿ ಉತ್ತಮ ಉದ್ಯೋಗದ ಭರವಸೆ..

Webdesk - Ravikanth

ಈಚಿನ ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆ ವ್ಯಾಪಕ ಪ್ರಮಾಣದಲ್ಲಿ ತೆರೆದುಕೊಂಡಿದೆ. ಅದರಲ್ಲೂ ಹಿಂದೆ ಕೇಳಿಯೇ ಇರದ ಹೊಸ ಹೊಸ ಬಗೆಯ ಕೆಲಸಗಳು ಸಹ ಈಗ ಸೃಷ್ಟಿಯಾಗಿವೆ. ಇದರಿಂದ ಸಹಜವಾಗಿಯೇ ಆಕಾಂಕ್ಷಿಗಳಿಗೆ ವಿಪುಲ ಅವಕಾಶಗಳು ಲಭ್ಯವಾಗುತ್ತಿವೆ. ದೇಶ ಮಾತ್ರವಲ್ಲ ವಿದೇಶಗಳಲ್ಲೂ ಕೆಲಸ ಗಿಟ್ಟಿಸಿಕೊಳ್ಳಲು ದಾರಿ ಪ್ರಶಸ್ತವಾಗಿದೆ. ಇದರಿಂದಾಗಿ ಸಾಮಾಜಿಕ, ಆರ್ಥಿಕ ಬದಲಾವಣೆಗಳೂ ಕಂಡುಬರುತ್ತಿವೆ. ಭಾರತದ ಪ್ರತಿಭೆಗಳಿಗಂತೂ ವಿದೇಶಗಳಲ್ಲಿ ಬೇಡಿಕೆಯಿರುವುದು ಗೊತ್ತಿರುವಂಥದೇ. ಆದರೆ ಈ ಅವಕಾಶದ ಬಾಗಿಲು ಅನೇಕ ಸಮಸ್ಯೆಗಳನ್ನೂ ಸೃಷ್ಟಿಸುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.

ತಮಿಳುನಾಡಿನ 60 ಮಂದಿಯೂ ಸೇರಿ ಭಾರತದ ಸುಮಾರು 300 ಜನರನ್ನು ಮ್ಯಾನ್ಮಾರ್​ನ ಮಯಾವಾಡಿಯಲ್ಲಿ ಒತ್ತೆಯಾಗಿ ಇರಿಸಿಕೊಂಡಿರುವ ಗ್ಯಾಂಗ್ ಒಂದು, ಸೈಬರ್ ಅಪರಾಧಗಳನ್ನು ಮಾಡುವಂತೆ ಇವರ ಮೇಲೆ ಒತ್ತಡ ಹೇರುತ್ತಿದ್ದು, ಇದಕ್ಕೆ ಒಪ್ಪದಿದ್ದಲ್ಲಿ ಹಿಂಸೆ ನೀಡಲಾಗುತ್ತಿದೆ ಎಂಬ ಸಂಗತಿ ಈಗ ಬಹಿರಂಗವಾಗಿದೆ. ಹೀಗೆ ಒತ್ತೆಯಾಗಿರುವವರಲ್ಲಿ ಇತರ ಕೆಲ ದೇಶಗಳವರೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರದೇಶ ನೇರವಾಗಿ ಮ್ಯಾನ್ಮಾರ್ ಆಡಳಿತದ ವ್ಯಾಪ್ತಿಯಲ್ಲಿ ಬರುತ್ತಿಲ್ಲ; ಬದಲಾಗಿ ಜನಾಂಗೀಯ ಸಶಸ್ತ್ರ ಗುಂಪುಗಳ ಹಿಡಿತದಲ್ಲಿದೆ. ಅಲ್ಲಿ ಸಿಕ್ಕಿಬಿದ್ದವರು ಕಳಿಸಿದ ವಿಡಿಯೋಗಳಿಂದಾಗಿ ವಿಷಯ ಬಯಲಾಗಿದೆ. ಥೈಲ್ಯಾಂಡಿನಲ್ಲಿ ಐಟಿ ಹುದ್ದೆ ಹಾಗೂ ಉತ್ತಮ ಸಂಬಳದ ಆಸೆಆಮಿಷವನ್ನು ಇವರಿಗೆ ಒಡ್ಡಲಾಗಿತ್ತು. ಆದರೆ ನಂತರದಲ್ಲಿ ಮ್ಯಾನ್ಮಾರಿಗೆ ಕರೆದೊಯ್ದು ಅಕ್ರಮ ಕೆಲಸ ಮಾಡುವಂತೆ ಪೀಡಿಸಲಾಗುತ್ತಿದೆ. ಇದಕ್ಕೆ ಒಪ್ಪದಿದ್ದಲ್ಲಿ ಹೊಡೆಯುವುದು ಹಾಗೂ ಎಲೆಕ್ಟ್ರಿಕ್ ಶಾಕ್ ನೀಡುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅಲ್ಲಿದ್ದವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಹೊರದೇಶಗಳಲ್ಲಿರುವವರು ಅಲ್ಲಿ ತಾವು ಎದುರಿಸುತ್ತಿರುವ ಕಿರುಕುಳಗಳ ಬಗ್ಗೆ ಆಗೀಗ ವಿಡಿಯೋ ಸಂದೇಶ ಹರಿಬಿಡುವುದಿದೆ. ಬಹುತೇಕವಾಗಿ ಇಂಥ ಪ್ರಕರಣಗಳಲ್ಲಿ ಸಂತ್ರಸ್ತರ ಪಾಸ್​ಪೋರ್ಟ್ ಮತ್ತಿತರ ದಾಖಲೆಗಳನ್ನು ಉದ್ಯೋಗದಾತರು ಅಥವಾ ಮಧ್ಯವರ್ತಿಗಳು ತಾವು ತೆಗೆದುಕೊಂಡಿರುತ್ತಾರೆ. ಹೀಗಾಗಿ ಇವರು ಒಂದುರೀತಿಯಲ್ಲಿ ಅಸಹಾಯಕರಾಗಿರುತ್ತಾರೆ.

ಉದ್ಯೋಗ ಮಾರುಕಟ್ಟೆ ವಿಸ್ತರಣೆ ಹಿನ್ನೆಲೆಯಲ್ಲಿ, ಆನ್​ಲೈನ್ ಮೂಲಕ ನೇಮಕಾತಿ ಮಾಡುವ ಹಾಗೂ ಮಧ್ಯವರ್ತಿಗಳಾಗಿ ಕೆಲಸಮಾಡುವ ಸಂಸ್ಥೆಗಳ ಜಾಲವೂ ವ್ಯಾಪಕವಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದರಿಂದ ಅನುಕೂಲವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೈಬೆರಳಿನಲ್ಲಿ ದೇಶವಿದೇಶಗಳ ಅವಕಾಶಗಳ ಪರಿಚಯವಾಗುತ್ತದೆ. ಇದೇ ಹೊತ್ತಿಗೆ, ಕೆಲಸಕ್ಕೆಂದು ವಿದೇಶಕ್ಕೆ ಹೋಗುವಾಗ ಆ ಸಂಸ್ಥೆಯ ಕುರಿತು ಹಾಗೂ ಉದ್ಯೋಗದ ಷರತ್ತುಗಳ ಕುರಿತು ಸರಿಯಾಗಿ ತಿಳಿದುಕೊಳ್ಳಬೇಕಾದುದು ಸಹ ಅಗತ್ಯ. ಹಾಗೇ, ಮಧ್ಯವರ್ತಿ ಸಂಸ್ಥೆಯ ವಿಶ್ವಾಸಾರ್ಹತೆ ಹಾಗೂ ಟ್ರಾ್ಯಕ್ ರೆಕಾರ್ಡ್ ಬಗ್ಗೆಯೂ ದೃಢಪಡಿಸಿಕೊಳ್ಳಬೇಕಾಗುತ್ತದೆ. ಜತೆಗೆ ನೇರವಾಗಿ ಕಂಪನಿಗೆ ಅರ್ಜಿ ಹಾಕುವುದಿದ್ದರೆ, ಆ ಕಂಪನಿಯ ಇಮೇಲ್, ವಿಳಾಸ ಇತ್ಯಾದಿ ಯನ್ನು ದೃಢೀಕರಿಸಿಕೊಳ್ಳಬೇಕು. ಹಾಗೇ, ಮುಂಚಿತವಾಗಿ ಹಣ ಪಾವತಿಸುವಾಗ ಪರಿಶೀಲಿಸಿಕೊಳ್ಳಬೇಕು. ತಾವು ನೇಮಕಾತಿ ಮಾಡಿಕೊಳ್ಳುವವರು, ಮಧ್ಯವರ್ತಿಗಳು ಅಥವಾ ವಿದೇಶಿ ಕಂಪನಿಗಳ ಪ್ರತಿನಿಧಿಗಳೆಂದು ಹೇಳಿಕೊಂಡು ವಂಚಿಸುವವರೂ ಇರುತ್ತಾರೆ. ವಿದೇಶಿ ಉದ್ಯೋಗದ ಆಕರ್ಷಣೆಯ ಭರದಲ್ಲಿ ಮೋಸದ ಜಾಲಕ್ಕೆ ಬೀಳದೆ, ಉದ್ಯೋಗಕ್ಕೆ ಹೋಗುವ ಮುನ್ನ ಹಾಗೂ ತರುವಾಯ ಎಚ್ಚರದಿಂದ ಇರುವುದು ಲೇಸು.