ಕಳೆದ ಅನೇಕ ದಿನಗಳಿಂದ ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಮಳೆ ಸುರಿಯುತ್ತಿದೆ. ಇದರಿಂದ ಸಹಜವಾಗಿಯೇ ಕೃಷಿ ಚಟುವಟಿಕೆ ಹಾಗೂ ಜನಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮಗಳಾಗಿವೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಮಳೆನೀರಿನಿಂದ ಆಗಿರುವ ಸಮಸ್ಯೆ, ತೊಂದರೆಗಳು ಹೆಚ್ಚು ಸುದ್ದಿಯಾಗಿವೆ. ಎಷ್ಟೋ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಜನ ಜಾಗರಣೆ ಮಾಡುವಂತಾಗಿತ್ತು. ಇನ್ನು ರಸ್ತೆಗಳ ಕತೆ ಕೇಳುವುದೇ ಬೇಡ. ಸಮಸ್ಯೆ ತೀವ್ರತೆ ಎಷ್ಟಿದೆಯೆಂದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲಸದ ಒತ್ತಡಗಳ ನಡುವೆಯೂ ಸತತ ಮೂರನೇ ದಿನ ನಗರ ಪ್ರದಕ್ಷಿಣೆ ಮಾಡಿ, ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿದ್ದಾರೆ; ಅಧಿಕಾರಿಗಳಿಗೆ ಸಲಹೆಸೂಚನೆಗಳನ್ನು ನೀಡಿದ್ದಾರೆ.
ಇದಲ್ಲದೆ, ಪ್ರಮುಖ ಮಳೆನೀರು ಕಾಲುವೆಗಳ ಅಭಿವೃದ್ಧಿಗೆ 1,600 ಕೋಟಿ ರೂ. ಅನುದಾನದ ಭರವಸೆಯನ್ನೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರೆದುರು ಜನರು ಸಮಸ್ಯೆಗಳನ್ನು ಅನಾವರಣಗೊಳಿಸಿದ್ದಾರೆ; ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿಯಾಗಿರುವುದರಿಂದ, ಇಲ್ಲಿನ ಸಣ್ಣಪುಟ್ಟ ಬೆಳವಣಿಗೆಗಳು ಸಹ ದೊಡ್ಡ ಸುದ್ದಿಯಾಗುತ್ತವೆ; ಪ್ರಮುಖರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಹಿಂದೆ ಕಸದ ವಿಚಾರವಾಗಿ ಹೀಗಾಗಿತ್ತು. ಬೀದಿಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದ ಚಿತ್ರಗಳು ಜಾಗತಿಕ ಮಾಧ್ಯಮಗಳಲ್ಲಿ ಸಹ ಪ್ರಕಟವಾಗಿದ್ದವು. ಐಟಿಬಿಟಿ ಉದ್ಯಮ, ಕೈಗಾರಿಕೆಗಳು, ಬಹುಸಂಸ್ಕೃತಿ ನಗರ- ಇತ್ಯಾದಿ ಕಾರಣಗಳಿಂದಾಗಿ ಬೆಂಗಳೂರು ಜಾಗತಿಕ ವಲಯದಲ್ಲಿ ತನ್ನದೇ ಆದ ಇಮೇಜನ್ನು ಹೊಂದಿದೆ. ವಿದೇಶಗಳವರು ಕಾರ್ಯನಿಮಿತ್ತ ಇಲ್ಲಿಗೆ ಬರುತ್ತಿರುತ್ತಾರೆ. ಇದರ ಜತೆಗೆ ಇಲ್ಲಿನ ಹೇರಳ ಉದ್ಯೋಗಾವಕಾಶದ ದೆಸೆಯಿಂದಾಗಿ ದೇಶದ ವಿವಿಧ ರಾಜ್ಯಗಳ ಜನರು ಸಹ ಬದುಕನ್ನರಸಿಕೊಂಡು ಇಲ್ಲಿಗೆ ಬರುತ್ತಾರೆ.
ಹೀಗಾಗಿ ಬೆಂಗಳೂರಿನ ಹೆಗ್ಗಳಿಕೆಯನ್ನು ಕಾಪಾಡಿಕೊಂಡು ಹೋಗುವುದು ಅಗತ್ಯ. ಇಲ್ಲವಾದಲ್ಲಿ ಬೆಂಗಳೂರಿನ ಹೆಸರಿಗೆ ಕುಂದು ಬರುವುದರ ಜತೆಗೆ, ಹೂಡಿಕೆಯಂತಹ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಆಗುತ್ತದೆ. ಹಾಗೆ ಆದಲ್ಲಿ ಉದ್ಯೋಗಾವಕಾಶದ ಸೃಷ್ಟಿ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಇದೊಂದು ಪರಸ್ಪರ ಸಂಬಂಧವಿರುವ ಚಕ್ರ ಇದ್ದ ಹಾಗೆ. ಒಂದು ಕಡೆ ಏರುಪೇರಾದಲ್ಲಿ ಒಟ್ಟಾರೆ ಪರಿಸ್ಥಿತಿ ಮೇಲೆ ಪರಿಣಾಮವಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಇತರ ಅನೇಕ ಗಣ್ಯರು ಬೆಂಗಳೂರಿನ ಹೆಸರನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಹಾಗೂ ಸವಲತ್ತು ದೃಷ್ಟಿಯಿಂದ ಅನೇಕ ಸಲಹೆಗಳನ್ನು ನೀಡಿದ್ದಾರೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಗಮನಹರಿಸಬೇಕು. ಬೆಂಗಳೂರು ಮಾತ್ರವಲ್ಲ, ಇತರ ಅನೇಕ ನಗರಗಳು ಸಹ ಯೋಜಿತವಲ್ಲದ ರೀತಿಯಲ್ಲಿ ಬೆಳವಣಿಗೆ ಹೊಂದಿವೆ; ಹೊಂದುತ್ತಿವೆ. ಈ ಪ್ರವೃತ್ತಿ ಮುಂದುವರಿದಲ್ಲಿ ಮುಂದೆ ಸರಿಪಡಿಸಲಾಗದ ಹಂತ ತಲುಪುತ್ತದೆ. ಇನ್ನಾದರೂ ಯೋಜಿತರೀತಿಯ ನಗರಾಭಿವೃದ್ಧಿಯ ಬಗ್ಗೆ ಗಮನಹರಿಸಬೇಕು. ಇಲ್ಲಿ ಸರ್ಕಾರದ ಜತೆ ಜನರ ಪಾತ್ರವೂ ಇದೆಯೆಂಬುದನ್ನು ಮರೆಯುವಂತಿಲ್ಲ.