ನ್ಯೂಸ್

ಸಂಪಾದಕೀಯ| ಉದ್ಯೋಗದ ಉಡುಗೊರೆ; 10 ಲಕ್ಷ ನೇಮಕಾತಿ ಗುರಿ ದೀಪಾವಳಿಗೆ ಮೊದಲ ಹೆಜ್ಜೆ

Bengaluru - General - Rama Kishan K V

ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಶನಿವಾರದಂದು 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ‘ರೋಜ್ಗಾರ್ ಮೇಳ’ಕ್ಕೆ ಚಾಲನೆ ನೀಡುತ್ತಿರುವುದು ಭಾರತದ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ. ಈ ಮೇಳದಲ್ಲಿ ಮೊದಲ ಹಂತದಲ್ಲಿ 75 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡುತ್ತಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಉದ್ಯೋಗದ ಉಡುಗೊರೆ ಎನ್ನಬಹುದಾಗಿದೆ.

2022ರ ಜೂನ್ 14ರಂದು ಟ್ವೀಟ್ ಮಾಡಿದ್ದ ಪ್ರಧಾನಿಯವರು, ‘ಮುಂದಿನ ಒಂದೂವರೆ ವರ್ಷಗಳಲ್ಲಿ ಅಂದರೆ 2023 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರವು ತನ್ನ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ 10 ಲಕ್ಷ ಜನರನ್ನು ನೇಮಿಸಿಕೊಳ್ಳಲಿದೆ’ ಎಂದು ನೀಡಿದ ಭರವಸೆ ಈಡೇರಿಸಲು ಆರಂಭಿಕ ಕ್ರಮ ಕೈಗೊಂಡಿದ್ದಾರೆ. ಈಗ ನೇಮಕಗೊಳ್ಳುತ್ತಿರುವ 75 ಸಾವಿರ ಅಭ್ಯರ್ಥಿಗಳು ಸರ್ಕಾರದ 38 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಮತ್ತು ಗ್ರೂಪ್ ಸಿ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಸಶಸ್ತ್ರ ಪಡೆಗಳ ಹುದ್ದೆಗಳು ಇದರಲ್ಲಿ ಸೇರಿವೆ. ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ದೀರ್ಘಕಾಲದ ಪ್ರಕ್ರಿಯೆಯೇ ಆಗಿರುತ್ತದೆ. ಆದರೆ, ಪ್ರಸ್ತುತ ಆಯ್ಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ, ತಂತ್ರಜ್ಞಾನದೊಂದಿಗೆ ಸಂಯೋಜಿಸಿರುವುದು ವಿಶೇಷವಾಗಿದೆ.

2024-25ರ ಹಣಕಾಸು ವರ್ಷದ ವೇಳೆ ಭಾರತವನ್ನು 5 ಟ್ರಿಲಿಯನ್ ಡಾಲರ್ (415 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯಾಗಿ ರೂಪಿಸುವ ಮಹತ್ವದ ಗುರಿಯನ್ನು ಪ್ರಧಾನಿಯವರು 2019ರಲ್ಲೇ ಘೋಷಿಸಿದ್ದರು. ಆದರೆ, ನಂತರ ಎರಡು ವರ್ಷಗಳ ಕಾಲ ಕೋವಿಡ್ ಸಾಂಕ್ರಾಮಿಕವು ಜಗತ್ತನ್ನು ಬಾಧಿಸಿದ್ದರಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು, ಆರ್ಥಿಕ ಹಿನ್ನಡೆ ಅನುಭವಿಸುವಂತಾಯಿತು. ಭಾರತದ ಆರ್ಥಿಕತೆ ಪ್ರಸ್ತುತ 3.4 ಟ್ರಿಲಿಯನ್ ಡಾಲರ್ (282 ಲಕ್ಷ ಕೋಟಿ ರೂಪಾಯಿ) ಇದ್ದು, 5 ಟ್ರಿಲಿಯನ್ ಡಾಲರ್​ಗೆ ತಲುಪಬೇಕಾದರೆ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆ ಮೂಲಕ ತಲಾದಾಯ ಹೆಚ್ಚಳವಾದರೆ ಮಾತ್ರ ಭಾರತದ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಹೆಚ್ಚಳವಾಗಿ ಉದ್ದೇಶಿತ ಗುರಿ ತಲುಪಲು ಸಾಧ್ಯ. ಇದನ್ನು ಅರಿತುಕೊಂಡೇ ಮೋದಿಯವರು ಉದ್ಯೋಗ ಸೃಷ್ಟಿಯತ್ತ ವಿಶೇಷ ಚಿತ್ತ ಹರಿಸಿದ್ದಾರೆ. ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲ ಸ್ಥಿತಿಗತಿ ಪರಿಶೀಲಿಸಿದ ನಂತರವೇ ನೇಮಕಾತಿಯ ಘೋಷಣೆ ಮಾಡಿರುವುದನ್ನು ಪ್ರಸ್ತುತ ತ್ವರಿತಗತಿಯ ನೇಮಕಾತಿ ಸ್ಪಷ್ಟವಾಗಿ ಸೂಚಿಸುತ್ತದೆ ಹಾಗೂ ಉಳಿದ 8.25 ಲಕ್ಷ ಉದ್ಯೋಗಗಳ ನೇಮಕಾತಿಯೂ ಆಗಲಿದೆ ಎಂಬ ಭರವಸೆಯೂ ಮೂಡುತ್ತದೆ.

ಇದೇ ವೇಳೆ ಇತ್ತ ರಾಜ್ಯ ಸಚಿವ ಸಂಪುಟವು, ಎಸ್​ಸಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಎಸ್​ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲು ಸಮ್ಮತಿ ಸೂಚಿಸಿದೆ. ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲು ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳ ಬಗೆಗೆ ಮುಂಜಾಗ್ರತೆ ವಹಿಸಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗಿದೆ.