ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸುಮಧುರ ಬಾಂಧವ್ಯ ಇರಬೇಕಾಗುತ್ತದೆ. ಹೀಗಿದ್ದರೂ ಆಡಳಿತಾತ್ಮಕವಾಗಿ, ನೀತಿನಿರೂಪಣೆಗಳ ವಿಷಯವಾಗಿ ತಂಟೆತಕರಾರು ಬರಲೇಬಾರದು ಎಂದೇನಿಲ್ಲ. ಒಂದೊಮ್ಮೆ ಅಂಥ ಅಭಿಪ್ರಾಯಭೇದ ಬಂದರೂ ಅದನ್ನು ಮಾತುಕತೆ ನೆಲೆಯಲ್ಲಿ ಪರಿಹರಿಸಿಕೊಳ್ಳುವ ಸಾಧ್ಯತೆಗಳ ಬಾಗಿಲು ಸದಾ ತೆರೆದೇ ಇರುತ್ತದೆ ಮತ್ತು ಇಂಥ ಸಂವಾದ ಪ್ರಜಾಪ್ರಭುತ್ವದ ಜೀವಾಳ ಸಹ ಹೌದು. ಅದೇ ರೀತಿ, ರಾಜ್ಯ-ರಾಜ್ಯಗಳ ನಡುವೆಯೂ ಉತ್ತಮ ಸಂಬಂಧ ಇರಬೇಕಾದುದು ಒಕ್ಕೂಟ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಅಗತ್ಯ. ಆದರೂ, ಇಲ್ಲಿಯೂ ಪರಸ್ಪರ ತಗಾದೆ, ವಿವಾದ ಬರಬಾರದು ಎಂದೇನಿಲ್ಲ. ಅದರಲ್ಲೂ ನದಿಗಳು ಹಾಗೂ ಗಡಿ ವಿಷಯದಲ್ಲಿ ರಾಜ್ಯ-ರಾಜ್ಯಗಳ ನಡುವೆ ವಿವಾದ ಇರುವುದು ಹೊಸದೇನಲ್ಲ. ಇಂಥ ಅನೇಕ ಪ್ರಕರಣಗಳು ಮಾತುಕತೆ-ಚರ್ಚೆಯ ಮೂಲಕ ಇತ್ಯರ್ಥ ಕಂಡಿದ್ದರೆ, ಇನ್ನು ಕೆಲವು ನ್ಯಾಯಾಲಯದ ಮೆಟ್ಟಿಲೇರಿವೆ.
ಪ್ರಜಾಪ್ರಭುತ್ವದಲ್ಲಿ ಇವೆಲ್ಲ ಸಹಜ ವಿದ್ಯಮಾನಗಳು. ಆದರೆ ಯಾವುದೂ ಅತಿರೇಕಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಎಲ್ಲರ ಮೇಲಿರುತ್ತದೆ. ಹಾಗೇ, ಜಲ-ನೆಲ-ಪರಿಸರದ ವಿಷಯ ಬಂದಾಗ ಆಯಾ ರಾಜ್ಯಗಳು ಸ್ವಲ್ಪ ಬಿಗಿಯಾಗಿ ವರ್ತಿಸುವುದೂ ಹೊಸದೇನಲ್ಲ. ಕರ್ನಾಟಕ ಸಹ ಇಂಥದೊಂದು ಸನ್ನಿವೇಶಕ್ಕೆ ಈಗ ಸಾಕ್ಷಿಯಾಗಿದೆ. ನೆರೆಯ ಕೇರಳ ಸರ್ಕಾರ ಪ್ರಸ್ತಾಪಿಸಿದ್ದ ಮೂರು ಯೋಜನೆಗಳಿಗೆ ಕರ್ನಾಟಕ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಇದಕ್ಕೆ ಮುಖ್ಯ ಕಾರಣ- ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬುದು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಭೇಟಿ ಸಂದರ್ಭದಲ್ಲಿ ಈ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಕಾಞಂಗಾಡ್-ಕಾಣಿಯೂರು ರೈಲು ಯೋಜನೆ, ತಲಚೇರಿ-ಮೈಸೂರು ರೈಲು ಯೋಜನೆ ಹಾಗೂ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿವೇಳೆ ಸಂಚರಿಸುವ ಬಸ್ಗಳ ಸಂಖ್ಯೆಯನ್ನು 2ರಿಂದ 4ಕ್ಕೆ ಏರಿಸುವ ಪ್ರಸ್ತಾವನೆಗಳನ್ನು ಕೇರಳ ಸಿಎಂ ಮುಂದಿಟ್ಟಿದ್ದರು. ಪರಿಸರ ಸೂಕ್ಷ್ಮ ವಲಯದಲ್ಲಿ ಇವು ಬರುವ ಕಾರಣ ಬೇಡಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಎರಡೂ ರಾಜ್ಯಗಳು ಒಪ್ಪಿ ಮುಂದೆಬಂದಲ್ಲಿ ಯೋಜನೆಗೆ ಸಮ್ಮತಿ ನೀಡುವ ಬಗ್ಗೆ ಕೇಂದ್ರ ಪರಿಶೀಲಿಸುವ ಕುರಿತು ಈಚೆಗೆ ತಿರುವನಂತಪುರದಲ್ಲಿ ನಡೆದ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಕೇರಳ ಈ ಪ್ರಸ್ತಾಪಗಳನ್ನು ಮುಂದಿಟ್ಟಿತ್ತು. ಕೇರಳದ ವಾದ ಏನೇ ಇದ್ದರೂ, ಈ ಯೋಜನೆಗಳಿಂದ ರಾಜ್ಯದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ನಿಚ್ಚಳ. ಹೀಗಾಗಿ ರಾಜ್ಯದ ನಿಲುವು ಸಮರ್ಪಕವಾಗಿದೆ ಎನ್ನಬಹುದು. ನಿಯಮದ ಪ್ರಕಾರ, ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ರಾಜ್ಯದಲ್ಲಿ ಈ ಪ್ರಮಾಣ ಶೇ.22ರಷ್ಟಿದೆ. ಈ ಹಿನ್ನೆಲೆಯಲ್ಲಿ ಪರಿಸರಕ್ಕೆ ತೊಂದರೆ ಉಂಟುಮಾಡುವ ಯೋಜನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಇದಲ್ಲದೆ, ಪಶ್ಚಿಮ ಘಟ್ಟ ಅಧಿಸೂಚನೆಗೆ ಸಂಬಂಧಿಸಿ, ಸ್ಥಳೀಯರು ಹಾಗೂ ಆಯಾ ಭಾಗದ ಜನಪ್ರತಿನಿಧಿಗಳ ವಿರೋಧ ಇರುವುದರಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಇಕ್ಕಟ್ಟಿನಲ್ಲಿದೆ. ಈ ಸನ್ನಿವೇಶದಲ್ಲಿ ಮತ್ತಷ್ಟು ಸಮಸ್ಯೆ ಮೈಮೇಲೆಳೆದುಕೊಳ್ಳಲಾಗದು.