ನ್ಯೂಸ್

ಸಂಪಾದಕೀಯ: ತರಾತುರಿಯ ನಿರ್ಧಾರ ಬೇಡ

kumarvrl

ದಿಗ್ಬಂಧನ ಸಡಿಲವಾಗಿದೆ. ಆರ್ಥಿಕ ಚಟುವಟಿಕೆಗಳು ಮತ್ತೆ ಜೀವ ಪಡೆಯುತ್ತಿವೆ. ಹೀಗಿರುವಾಗ ಹೊಸ ಶೈಕ್ಷಣಿಕ ವರ್ಷವನ್ನು ಆರಂಭ ಮಾಡುವ ಕುರಿತಂತೆ ರಾಜ್ಯದಲ್ಲಿ ತೀವ್ರ ಸ್ವರೂಪದ ಚರ್ಚೆ ನಡೆಯುತ್ತಿದೆ. ಜುಲೈ 1ರಿಂದ ಶಾಲೆಗಳನ್ನು ಪುನರಾರಂಭಿಸಬೇಕೆ ಎಂಬ ಬಗ್ಗೆ ಸರ್ಕಾರ ಪಾಲಕರ ಅಭಿಪ್ರಾಯ ಕ್ರೋಡೀಕರಿಸುತ್ತಿದ್ದು, ಶಿಕ್ಷಣ ತಜ್ಞರೊಂದಿಗೂ ಸಮಾಲೋಚಿಸುತ್ತಿದೆ. ಕೆಲ ಸೂಕ್ಷ್ಮ ಸಂಗತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಶಾಲೆಗಳಲ್ಲಿ ವೈಯಕ್ತಿಕ ಅಂತರ (ಸಾಮಾಜಿಕ ಅಂತರ) ಕಾಯ್ದುಕೊಳ್ಳುವುದು, ಇತರ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವುದು ತುಂಬ ಕಷ್ಟ. ಇಂಥ ಸಂದರ್ಭದಲ್ಲಿ ಶಾಲೆ ಆರಂಭವಾದರೂ ಮಕ್ಕಳು ಹೊಸಬಗೆಯ ಆತಂಕವನ್ನು ಅನುಭವಿಸುವುದರಿಂದ, ಶೈಕ್ಷಣಿಕ ಚಟುವಟಿಕೆಗಳಿಗೆ ಎಷ್ಟರ ಮಟ್ಟಿಗೆ ಪರಿಣಾಮ ಕಾರಿಯಾಗಿ ಸ್ಪಂದಿಸಬಲ್ಲರು ಎಂಬುದನ್ನು ಹೇಳಲಾಗದು. ತರಾತುರಿಯಲ್ಲಿ ಶಾಲೆ ಗಳನ್ನು ಆರಂಭ ಮಾಡುವುದಕ್ಕೆ ಬಹುತೇಕ ಪಾಲಕರು ವಿರೋಧ ತೋರಿದ್ದಾರೆ. ಅವರ ಆತಂಕಕ್ಕೂ ಸಕಾರಣವಿದೆ. ಅಕಸ್ಮಾತ್ ಒಂದಿಬ್ಬರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೂ, ಶಾಲೆ, ಸುತ್ತಮುತ್ತಲಿನ ಪ್ರದೇಶ ಸೀಲ್​ಡೌನ್ ಮಾಡಬೇಕಾಗುತ್ತದೆ, ಸಹಪಾಠಿಗಳನ್ನು ಕ್ವಾರಂಟೈನ್​ಗೆ ಒಳಪಡಿಸಬೇಕಾಗುತ್ತದೆ. ಹಾಗಾಗಿ, ಉಳಿದ ಚಟುವಟಿಕೆಗಳಂತೆಯೇ ಶಾಲೆಗಳ ಆರಂಭ ಎಂದು ಭಾವಿಸಬಾರದು. ಶಾಲೆಗಳು ಇಷ್ಟರಲ್ಲೇ ಆರಂಭಗೊಂಡು, ಸೋಂಕಿತರ ಸಂಖ್ಯೆ ಹೆಚ್ಚಿದಲ್ಲಿ ಸರ್ಕಾರ ಮತ್ತೊಂದು ಸಮಸ್ಯೆ ಎದುರಿಸಬೇಕಾಗುತ್ತದೆ.

ಈ ದಿಗ್ಬಂಧನದ ಅವಧಿಯಲ್ಲಿ ಬಹುತೇಕ ಶೈಕ್ಷಣಿಕ ಸಂಸ್ಥೆಗಳು ಆನ್​ಲೈನ್ ಬೋಧನೆಯತ್ತ ವಾಲಿವೆ. ಮಕ್ಕಳ ಕಲಿಕೆ ನಿಟ್ಟಿನಲ್ಲಿ ಪರಿಣಾಮಕಾರಿ ಸಾಧನವಾಗಿ ಬಳಕೆ ಆಗಬೇಕಿದ್ದ ಈ ವಿಧಾನ ಕ್ರಮೇಣ ದಂಧೆಯ ಸ್ವರೂಪ ತಳೆಯುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಸ್ಪಷ್ಟತೆಯ ಕೊರತೆಯೇ ಇಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ನಿಜಕ್ಕೂ ಯಾರಿಗೆಲ್ಲ ಆನ್​ಲೈನ್ ಶಿಕ್ಷಣದ ಅವಶ್ಯಕತೆ ಇದೆ? ಎಷ್ಟು ಅವಧಿ ನೀಡಬೇಕು? ಅದರ ಸ್ವರೂಪ, ಮಾನದಂಡಗಳೇನು? ಈ ಬಗ್ಗೆ ಸ್ಪಷ್ಟವಾದ ನೀತಿಯೇ ಇಲ್ಲ. ನಂಬಲು ಅಸಾಧ್ಯವಾದರೂ ನಿಜವೇ. ಎಷ್ಟೋ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಿಕ್ಷಣಕ್ಕೂ ಆನ್​ಲೈನ್ ಕಲಿಕೆ ಕಡ್ಡಾಯ ಮಾಡಿವೆ! ಮಕ್ಕಳನ್ನು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿಡಬೇಕು ಎಂದು ಹೇಳುತ್ತಿದ್ದ ಶಾಲೆಗಳೇ ಇಂದು ಸಣ್ಣ ಮಕ್ಕಳನ್ನು ಗಂಟೆಗಟ್ಟಲೇ ಆನ್​ಲೈನ್ ಕಲಿಕೆ ನೆಪದಲ್ಲಿ ಮೊಬೈಲ್ ಫೋನ್ ಮುಂದೆ ಕೂಡುವಂತೆ ಮಾಡಿವೆ. ಇದರ ಅಡ್ಡಪರಿಣಾಮಗಳ ಬಗ್ಗೆ ಯಾರಾದರೂ ಗಂಭೀರವಾಗಿ ಯೋಚಿಸಿದ್ದಾರೆಯೇ?

ನಿಮ್ಹಾನ್ಸ್ ಆಸ್ಪತ್ರೆಯ ತಂಡ ಈ ಬಗ್ಗೆ ವರದಿ ನೀಡಿದ್ದು, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಆನ್​ಲೈನ್ ಬೋಧನೆ ಅಗತ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ, ಶಿಕ್ಷಣ ಸಂಸ್ಥೆಗಳು ಪಟ್ಟು ಸಡಿಲಿಸುತ್ತಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಸ್ಪಷ್ಟವಾದ ನೀತಿಯನ್ನು ತಂದು ಶೈಕ್ಷಣಿಕ ಸಂಸ್ಥೆಗಳಿಗೆ ತಿಳಿಸಬೇಕು. ಕರೊನಾ ಸಂಕಷ್ಟದ ಹೊತ್ತಲ್ಲಿ ಪಾಲಕರೂ ತಲ್ಲಣ ಅನುಭವಿಸುತ್ತಿದ್ದು, ಇಂಥ ಸಂಗತಿಗಳು ಮತ್ತಷ್ಟು ಸಮಸ್ಯೆ ಸೃಷ್ಟಿಸಬಾರದು. ಪರಿಹಾರದ ದಾರಿಯನ್ನು ಕಂಡುಕೊಳ್ಳುವ ಜತೆಗೆ ವಿವೇಕಯುತ ತೀರ್ಮಾನ ಹೊರಬೀಳಲಿ.