ನ್ಯೂಸ್

ಮುತ್ಸದ್ದಿಯಾಗಲಿ ಮತದಾರ: ಚುನಾವಣೆ ಕಣದಲ್ಲಿ ಕುಣಿಯದಿರಲಿ ಕಾಂಚಾಣ

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮುಂಬರುವ ಏಪ್ರಿಲ್- ಮೇ ತಿಂಗಳಲ್ಲಿ ಜರುಗಬಹುದಾದ ಈ ಕದನಕ್ಕೆ ಈಗಾಗಲೇ ತಯಾರಿ ಜೋರಾಗಿ ಸಾಗಿದೆ. ಅದರಲ್ಲೂ ಈ ಬಾರಿ ಹಣ ಬಲವೇ ಪ್ರಮುಖ ಪಾತ್ರ ವಹಿಸಲಿದೆ ಎಂಬ ಸುಳಿವುಗಳು ಈಗಾಗಲೇ ಗೋಚರಿಸುತ್ತಿವೆ.

ಕಳೆದ ವರ್ಷದ ಜನವರಿಯಲ್ಲಿ ಚುನಾವಣೆ ಆಯೋಗವು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ವ್ಯಯ ಮಾಡಬಹುದಾದ ಗರಿಷ್ಠ ಹಣದ ಮಿತಿಯನ್ನು ದೊಡ್ಡ ರಾಜ್ಯಗಳಲ್ಲಿ 70 ಲಕ್ಷದಿಂದ 95 ಲಕ್ಷ ರೂಪಾಯಿಗೆ ಹಾಗೂ ಚಿಕ್ಕ ರಾಜ್ಯಗಳಲ್ಲಿ 54ರಿಂದ 75 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ. ಇದೇ ರೀತಿ ವಿಧಾನಸಭೆ ಚುನಾವಣೆಗಳಿಗೆ ಈ ಮಿತಿಯನ್ನು ದೊಡ್ಡ ರಾಜ್ಯಗಳಲ್ಲಿ 28 ಲಕ್ಷದಿಂದ 40 ಲಕ್ಷ ರೂಪಾಯಿಗಳಿಗೆ ಹಾಗೂ ಸಣ್ಣ ರಾಜ್ಯಗಳಲ್ಲಿ 20 ಲಕ್ಷದಿಂದ 28 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಕರ್ನಾಟಕವು ದೊಡ್ಡ ರಾಜ್ಯಗಳ ಪಟ್ಟಿಗೆ ಸೇರುವುದರಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಚುನಾವಣೆ ವೆಚ್ಚವಾಗಿ ಗರಿಷ್ಠ 40 ಲಕ್ಷ ರೂಪಾಯಿಯವರೆಗೆ ಕಾನೂನುಬದ್ಧವಾಗಿ ವ್ಯಯಿಸಲು ಅವಕಾಶವಿದೆ. ರಾಜಕೀಯ ಪಕ್ಷಗಳಿಂದ ಬೇಡಿಕೆ, 2014ರಲ್ಲಿದ್ದ 83.4 ಕೋಟಿ ಮತದಾರರು ಸಂಖ್ಯೆಯು 2021ರಲ್ಲಿ 93.6 ಕೋಟಿಗೆ ಹೆಚ್ಚಳ, ಹಣದುಬ್ಬರ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಮಿತಿಯನ್ನು ಹೆಚ್ಚಳ ಮಾಡಿದ್ದಾಗಿ ಚುನಾವಣೆ ಆಯೋಗ ಹೇಳಿದೆ.

ಆದರೆ, ಆಯೋಗ ನಿಗದಿಪಡಿಸುವ ವೆಚ್ಚದ ಮಿತಿಗೂ ಅಭ್ಯರ್ಥಿಗಳು ಚುನಾವಣೆಯಲ್ಲಿ ಮಾಡುವ ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಗುಟ್ಟು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಂತೂ ಕಾಂಚಾಣ ಕುಣಿತ ಮಿತಿಮೀರುವ ಲಕ್ಷಣಗಳು ಈಗಿನಿಂದಲೇ ಕಂಡುಬರುತ್ತಿವೆ. ಸದ್ಯದ ಅಂದಾಜಿನ ಪ್ರಕಾರ ಮೂರೂ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಒಂದೊಂದು ಹೈವೋಲ್ಟೇಜ್ ಕ್ಷೇತ್ರಗಳಲ್ಲೂ ಒಟ್ಟಾರೆ ಚುನಾವಣಾ ವೆಚ್ಚ 70-80 ಕೋಟಿ ರೂ. ದಾಟುವ ಸೂಚನೆ ಕಂಡುಬರುತ್ತಿದೆ. ಚುನಾವಣಾ ದಿನಾಂಕ ಘೋಷಣೆಯಾಗಿ ಅಧಿಸೂಚನೆ ಹೊರಡುವ ಮುನ್ನವೇ ಎಲ್ಲ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಮತದಾರರಿಗೆ ಚಿನ್ನ, ಬೆಳ್ಳಿ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಡೈನಿಂಗ್ ಟೇಬಲ್​ನಂಥ ದುಬಾರಿ ಗಿಫ್ಟ್​ಗಳಿಂದ ಧಾರ್ವಿುಕ ಕ್ಷೇತ್ರಗಳಿಗೆ ಪ್ರವಾಸದವರೆಗೆ ನಾನಾ ತರಹದ ಆಮಿಷ ಒಡ್ಡುತ್ತಿರುವುದು ಕಂಡುಬರುತ್ತಿದೆ. ಚುನಾವಣೆ ಸಲುವಾಗಿ ಅಭ್ಯರ್ಥಿಗಳು, ಪಕ್ಷಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾಡುತ್ತಿರುವ, ಮುಂದೆ ಮಾಡಬಹುದಾದ ಖರ್ಚು-ವೆಚ್ಚಗಳನ್ನು ಗಮನಿಸಿದರೆ, ಈ ಬಾರಿ ಒಟ್ಟಾರೆ ವಹಿವಾಟು 10 ಸಾವಿರ ಕೋಟಿ ರೂ. ದಾಟಿದರೂ ಅಚ್ಚರಿಯಿಲ್ಲ ಎಂಬ ಅಂದಾಜಿದೆ.

ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣ ಸಾಗಣೆ ತಡೆಗಟ್ಟಲು, ಬೇರೆಬೇರೆ ರೀತಿಯ ಅಕ್ರಮಗಳನ್ನು ಮಟ್ಟಹಾಕಲು ಚುನಾವಣಾ ಆಯೋಗ ಹಾಗೂ ಇತರ ಕಾನೂನು ಪಾಲಕ ಸಂಸ್ಥೆಗಳು ಗಟ್ಟಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಚುನಾವಣಾ ಆಯೋಗವು ತನಗಿರುವ ಕಾನೂನು ಬಲ ಹಾಗೂ ಮಹತ್ವವನ್ನು ಸದುಪಯೋಗಪಡಿಸಿಕೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದರೂ ಅಭ್ಯರ್ಥಿಗಳು ಮಿತಿಮೀರಿ ಹಣ ಖರ್ಚು ಮಾಡುವುದನ್ನು ತಡೆಗಟ್ಟುವುದು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವದ ಅಡಿಪಾಯವಾದ ಚುನಾವಣೆಯಲ್ಲಿ ಹಣವನ್ನು ನೀರಿನಂತೆ ಹರಿಸಿ ಜನಪ್ರತಿನಿಧಿಗಳು ಆಯ್ಕೆಯಾದರೆ ಅವರೂ ಮುಂದೆ ಭ್ರಷ್ಟಚಾರದಲ್ಲಿ ತೊಡಗಿ ಹಣ ಬಾಚಿಕೊಳ್ಳುವುದು ನಿಶ್ಚಿತ. ಭಾರತದಲ್ಲಿ ಮತದಾನ ಕಡ್ಡಾಯವಲ್ಲ. ಹೀಗಾಗಿ, ಅನೇಕರು, ಅದರಲ್ಲೂ ವಿದ್ಯಾವಂತರು ಸಾಕಷ್ಟು ಸಂಖ್ಯೆಯಲ್ಲಿ ಮತದಾನದಿಂದ ದೂರ ಉಳಿಯುತ್ತಾರೆ. ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿಗೂ ಮತ ಚಲಾಯಿಸುವ ಮನಸ್ಸಿಲ್ಲದಿದ್ದರೂ ಈಗ ನೋಟಾಗೆ ಮತ ಹಾಕಲು ಅವಕಾಶವಿದೆ. ಹೀಗಾಗಿ, ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಂಡು, ಸೂಕ್ತ ಹಾಗೂ ಪ್ರಾಮಾಣಿಕ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮಹತ್ತರ ಅಧಿಕಾರ ಹಾಗೂ ಜವಾಬ್ದಾರಿಯು ಮತದಾರರ ಮೇಲೂ ಇದೆ.