ನ್ಯೂಸ್

ಸಂಪಾದಕೀಯ; ವಿಳಂಬ ಧೋರಣೆ ಬೇಡ

malli

ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಪ್ರಕರಣಗಳು ದಿನೇದಿನೆ ಬೆಳಕಿಗೆ ಬರುತ್ತಿವೆ. ಅಧಿಕಾರಿಗಳ ಮೇಲೆ, ಇಲ್ಲವೆ ರಾಜಕಾರಣಿಗಳ ಆಪ್ತರ ಮೇಲೆ ದಾಳಿಗಳಾದಾಗ ದೊಡ್ಡ ಸುದ್ದಿಯಾಗುವ ಇಂಥ ಪ್ರಕರಣಗಳು ಮುಂದೇನಾಗುತ್ತವೆ, ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಜನಸಾಮಾನ್ಯರಿಗೆ ಸಿಗುವುದು ವಿರಳವೇ. ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಪರ್ಯಾಯವೆಂಬಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಸ್ತಿತ್ವಕ್ಕೆ ಬಂದಿದೆಯೇನೋ ನಿಜ. ಎಸಿಬಿ ದಾಳಿಗಳನ್ನು ನಡೆಸುತ್ತಿದೆ, ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದೆ. ಮುಂದೇನು? ಈ ಬಗ್ಗೆ ‘ವಿಜಯವಾಣಿ’ ನಡೆಸಿರುವ ಅವಲೋಕನದಲ್ಲಿ ಹಲವು ಮಹತ್ವದ ಸಂಗತಿಗಳು ಅನಾವರಣಗೊಂಡಿದ್ದು, ದಾಳಿ ವೇಳೆ ಸಿಕ್ಕಿಬಿದ್ದ ಪ್ರಮುಖ ಪ್ರಕರಣಗಳನ್ನು ವಿಳಂಬಿಸಿ, ಸಣ್ಣಪುಟ್ಟ ಕೇಸ್​ಗಳಿಗೆ ಸೀಮಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿರುವುದು ಢಾಳಾಗಿ ಕಂಡುಬಂದಿದೆ.

ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ನಡೆದ -25.76 ಲಕ್ಷ ರೂಪಾಯಿ ಸಾಗಾಟ, 2 ಸಾವಿರ ರೂಪಾಯಿ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎನ್ನಲಾಗಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಹಗರಣ, ಅಕ್ರಮ ಆಸ್ತಿ ಪತ್ತೆ ಹೀಗೆ ಹತ್ತುಹಲವು ದೊಡ್ಡ ಪ್ರಕರಣಗಳಿಗೆ ಸಂಬಂಧಿಸಿ ಈವರೆಗೆ ಆರೋಪಪಟ್ಟಿ ದಾಖಲಾಗದಿರುವುದು ಅಚ್ಚರಿ ಮೂಡಿಸಿದೆ. ಪ್ರಭಾವಿಗಳನ್ನು ರಕ್ಷಿಸಲು, ರಾಜಕಾರಣಿಗಳ ಆಪ್ತರ ಹಿತ ಕಾಯಲು ಉದ್ದೇಶಪೂರ್ವಕ ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಜನಸಾಮಾನ್ಯರಿಂದಲೇ ಕೇಳಿಬರುತ್ತಿದೆ.

2016ರಲ್ಲಿ ಎಸಿಬಿ ಆರಂಭವಾದ ಬಳಿಕ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 1,023 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರು ಘಟಕದ ವ್ಯಾಪ್ತಿಯಲ್ಲಿ 38 ಮತ್ತು ಹೊರಗೆ 483 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಅಂದರೆ, ಸರಾಸರಿ ಶೇಕಡ 50 ಪ್ರಕರಣಗಳಿಗೆ ಸಂಬಂಧಿಸಿ ಇನ್ನೂ ಆರೋಪಪತ್ರವೇ ದಾಖಲಾಗಿಲ್ಲ. ಚಾರ್ಜ್​ಶೀಟ್ ದಾಖಲಾದ ಬಳಿಕ ಈ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕು. ಹಾಗಾದರೆ, ನ್ಯಾಯದ ನಿರೀಕ್ಷೆ ಇರಿಸಿಕೊಂಡವರ ಗತಿ ಏನು?

ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಷ್ಟೇ ಪ್ರಭಾವಿಗಳಿರಲಿ, ವರ್ಚಸ್ಸು ಹೊಂದಿದವರೇ ಆಗಿರಲಿ ತಪು್ಪ ಮಾಡಿದ್ದಲ್ಲಿ ತನಿಖೆ ಎದುರಿಸಲೇಬೇಕು. ಆದರೆ, ತನಿಖೆಯ ಆರಂಭಿಕ ಹಂತದಲ್ಲೇ ಇಂಥವರನ್ನು ರಕ್ಷಿಸುವ ಇಲ್ಲವೆ ಉದ್ದೇಶಪೂರ್ವಕ ವಿಳಂಬ ಧೋರಣೆ ತಳೆಯುವ ನೀತಿ ಸರಿಯಲ್ಲ. ‘ನಿಧಾನ ನ್ಯಾಯ’ ಎಂಬುದು ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ಮಾತಿದೆ. ಅಲ್ಲದೆ, ಭ್ರಷ್ಟಾಚಾರದ ಪ್ರಮಾಣ ಕಡಿಮೆ ಆಗಬೇಕಾದರೆ, ಲಂಚ ಸ್ವೀಕಾರ ತಪು್ಪ ಎಂಬುದು ಮನದಟ್ಟಾಗಬೇಕಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ.

ಯಾವುದೇ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಅಥವಾ ವಿಳಂಬ ತೋರಿದಲ್ಲಿ ಭ್ರಷ್ಟಮಾನಸಿಕತೆಗೆ ಅದೇ ವರವಾಗಿ ಪರಿಣಮಿಸುತ್ತದೆ. ಕೆಲವೊಂದು ಪ್ರಕರಣಗಳಲ್ಲಿ, ಸರ್ಕಾರದ ಅನುಮತಿ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಹಾಗೆಂದ ಮಾತ್ರಕ್ಕೆ, ಎಲ್ಲ ಪ್ರಕರಣಗಳಿಗೂ ಇದೇ ಕಾರಣವನ್ನು ಅನ್ವಯಿಸಲಾಗದು. ಇಷ್ಟೊಂದು ಪ್ರಕರಣಗಳು ನನೆಗುದಿಗೆ ಏಕೆ ಬಿದ್ದಿವೆ, ಆರೋಪಪತ್ರ ದಾಖಲಿಸಲು ವಿಳಂಬವಾಗುತ್ತಿರುವುದು ಏಕೆ? ಈ ಬಗ್ಗೆ ಎಸಿಬಿ ಸಮಗ್ರ ಅವಲೋಕನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿ. ಭ್ರಷ್ಟಾಚಾರದ ವಿರುದ್ಧ ಪ್ರಬಲ ಹೋರಾಟ ನಡೆಸುವ ಮೂಲಕ ಎಸಿಬಿ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಲಿ. ಇನ್ನಾದರೂ, ಮಂದಗತಿ ದೂರವಾಗಿ ತನಿಖೆಯ ಪ್ರಕ್ರಿಯೆಗಳು ವೇಗ ಪಡೆಯಲಿ.