ನ್ಯೂಸ್

ಸಕಾಲಿಕ ಕ್ರಮ; ಅಪ್ರಸ್ತುತ ಹಳೆಯ ಕಾನೂನುಗಳ ರದ್ದತಿ

Webdesk - Ravikanth

ನಿರುಪಯೋಗಿ ಹಾಗೂ ಬಳಕೆಯಾಗದ ಕೆಲ ಹಳೆಯ ಕಾನೂನುಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸಕಾಲಿಕ ಕ್ರಮವೇ ಆಗಿದೆ. ಅಪ್ರಸ್ತುತವಾಗಿರುವ 60ಕ್ಕೂ ಅಧಿಕ ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸರ್ಕರ ಸಂಸತ್ತಿನಲ್ಲಿ ಮಂಡಿಸಿದೆ. ಮಂಡಿಸುವ ಮೂಲಕ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಕೆಲವು ಕಾನೂನುಗಳಿಗೆ ಕಾಲಮಿತಿ ನಿಗದಿಪಡಿಸಲಾಗಿರುತ್ತದೆ. ನಿಗದಿತ ಸಮಯ ಮುಗಿದ ತಕ್ಷಣ ಆ ಕಾನೂನುಗಳು ತನ್ನಿಂದತಾನೇ ರದ್ದುಗೊಳ್ಳುತ್ತವೆ. 1987ರಲ್ಲಿ ಜಾರಿಗೊಳಿಸಲಾಗಿದ್ದ ಟಾಡಾ (ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ತಡೆ ಕಾಯ್ದೆ) ಕಾಲಮಿತಿ ಹೊಂದಿದ್ದು 1995ರಲ್ಲಿ ರದ್ದುಗೊಂಡಿತು. ಆದರೆ, ಕಾಲಮಿತಿ ನಿಗದಿಪಡಿಸದಿರುವ ಕಾಯ್ದೆಗಳು ಅಪ್ರಸ್ತುತವಾದ ಸಂದರ್ಭದಲ್ಲಿ ಅವುಗಳನ್ನು ರದ್ದುಪಡಿಸುವುದು ಅವಶ್ಯಕ.

ಭಾರತದ ಸಂವಿಧಾನದ 245 ವಿಧಿಯು ಕಾನೂನು ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಿರುವ ರೀತಿಯಲ್ಲಿಯೇ ಕಾನೂನು ರದ್ದುಪಡಿಸುವ ಅಧಿಕಾರವನ್ನೂ ನೀಡುತ್ತದೆ. ಇಂತಹ ರದ್ದತಿ ಹಾಗೂ ತಿದ್ದುಪಡಿಯ ಅಧಿಕಾರವನ್ನು ಬಳಸಿಕೊಂಡು ಮೊದಲ ಬಾರಿಗೆ 1950ರಲ್ಲಿ 72 ಕಾಯ್ದೆಗಳನ್ನು ರದ್ದುಪಡಿಸಲಾಗಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಎನ್​ಡಿಎ ಸರ್ಕಾರವು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಪಡಿಸಲು ಹೆಚ್ಚಿನ ಒತ್ತು ನೀಡಿತು. 2019ರಲ್ಲಿ ಕೇಂದ್ರ ಸರ್ಕಾರವು 58 ಓಬೀರಾಯನ ಕಾಲದ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ಆದಾಯ ತೆರಿಗೆ ಕಾಯ್ದೆ 1961 ಮತ್ತು ದಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಆಕ್ಟ್ 2017 ಕ್ಕೆ ಅಲ್ಪ ಪ್ರಮಾಣದ ತಿದ್ದುಪಡಿಗಳನ್ನು ಮಾಡಲು ಕ್ರಮ ಕೈಗೊಂಡಿತ್ತು. 2014ರಿಂದ ಇದುವರೆಗೆ ಕೇಂದ್ರ ಸರ್ಕಾರವು 1468 ಕಾನೂನುಗಳನ್ನು ರದ್ದುಪಡಿಸಲು ಕ್ರಮ ಕೈಗೊಂಡಿದೆ. ಇದೇ ರೀತಿ ವಿವಿಧ ರಾಜ್ಯಗಳ ವಿಧಾನಸಭೆಗಳು ಕೂಡ ರಾಜ್ಯಪಟ್ಟಿಯಲ್ಲಿರುವ 76 ಕೇಂದ್ರೀಯ ಕಾಯ್ದೆಗಳನ್ನು ರದ್ದುಪಡಿಸಿವೆ. 2014ರ ನಂತರದಲ್ಲಿ ದಾಖಲೆ ಪ್ರಮಾಣದಲ್ಲಿ ಹಳೆಯ ಕಾನೂನುಗಳನ್ನು ರದ್ದುಪಡಿಸುವ ಪ್ರಕ್ರಿಯೆಗೆ ವಿರೋಧ ಪಕ್ಷಗಳ ಸದಸ್ಯರು ಕೂಡ ಆಡಳಿತ ಪಕ್ಷದ ಜತೆ ಕೈಜೋಡಿಸಿ ಕಾರ್ಯನಿರ್ವಹಿಸಿರುವುದು ಗಮನಾರ್ಹ.

ಈಗ ರದ್ದುಪಡಿಸಲು ಮಂಡಿಸಲಾಗಿರುವ ಕಾಯ್ದೆಗಳಲ್ಲಿ 137 ವರ್ಷಗಳಷ್ಟು ಹಳೆಯದಾದ ಭೂಸ್ವಾಧೀನ (ಗಣಿ) ಕಾಯ್ದೆ 1885 ಹಾಗೂ ಟೆಲಿಗ್ರಾಫ್ ತಂತಿಗಳು (ಕಾನೂನುಬಾಹಿರ ಸ್ವಾಧೀನ) ಕಾಯ್ದೆ 1950 ಕೂಡ ಸೇರಿವೆ. ಕಾನೂನುಬಾಹಿರವಾಗಿ ಟೆಲಿಗ್ರಾಫ್ ತಂತಿಗಳನ್ನು ಹೊಂದಿದವರಿಗೆ 5 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವು 1950ರ ಈ ಕಾಯ್ದೆಯಲ್ಲಿರುವುದು ಪ್ರಸ್ತುತ ದಿನಗಳಲ್ಲಿ ಆಭಾಸವಾಗಿ ಗೋಚರಿಸುತ್ತದೆ. ಕಾನೂನುಗಳ ಉದ್ದೇಶ ಜನರಿಗೆ ಅನುಕೂಲ ಮಾಡುವುದು. ಬಳಕೆಯಲ್ಲಿಲ್ಲದ ಹಾಗೂ ಅಪ್ರಸ್ತುತ ಕಾಯ್ದೆಗಳ ಮುಂದುವರಿಕೆಯು ಸರ್ಕಾರ ಹಾಗೂ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸುತ್ತವೆ; ಸುಸೂತ್ರ- ಸುಗಮ ಆಡಳಿತ ನಿರ್ವಹಿಸುವಲ್ಲಿ ಅನಗತ್ಯ ಅಡಚಣೆಯಾಗಿ ಉಳಿದುಕೊಳ್ಳುತ್ತವೆ. ಹೀಗಾಗಿಯೇ ಕಾಲಕಾಲಕ್ಕೆ ಕಾನೂನುಗಳಲ್ಲಿ ಅಗತ್ಯ ಬದಲಾವಣೆ ಹಾಗೂ ಅಪ್ರಸ್ತುತವಾಗಿದ್ದರೆ ರದ್ದುಪಡಿಸುವ ಪ್ರಕ್ರಿಯೆಯು ನಿರಂತರವಾಗಿ ಇತ್ತೀಚಿನ ದಿನಗಳಲ್ಲಿ ಮುಂದುವರಿದಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಅನಗತ್ಯ ಕಾನೂನುಗಳನ್ನು ರದ್ದು ಮಾಡುವುದರ ಇನ್ನೊಂದು ಅನುಕೂಲವೆಂದರೆ, ಶಾಸನ ಪುಸ್ತಕಗಳಲ್ಲಿ ಅವುಗಳ ಉಪಸ್ಥಿತಿಯ ಅಗತ್ಯ ಇಲ್ಲದಿರುವುದು. ಬದಲಾವಣೆ ಜಗದ ನಿಯಮವಾಗಿದ್ದು ಕಾನೂನು-ಕಾಯ್ದೆಗಳಿಗೂ ಇದು ಸಹಜವಾಗಿ ಅನ್ವಯಿಸುತ್ತದೆ.