ಕರ್ನಾಟಕ ಗೃಹ ಮಂಡಳಿಯ (ಕೆಎಚ್ಬಿ) 18 ಯೋಜನೆಗಳು ದೀರ್ಘಾವಧಿ ವ್ಯಾಜ್ಯದಿಂದ ಮುಕ್ತವಾಗಿವೆ. ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಮಗಳೂರು, ಉಡುಪಿ ಸೇರಿ ಹಲವು ಜಿಲ್ಲೆಗಳಿಗೆ ಸೇರಿದ 18 ಯೋಜನೆಗಳ 103 ಪ್ರಕರಣಗಳು ಇತ್ಯರ್ಥವಾಗಿದ್ದು, 600 ಎಕರೆ ಜಮೀನು ವಸತಿ ಬಡಾವಣೆ ಅಭಿವೃದ್ಧಿಗೆ ಲಭ್ಯವಾಗಿದೆ. ಇದರಿಂದ 7,000 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಫೆಬ್ರವರಿ ವೇಳೆಗೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ರಾಜ್ಯದಲ್ಲಿ 50 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ವರ್ಷಾಂತ್ಯದೊಳಗೆ ಹಂಚುವುದು ಮಂಡಳಿ ಗುರಿಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿರುವುದು ಸರ್ಕಾರಿ ನಿವೇಶನದ ಕನಸು ಕಾಣುವ ಸಾರ್ವಜನಿಕರಲ್ಲಿ ನಿರೀಕ್ಷೆಗಳು ಗರಿಗೆದರಲು ಕಾರಣವಾಗಬಹುದಾಗಿದೆ.
ಭೂ ಸ್ವಾಧೀನ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೊಸ ಬಡಾವಣೆ ನಿರ್ಮಾಣ ಮಾಡದಿರಲು ಗೃಹ ಮಂಡಳಿ ತೀರ್ವನಿಸಿದೆ ಎಂದು ಸಚಿವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಬಡಾವಣೆ ನಿರ್ವಣಕ್ಕೆ ಅಗತ್ಯ ಜಮೀನು ಸಿಗುತ್ತಿಲ್ಲ. ಜತೆಗೆ, ಭೂಮಿ ದರ ಹೆಚ್ಚಳಗೊಂಡಿದೆ. ಹೀಗಾಗಿ, ಗೃಹ ಮಂಡಳಿ ವತಿಯಿಂದ ಬಡಾವಣೆ ರಚನೆ ಕಷ್ಟ. ಆದರೆ, ಕನಿಷ್ಠ 50 ಎಕರೆ ಜಮೀನು ಇರುವ ಮಾಲಿಕರು ಮುಂದೆ ಬಂದರೆ ಖಾಸಗಿ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುವುದು. ನಗರ ಪ್ರದೇಶದಲ್ಲಿ ಶೇ.50:50, ಗ್ರಾಮೀಣ ಭಾಗದಲ್ಲಿ ಶೇ. 60:40 ಅನುಪಾತದ ಆಧಾರದಲ್ಲಿ ಬಡಾವಣೆ ನಿರ್ವಿುಸಲಾಗುವುದು ಎಂದು ತಿಳಿಸಿದ್ದರು.
1956ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿ ನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962ರ ಮೇರೆಗೆ ಮರುನಾಮಕರಣಗೊಂಡಿತು. ಕೆಎಚ್ಬಿಯ ಮೂಲ ಉದ್ದೇಶವೇ ವಸತಿ ಯೋಜನೆಗಳನ್ನು ರೂಪಿಸುವುದು; ಕೈಗೆಟುಕುವ ಬೆಲೆಯಲ್ಲಿ ನಿವೇಶನ ಹಾಗೂ ಮನೆಗಳನ್ನು ಸಾರ್ವಜನಿಕರಿಗೆ ಒದಗಿಸುವುದಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಉದ್ದೇಶ ಕಾರ್ಯಗತಗೊಳಿಸುವಲ್ಲಿ ಹಲವಾರು ಅಡಚಣೆಗಳು ತಲೆದೋರುತ್ತಿವೆ. ಕೆಎಚ್ಬಿಗೆ ಜಮೀನು ಕೊಡಲು ರೈತರು ಮನಸ್ಸು ಮಾಡುತ್ತಿಲ್ಲ. ಒಂದು ವೇಳೆ ಒಪ್ಪಿದರೂ ಹೆಚ್ಚಿನ ಬೆಲೆ ಕೇಳುತ್ತಿದ್ದಾರೆ. ಕೋರ್ಟ್ ವ್ಯಾಜ್ಯ, ಕೆಂಪು ಪಟ್ಟಿ, ಸಿಬ್ಬಂದಿಯ ಅದಕ್ಷತೆ ಮುಂತಾದ ಕಾರಣಗಳಿಂದಾಗಿ ಕೂಡ ಈ ಹಿಂದೆ ಕೈಗೆತ್ತಿಕೊಂಡ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಕಂಡುಬರುತ್ತಿದೆ.
ಕೆಎಚ್ಬಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಮೂಲಸೌಕರ್ಯಗಳನ್ನು ಸೂಕ್ತವಾಗಿ ಒದಗಿಸುತ್ತಿಲ್ಲ ಹಾಗೂ ಕಾಮಗಾರಿಗಳು ಕಳಪೆ ಆಗಿವೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿರುತ್ತವೆ. ಬೆಂಗಳೂರಿನ ಬಂಡೇಮಠ ಕೆಎಚ್ಬಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕೆಂದು ಅಲ್ಲಿಯ ನಿವಾಸಿಗಳು ಇತ್ತೀಚೆಗೆ ಪ್ರತಿಭಟನೆ ಕೈಗೊಂಡಿದ್ದು ಇದಕ್ಕೊಂದು ಉದಾಹರಣೆ ಮಾತ್ರ.
ಇಂತಹ ಆರೋಪಗಳು ಏನೇ ಇದ್ದರೂ, ಖಾಸಗಿಯವರು ಅಭಿವೃದ್ಧಿಪಡಿಸುವ ನಿವೇಶನಗಳಿಗೆ ಹೋಲಿಸಿದರೆ, ಕೆಎಚ್ಬಿ ಬಡಾವಣೆಯ ದರ ಕಡಿಮೆ ಇರುತ್ತದೆ. ಖರೀದಿಯಲ್ಲಿ ಪಾರದರ್ಶಕತೆ ಇರುವುದರಿಂದ ಸಾಲ ಸೌಲಭ್ಯವೂ ದೊರೆಯುತ್ತದೆ. ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದಿಲ್ಲ ಎಂಬ ವಿಶ್ವಾಸದ ಮೇಲೆ ಸಾರ್ವಜನಿಕರು ಕೆಎಚ್ಬಿ ನಿವೇಶನಗಳನ್ನು ಬಯಸುತ್ತಾರೆ. ಆದರೆ ಖಾಸಗಿ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಅಥವಾ ಕಾರ್ಯಸಾಧು ಎಂಬ ಪ್ರಶ್ನೆ ಇದ್ದೇ ಇದೆ. ಹೀಗಾಗಿ ಜನರ ನಿರೀಕ್ಷೆಗೆ ತಕ್ಕಂತೆ ಇನ್ನಷ್ಟು ವಸತಿ ಯೋಜನೆಗಳನ್ನು ರೂಪಿಸುವ ಸವಾಲು ಮಂಡಳಿ ಮುಂದಿದೆ.