ನೂತನ ವರ್ಷದ ಮೊದಲ ದಿನದಂದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜರುಗಿದ ವಾಹನ ಅಪಘಾತ ಪ್ರಕರಣದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದಳು. ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಆಕೆಗೆ ಕಾರೊಂದು ಡಿಕ್ಕಿ ಹೊಡೆದು ಆಕೆ ಕಾರಿನಡಿ ಸಿಲುಕಿದ್ದಳು. ಆದರೂ ಕಾರನ್ನು ನಿಲ್ಲಿಸದೆ 13 ಕಿ.ಮೀ.ವರೆಗೆ ಎಳೆದೊಯ್ದ ಸವಾರರು ಆಕೆಯ ಸಾವಿಗೆ ಕಾರಣವಾಗಿದ್ದರು. ದೆಹಲಿಯಲ್ಲಿಯೇ ಮತ್ತೊಂದು ಘಟನೆ ಕೆಲ ದಿನಗಳ ಹಿಂದೆ ಸಂಭವಿಸಿದ್ದು, ಅಪಘಾತ ಮಾಡಿದ ಚಾಲಕನನ್ನು ತಡೆಯಲು ಯತ್ನಿಸಿದ ವ್ಯಕಿಯನ್ನು ಅರ್ಧ ಕಿ.ಮೀ.ವರೆಗೆ ಕಾರಿನ ಮೂಲಕ ಎಳೆದೊಯ್ಯಲಾಗಿತ್ತು. ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತಹುದೇ ಪ್ರಕರಣ ನಡೆದಿರುವುದು ಮೊದಲೇ ಸಂಚಾರ ದಟ್ಟಣೆಯಿಂದ ಸಂಕಷ್ಟ ಅನುಭವಿಸುತ್ತಿರುವ ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಾಗಿದೆ. ಬಾನೆಟ್ನಲ್ಲಿ ವ್ಯಕ್ತಿಯೊಬ್ಬರು ನೇತಾಡುತ್ತಿದ್ದರೂ ಮಹಿಳೆಯು ಕಾರನ್ನು .ಒಂದು ಕಿ.ಮೀ.ವರೆಗೆ ಹಾಗೆಯೇ ಚಾಲನೆ ಮಾಡಿಕೊಂಡು ಹೋದ ಘಟನೆ ಜ್ಞಾನಭಾರತಿ ನಗರದಲ್ಲಿ ಶುಕ್ರವಾರ ಜರುಗಿರುವುದು ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವಂತಹುದಾಗಿದೆ. ಪರಸ್ಪರ ಕಾರುಗಳ ನಡುವಿನ ಡಿಕ್ಕಿಯಿಂದಾಗಿ ವಾಗ್ವಾದ ಉಂಟಾಗಿದ್ದು, ಮಹಿಳೆಯನ್ನು ವ್ಯಕ್ತಿ ತಡೆಯಲು ಮುಂದಾದಾಗ ಆಕೆ ಹೀಗೆ ಮಾಡಿದ್ದಾಳೆ.
ಸಂಚಾರ ವಿಳಂಬ, ದಟ್ಟಣೆಯ ಟ್ರಾಫಿಕ್, ಸಿಗ್ನಲ್ಗಳಲ್ಲಿ ಕಾಯುವಿಕೆ, ರ್ಪಾಂಗ್ ಸ್ಥಳ ಹುಡುಕಾಟ, ಕಾನೂನು ಕಡೆಗಣನೆ, ದುರಭ್ಯಾಸ, ಸಮಯ ಪಾಲನೆ ಕೊರತೆ ಮುಂತಾದವುಗಳು ವಾಹನ ಚಾಲಕರ ಕೋಪದ ಮಟ್ಟವನ್ನು ಹೆಚ್ಚಿಸುವ ಸಂಗತಿಗಳಾಗಿವೆ. ಇಂತಹ ಕೋಪದಲ್ಲಿ ಗಡಿಬಿಡಿಯಿಂದ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಚೀನಾದ ನಂತರ ಅತಿಹೆಚ್ಚು ವಾಹನಗಳು ತಯಾರಾಗುವುದು ಭಾರತದಲ್ಲಿಯೇ. 2022ನೇ ಸಾಲಿನಲ್ಲಿ ಭಾರತದಲ್ಲಿ ಹೊಸ ವಾಹನಗಳ ಮಾರಾಟವು 42.5 ಲಕ್ಷ ದಾಟಿದೆ. ಆದರೆ, ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಸಮನಾಗಿ ಸಂಚಾರ ಮೂಲಸೌಕರ್ಯಗಳು ಅಭಿವೃದ್ಧಿ ಆಗದಿರುವುದರಿಂದ ಪಟ್ಟಣ, ನಗರ, ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ರ್ಪಾಂಗ್ ಸೌಲಭ್ಯದ ಕೊರತೆಯೂ ಅಗಾಧವಾಗಿದೆ. ಈ ಎಲ್ಲ ಅಡಚಣೆಗಳು ವಾಹನ ಚಾಲಕರ ತಾಳ್ಮೆಯನ್ನು ಪರೀಕ್ಷಿಸುವಂತಿವೆ.
ಇನ್ನೊಂದೆಡೆ, ರಸ್ತೆ ಅಪಘಾತಗಳಲ್ಲಿ ಜಾಗತಿಕವಾಗಿ ಭಾರತವೇ ಮುಂಚೂಣಿಯಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳು ಉಂಟಾಗಿದ್ದು, 7 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಅತಿ ವೇಗ ರಸ್ತೆ ಅಪಘಾತಗಳ ಹಿಂದಿನ ಮುಖ್ಯ ಕಾರಣವಾಗಿದ್ದು, ಇದರಿಂದಾಗಿ ಶೇ. 55 ಸಾವುಗಳು ಸಂಭವಿಸುತ್ತಿವೆ. ಸುಗಮ ಸಂಚಾರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯವಾಗಿದ್ದರೂ ವಾಹನ ಚಲಾಯಿಸುವ ಸವಾರರು ಸಂಚಾರ ನಿಯಮ ಪಾಲನೆ ಮಾಡುವ ಜತೆಗೆ, ತಾಳ್ಮೆಯಿಂದ ವಾಹನ ಓಡಿಸುವುದು ಸಹ ಮುಖ್ಯವಾಗಿದೆ. ಅಪಘಾತವಾದಾಗ ರಸ್ತೆಯಲ್ಲಿಯೇ ಪರಸ್ಪರ ವಾಗ್ವಾದ, ಕೈಮಿಲಾಯಿಸುವಿಕೆ ಪ್ರಕರಣ ಹೆಚ್ಚುತ್ತಿದೆ. ಇದು ವಿಕೋಪಕ್ಕೆ ಹೋದ ಉದಾಹರಣೆಗಳೂ ಇವೆ. ವಾಹನ ಚಾಲನೆಯಲ್ಲಿ ತಪು್ಪಗಳಾದಲ್ಲಿ ಹಲವರಿಗೆ ತೊಂದರೆ ಎಂಬ ಎಚ್ಚರ ಚಾಲಕರಿಗಿರಬೇಕು.