ನ್ಯೂಸ್

ಅವ್ಯವಹಾರ ನಿಯಂತ್ರಿಸಿ, ಸೂಕ್ತ ತನಿಖೆ ನಡೆಯಲಿ..

Webdesk - Ravikanth

ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶೈಕ್ಷಣಿಕ ವ್ಯವಸ್ಥೆಯ ಪಾತ್ರ ಪ್ರಮುಖ. ಶೈಕ್ಷಣಿಕ ರಂಗದ ಸುಧಾರಣೆಗಳು, ಬದಲಾವಣೆಗಳು ನೈತಿಕವೃದ್ಧಿಗೂ ನಾಂದಿಯಾಗಬೇಕು. ಈ ಆಶಯದತ್ತ ಸಾಗುವಾಗ ಹಲವು ಅಡ್ಡಿ-ಆತಂಕಗಳು ಎದುರಾಗುವುದು ಸಹಜವಾದರೂ, ಅವುಗಳನ್ನು ನಿವಾರಿಸಿ, ಸುಧಾರಣೆ ನಿಟ್ಟಿನಲ್ಲಿ ಮುಂದಡಿ ಇಡುವುದು ಪ್ರಭುತ್ವದ ಕರ್ತವ್ಯ. ಈ ಬದ್ಧತೆಯ ಬಗ್ಗೆ ಒಂದಿಷ್ಟು ನಿರ್ಲಕ್ಷ್ಯ ವಹಿಸಿದರೂ ಹಲವು ಬಗೆಯ ಸಮಸ್ಯೆಗಳು ಎದುರಾಗಿ, ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ಕೊಡುತ್ತವೆ. ರಾಜ್ಯದಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡುವಲ್ಲಿ ನಡೆದಿದೆ ಎನ್ನಲಾದ ಹಗರಣ ಈಗ ಭಾರಿ ಚರ್ಚೆ ಹುಟ್ಟುಹಾಕಿದೆ. ಮಾತ್ರವಲ್ಲ, ವಿಧಾನ ಪರಿಷತ್​ನಲ್ಲಿ ಕೋಲಾಹಲ, ಧರಣಿಯೂ ನಡೆದಿದೆ. ಆಡಳಿತ ಪಕ್ಷದ ಸದಸ್ಯರೇ ದನಿ ಎತ್ತರಿಸಿ, ಗಮನ ಸೆಳೆದಿರುವುದರಿಂದ ಈ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದೆ.

‘ಮೂಲಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆ ಮಧ್ಯೆ ರಾಜ್ಯದಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲಾಗಿದೆ’ ಎಂದು ಬಿಜೆಪಿಯ ಎನ್.ರವಿಕುಮಾರ್ ಗುರುವಾರ ವಿಧಾನ ಪರಿಷತ್ತಿನಲ್ಲಿ ಗಂಭೀರ ಆರೋಪ ಮಾಡಿದರು. ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಉತ್ತರ ನೀಡಿ, ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸುವುದಾಗಿ ಭರವಸೆ ನೀಡಿದರಾದರೂ, ಜೆಡಿಎಸ್ ಸದಸ್ಯರು ಸದನ ಸಮಿತಿ ರಚಿಸುವಂತೆ ಆಗ್ರಹಿಸಿದರು. ಶುಕ್ರವಾರವೂ ಇದೇ ಬೇಡಿಕೆ ಮುಂದಿಟ್ಟು, ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ಸಂಬಂಧಿತ ಕಾಲೇಜುಗಳಿಗೆ ಅನುಮತಿ ನೀಡುವಲ್ಲಿ ಇಂಥ ಗಂಭೀರ ಲೋಪವಾಗಿದ್ದಾದರೂ ಏಕೆ? ಕೆಲವೆಡೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಲ್ಲ. ಕಾಲೇಜ್ ಕಟ್ಟಡಗಳು ಇಲ್ಲ. ಬೇರೆ ರಾಜ್ಯದಿಂದ ಪರೀಕ್ಷೆ ಬರೆಯಲು ಮಾತ್ರ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೀಗಿದ್ದರೂ ಸಂಬಂಧಿತ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದ್ದು ಏಕೆ? ಇಂಥ ಕಾಲೇಜುಗಳ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತೋರುವ ಕಳಪೆ ನಿರ್ವಹಣೆಗೆ ಯಾರು ಹೊಣೆ? ಅಷ್ಟಕ್ಕೂ, ಈ ಸಮಸ್ಯೆ ಬರೀ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಸೀಮಿತವಾಗಿಲ್ಲ. ಹಲವು ವಿಷಯ, ವಿಭಾಗದ ಕಾಲೇಜುಗಳು ಬರೀ ಹಣ ಮಾಡಲೆಂದೆ ತಲೆ ಎತ್ತಿರುವುದು ರಹಸ್ಯವೇನಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿ.ಇಡಿ. ಕಾಲೇಜ್​ಗಳು ಹೀಗೆ ಅವ್ಯವಸ್ಥೆಯಿಂದ ಕೂಡಿವೆ. ದೂರದ ಊರಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಅವರಿಗೆ ಸರಿಯಾಗಿ ತರಗತಿ ನಡೆಸದೆ, ಕೇವಲ ಪರೀಕ್ಷೆ ನಡೆಸಿ ಕೈತೊಳೆದುಕೊಳ್ಳುವ ಕಾಲೇಜುಗಳಿಗೆ ಕೊರತೆಯೇನಿಲ್ಲ.

ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡುವಲ್ಲಿ ನಡೆದಿರುವ ಲೋಪವನ್ನು ಆಡಳಿತ ಪಕ್ಷದವರೇ ಎತ್ತಿ ತೋರಿಸಿರುವುದರಿಂದ, ಸರ್ಕಾರ ಬರೀ ಹೇಳಿಕೆ ಅಥವಾ ಆಶ್ವಾಸನೆಗೆ ಸೀಮಿತವಾಗಬಾರದು. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ, ಪರಿಹಾರಕ್ಕೆ ಮುಂದಾಗಬೇಕು. ಈ ಕಾಲೇಜುಗಳಿಗೆ ನಿಯಮಾನುಸಾರವೇ ಅನುಮತಿ ನೀಡಲಾಗಿದೆ ಎಂದಾದರೆ, ಸದನ ಸಮಿತಿ ಮೂಲಕ ತನಿಖೆ, ಪರಿಶೀಲನೆಗೆ ಸರ್ಕಾರ ಹಿಂದೇಟು ಹಾಕುತ್ತಿರುವುದಾದರೂ ಏಕೆ? ಅವ್ಯವಹಾರಗಳಿಗೆ ಕಡಿವಾಣ ಹಾಕುವುದು ಮೊದಲ ಆದ್ಯತೆಯಾಗಲಿ.