ರಾಜ್ಯದಲ್ಲಿ ಭಿಕ್ಷಾಟನೆಯ ಹೆಸರಿನಲ್ಲಿ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಲೇ ಇತ್ತು. ಆದರೂ, ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟವರು ತಲೆ ಕೆಡಿಸಿಕೊಂಡಿರಲಿಲ್ಲ. ಭಿಕ್ಷಾಟನೆಯೇ ಸಮಾಜಕ್ಕೆ ಶಾಪ. ಈ ಪಿಡುಗು ನಿವಾರಿಸಬೇಕು ಎಂಬ ಆಗ್ರಹ ಹಲವು ದಶಕಗಳಿಂದಲೂ ಇದೆ. ಈಗಂತೂ, ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರು ಏನೂ ಅರಿಯದ ಮುಗ್ಧ ಕಂದಮ್ಮಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ದಾರುಣ ಸಂಗತಿ ವಿಜಯವಾಣಿ ತನಿಖೆ ಮೂಲಕ ಬೆಳಕಿಗೆ ಬಂದಿದೆ. ತೀವ್ರ ಬಡತನ, ಹಸಿವನ್ನೇ ಇದಕ್ಕೆ ಬಂಡವಾಳವಾಗಿಸಿಕೊಳ್ಳುತ್ತಿರುವ ಜಾಲಗಳು ಅಮಾನವೀಯ ಕೃತ್ಯಕ್ಕೆ ಕೈಹಾಕಿರುವುದು ದುರ್ದೈವದ ಸಂಗತಿ.
ಕಂದಮ್ಮಗಳನ್ನು ನೂರು, ಇನ್ನೂರು ರೂಪಾಯಿಗೆ ಬಾಡಿಗೆಗೆ ತಂದು ನಿದ್ರೆ ಮಾತ್ರೆ ಹಾಕಿ ಹಸಿವನ್ನು ಮರೆಸಿ, ಬೀದಿ, ಬೀದಿ ಸುತ್ತಿ ಭಿಕ್ಷೆ ಬೇಡುವ ಜಾಲ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಪ್ರಸಕ್ತ ಇಂಥದ್ದೇ ಜಾಲ ಬಳ್ಳಾರಿ ಜಿಲ್ಲೆ ಸಿರಿಗೆರೆಯಲ್ಲೂ ಪತ್ತೆಯಾಗಿದೆ. ಮಕ್ಕಳನ್ನು ಪಾಳಿ ಆಧಾರದಲ್ಲಿ ಬಾಡಿಗೆ ಪಡೆದು ಭಿಕ್ಷಾಟನೆಗೆ ಇಳಿಯುವ ಮಹಿಳೆಯರು ಹಸುಗೂಸುಗಳಿಗೆ ನಿದ್ರೆಮಾತ್ರೆ ಅಥವಾ ಇಂಜೆಕ್ಷನ್ ನೀಡಿ ಮಲಗಿಸಿ ಕಂಕುಳಲ್ಲಿ ಹೊತ್ತು ಹಣ ಮಾಡುತ್ತಾರೆ. ಆ ಮಕ್ಕಳ ಆರೋಗ್ಯದ ಗತಿ ಏನು? ಅವುಗಳ ಭವಿಷ್ಯವೇನು? ಅವುಗಳ ಬಾಲ್ಯ ಕಿತ್ತುಕೊಳ್ಳುತ್ತಿರುವ ಧಾಷ್ಟ್ಯಕ್ಕೆ ಏನೆನ್ನಬೇಕು? ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪೈಕಿ ಹೆಚ್ಚಿನವರನ್ನು ಭಿಕ್ಷಾಟನೆಗೆ ಬಳಸಿದ/ಬಳಸುತ್ತಿರುವ ಅನುಮಾನಗಳೂ ಇವೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡಲ್ಲಿ ಹೆಚ್ಚಿನ ಸಂಗತಿಗಳು ಅನಾವರಣಗೊಳ್ಳಬಹುದು.
ರಾಜಧಾನಿ ಬೆಂಗಳೂರಿನಲ್ಲಂತೂ ಇಂಥ ಹಲವು ಜಾಲಗಳು ಸಕ್ರಿಯವಾಗಿವೆ. ಟ್ರಾಫಿಕ್ ಸಿಗ್ನಲ್, ದೇವಸ್ಥಾನ ಮತ್ತು ರೈಲು, ಬಸ್ ನಿಲ್ದಾಣಗಳಲ್ಲಿ ರಸ್ತೆಗಳಲ್ಲಿ ಮಕ್ಕಳನ್ನು ಸರಗಿನಲ್ಲಿ ಬಚ್ಚಿಟ್ಟುಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇತ್ತೀಚೆಗೆ ಪಶ್ಚಿಮ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 57 ಭಿಕ್ಷುಕರನ್ನು ರಕ್ಷಣೆ ಮಾಡಿ ಭಿಕ್ಷುಕರ ಪುನರ್ ವಸತಿ ಕೇಂದ್ರಗಳಿಗೆ ಬಿಟ್ಟಿದ್ದಾರೆ. ಅನುಮಾನ ಬಂದಿರುವ ಭಿಕ್ಷುಕರ ಪೂರ್ವಾಪರದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ. ಅಲ್ಲದೆ, ಆರೋಗ್ಯವಂತರಾಗಿರುವ ಮಕ್ಕಳ ಅಂಗಊನ ಮಾಡಿ, ಅದನ್ನೇ ದಾಳವಾಗಿಸಿಕೊಂಡು ಭಿಕ್ಷೆ ಕೇಳುವ ಜನರೂ ಇದ್ದಾರೆ.
ಸಿರಿಗೇರೆ ಘಟನೆಯನ್ನು ಪ್ರಸ್ತಾಪಿಸಿ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಮುಂದೆಂದೂ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದಿದ್ದಾರೆ. ಆದರೆ, ಇದು ಬರೀ ಆಶ್ವಾಸನೆಯಾಗಿ ಉಳಿಯದೆ, ಅನುಷ್ಠಾನಕ್ಕೆ ಬಂದಾಗ ಮಾತ್ರ ಸಮಸ್ಯೆಯ ಪರಿಹಾರ ಸಾಧ್ಯ. ಬಡತನ ಎಂಬುದು ಘೋರ ಸಮಸ್ಯೆಯೇನೋ ನಿಜ. ಆದರೆ, ಅದರಿಂದ ಹೊರಬರಲು, ಘನತೆಯಿಂದ ಸಮಾಜದಲ್ಲಿ ಬದುಕಲು ನೂರೆಂಟು ದಾರಿಗಳಿವೆ ಎಂಬುದನ್ನು ಭಿಕ್ಷಾಟನೆಯ ಇಂಥ ಜಾಲಗಳು ಅರ್ಥಮಾಡಿಕೊಳ್ಳಬೇಕು.