ನ್ಯೂಸ್

ಹೂಳು ನಿವಾರಣೆಗೊಂದು ಹಾದಿ; ಹೆದ್ದಾರಿ ಕಾಮಗಾರಿಗಳಿಗೆ ಕೆರೆಗಳ ಮಣ್ಣು ಬಳಕೆ

ಕೆರೆ ಹಾಗೂ ಸರೋವರಗಳ ಹೂಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಳಸಿಕೊಳ್ಳಲು ರಾಜ್ಯ ಸರ್ಕಾರವು ಮುಂದಾಗಿರುವುದು ಗಮನಾರ್ಹ. ಹೆದ್ದಾರಿಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ, ಬೆಂಗಳೂರು ನಗರ ಜಿಲ್ಲೆಯ 28 ಕೆರೆ ಸೇರಿದಂತೆ ರಾಜ್ಯದಲ್ಲಿನ 1038 ಕೆರೆಗಳನ್ನು ಇದಕ್ಕಾಗಿ ಸರ್ಕಾರ ಗುರುತಿಸಿದೆ. ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವೂ ಸಹಯೋಗ ನೀಡಲು ಮುಂದಾಗಿದೆ. ಪ್ರಸ್ತುತ ಮಳೆಗಾಲದ ಆರಂಭದಲ್ಲಿಯೇ ರಾಜ್ಯದಲ್ಲಿನ ಸಾಕಷ್ಟು ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಈ ರೀತಿ ಬೇಗನೆ ಭರ್ತಿಯಾಗಲು ಪ್ರಮುಖ ಕಾರಣ ಇವುಗಳಲ್ಲಿ ಸಾಕಷ್ಟು ಹೂಳು ತುಂಬಿರುವುದು. ಹೂಳನ್ನು ತೆಗೆಯುವುದು ಹಣಕಾಸು ಹಾಗೂ ಮಾನವ ಸಂಪನ್ಮೂಲ ಅಗತ್ಯವಿರುವ ದುಸ್ತರ ಕಾರ್ಯವೇ ಆಗಿದೆ. ಇಂತಹ ಸವಾಲಿನ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ನಿರ್ವಣದ ಜತೆ ಜೋಡಿಸಿರುವುದು ವಿಶೇಷ.

ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಬೇಕೆಬೇಕು. ಸುತ್ತಮುತ್ತಲ ಕೆರೆಗಳಲ್ಲಿ ಹೂಳು ತೆಗೆಯುವುದರಿಂದ ಲಭಿಸುವ ಮಣ್ಣನ್ನು ಬಳಸಿಕೊಂಡಲ್ಲಿ ಹಲವು ಅನುಕೂಲಗಳಿವೆ. ಕೆರೆಗಳಲ್ಲಿ ನೀರು ಭರ್ತಿಯಾಗಲು ಅನುವಾಗುತ್ತದೆ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಿ ಕೆರೆ ಸುತ್ತಮುತ್ತಲಿನ ಬಾವಿ, ಕೊಳವೆ ಬಾವಿಗಳು ರಿಚಾರ್ಜ್ ಆಗುತ್ತವೆ. ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಹೆದ್ದಾರಿ ನಿರ್ವಣಕ್ಕೆ ನೂರಾರು ಕೋಟಿ ರೂಪಾಯಿ ವ್ಯಯ ಮಾಡುವುದರಿಂದ ಕೆರೆ ಹೂಳೆತ್ತುವ ಕೆಲಸವು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಲಿಕ್ಕಿಲ್ಲ. ಹೂಳೆತ್ತುವ ಈ ಕಾರ್ಯಕ್ರಮವನ್ನು ನರೇಗಾದಂತಹ ಉದ್ಯೋಗ ಖಾತ್ರಿ ಯೋಜನೆಗಳಿಗೆ ಜೋಡಿಸಿದರೆ ಕೆಲಸ ಒದಗಿಸಲು ಕೂಡ ಸಾಧ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಕೆರೆ ಒಣಗಿದ ಸಂದರ್ಭದಲ್ಲಿ ಅದರ ಮಣ್ಣನ್ನು ತೆಗೆದು ಜಮೀನುಗಳಿಗೆ ಹಾಕುವ ಪರಂಪರೆ ನಮ್ಮ ನಾಡಿನಲ್ಲಿ ಮೊದಲಿನಿಂದಲೂ ಇದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆಗಳ ಹೂಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ಕೆರೆಯ ಹೂಳಾಗಿರುವ ಮಣ್ಣು ಫಲವತ್ತಾಗಿರುವುದರಿಂದ ರೈತರೇ ಸ್ವತಃ ಈ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಹೊಲಗಳಿಗೆ ಮಣ್ಣನ್ನು ತೆಗೆದುಕೊಂಡು ಹೋಗುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿಯಂತಹ ಸಂಸ್ಥೆಗಳ ಪರಿಣತಿಯನ್ನು ಕೂಡ ಈ ಕಾರ್ಯದಲ್ಲಿ ಬಳಸಿಕೊಳ್ಳಬಹುದಾಗಿದೆ. ಕೆರೆ ಹಾಗೂ ಸರೋವರಗಳಿಗೆ ಹಾನಿಯಾಗದ ರೀತಿಯಲ್ಲಿ ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ವಿಶೇಷವಾಗಿ, ಸಮತಟ್ಟಾಗಿರುವಂತೆ ಹೂಳನ್ನು ಎತ್ತದಿದ್ದರೆ, ಕುಳಿಗಳು ನಿರ್ವಣವಾಗಿ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಕೆರೆ ಸಂರಕ್ಷಣೆಗೆ ಅಪಾಯವಾಗದಂತೆ ಲೋಕೋಪಯೋಗಿ ಇಲಾಖೆಯಿಂದ ವಿವರವಾದ ಮಾರ್ಗಸೂಚಿಗಳನ್ನು ಈಗಾಗಲೆ ಹೊರಡಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿರುವುದು ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆ ಕೈಗೊಳ್ಳಲಾಗಿದೆ ಎಂಬುದರ ಸೂಚಕವಾಗಿದೆ. ಜತೆಗೆ, ಹೂಳು ಬಳಸುವಾಗ ಹೆದ್ದಾರಿ ಗುಣಮಟ್ಟ ಬಗ್ಗೆ ವಿಶೇಷ ಗಮನ ಅಗತ್ಯವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.